×
Ad

ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ʼಈದುಲ್ ಅಝ್‌ಹಾʼ ಆಚರಣೆ

Update: 2026-05-28 11:01 IST

ಉಡುಪಿ: ಜಿಲ್ಲೆಯಾದ್ಯಂತ ಬಕ್ರೀದ್ (ಈದುಲ್ ಅಝ್‌ಹಾ)ವನ್ನು ಸಂಭ್ರಮ, ಸಡಗರದಿಂದ ಗುರುವಾರ ಆಚರಿಸಿದರು.

ಉಡುಪಿ ನಗರ, ಕಾಪು, ಬ್ರಹ್ಮಾವರ ಕುಂದಾಪುರ, ಬೈಂದೂರು ಹೆಬ್ರಿ, ಕಾರ್ಕಳ ತಾಲೂಕುಗಳ ಎಲ್ಲ ಮಸೀದಿಗಳಲ್ಲಿ ವಿಶೇಷ ಈದ್ ನಮಾಝ್ ನೆರವೇರಿಸಲಾಯಿತು.

ಮುಸ್ಲಿಂ ಬಾಂಧವರು ಬೆಳಗ್ಗೆ ಹೊಸ ಬಟ್ಟೆ ಧರಿಸಿ ಮಸೀದಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಕೆಲವು ಮಸೀದಿಗಳಲ್ಲಿ ಮಹಿಳೆಯರಿಗೂ ಈದ್ ನಮಾಝ್ ನಿರ್ವಹಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ನಮಾಝ್ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಉಡುಪಿ ಜಾಮೀಯ ಮಸೀದಿಯಲ್ಲಿ ಮೌಲಾನಾ ಅಬ್ದುರ‌್ರಶೀದ್ ನದ್ವಿ ನೇತೃತ್ವದಲ್ಲಿ ಮತ್ತು ಉಡುಪಿ ಅಂಜುಮಾನ್ ಮಸೀದಿಯಲ್ಲಿ ಮೌಲಾನ ಇನಾಯುತುಲ್ಲಾ ರಝ್ವಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಲಾಯಿತು.

ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯಲ್ಲಿ ಖತೀಬ್ ಹಾಫಿಲ್ ಮುಹಮ್ಮದ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ಈದ್ ವಿಶೇಷ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು. ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಪೂರ್ ಈದ್ ನಮಾಝ್ ನಲ್ಲಿ ಪಾಲ್ಗೊಂಡರು.

ಕುಂದಾಪುರ ಜುಮಾ ಮಸೀದಿಯಿಂದ ಬೆಳಗ್ಗೆ ಈದ್ ಮೆರವಣಿಗೆ ಹೊರಟು, ಕುಂದಾಪುರ ಈದ್ಗಾ ಮೈದಾನದಲ್ಲಿ ಈದ್ ವಿಶೇಷ ನಮಾಝ್ ನೆರವೇರಿಸಲಾಯಿತು. ಬ್ರಹ್ಮಗಿರಿ ನಾಯರ್‌ಕೆರೆಯ ಹಾಶಿಮಿ ಮಸೀದಿಯ ಇಮಾಮ್ ಒಬೇದುರ‌್ರಹ್ಮಾನ್ ನದ್ವಿ ಈದ್ ವಿಶೇಷ ನಮಾಝ್ ನಿರ್ವಹಿಸಲಾಯಿತು.

ಧರ್ಮ ಗುರುಗಳು ತಮ್ಮ ಈದ್ ಸಂದೇಶದಲ್ಲಿ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವ ಬಗ್ಗೆ ಒತ್ತಿ ಹೇಳಿದರು. ಯಾವುದೇ ಹಿತಕರ ಘಟನೆಗಳಿಗೆ ಅವಕಾಶ ನೀಡದೆ ಹಬ್ಬವನ್ನು ಸಂಭ್ರಮದಿಂದ ಆಚರಿಸುವಂತೆ ಕರೆ ನೀಡಿದರು.

ಈ ಸಂದರ್ಭ ಧರ್ಮಗುರುಗಳು ತಮ್ಮ ಈದ್ ಸಂದೇಶದಲ್ಲಿ ಯುವಜನತೆ ಮಾದಕ ವ್ಯಸನಗಳಿಗೆ ಬಲಿಯಾಗ ದಂತೆ ಜಾಗೃತಿ ಮೂಡಿಸಿದರು. ಅಲ್ಲದೆ ಎಲ್ಲರೂ ಪರಸ್ಪರ ಸಹೋದರಂತೆ ಬದುಕಿ ಶಾಂತಿಯ ವಾತಾವರಣ ನಿರ್ಮಿಸುವಂತೆ ಸೌಹಾರ್ದ ಸಂದೇಶ ನೀಡಿದರು.

ಹಬ್ಬದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ಬಹುತೇಕ ಮಸೀದಿಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

'ಹಬ್ಬ ಸೌಹಾರ್ದತೆಯ ಸಂಕೇತವಾಗಿರಬೇಕು'

ಉಡುಪಿ ಬ್ರಹ್ಮಗಿರಿಯ ಹಾಶಿಮಿ ಮಸೀದಿಯ ಇಮಾಮ್ ಮೌಲಾನಾ ಒಬೈದುರ್ ರಹ್ಮಾನ್ ನದ್ವಿ ತಮ್ಮ ಈದ್ ಸಂದೇಶದಲ್ಲಿ ಹಬ್ಬವು ಶಾಂತಿ ಸೌಹಾರ್ದತೆಯ ಸಂಕೇತವಾಗಿರಬೇಕು. ಈ ಮೂಲಕ ಮುಸ್ಲಿಂ ಬಾಂಧವರು ಮಾದರಿಯಾಗಿ ಹಬ್ಬವನ್ನು ಆಚರಿಸಬೇಕು ಎಂದು ಹೇಳಿದರು.

ಹೆಲ್ಮೆಟ್ ಹಾಗೂ ಲೈಸನ್ಸ್ ಇಲ್ಲದೆ ಅತಿವೇಗವಾಗಿ ದ್ವಿಚಕ್ರ ವಾಹನ ಹಾಗೂ ಕಾರು ಚಲಾಯಿಸುವ, ಅಲ್ಲದೆ ಮಾದಕ ದ್ರವ್ಯ ಸೇವಿಸುವ ಬಗ್ಗೆ ತಮ್ಮ ಮಕ್ಕಳ ಮೇಲೆ ಪೋಷಕರು ವಿಶೇಷ ಗಮನವಿಟ್ಟು ನಿಗಾ ವಹಿಸಬೇಕು. ಅಪಘಾತಗಳನ್ನು ತಪ್ಪಿಸಲು ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.

ಮಸೀದಿಯ ಅಧ್ಯಕ್ಷರರಾದ ಜಕ್ರಿಯ ಅಸ್ಸದಿ, ಸಾಮಾಜಿಕ ಕಾರ್ಯಕರ್ತ ಹಾಗೂ ಮಸೀದಿಯ ಕಾರ್ಯದರ್ಶಿ ಎಂ. ಇಕ್ಬಾಲ್ ಮನ್ನಾ ಅವರು ಈದ್ ಶುಭಾಶಯವನ್ನು ಸಲ್ಲಿಸಿದರು.







Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News