ಉಡುಪಿ, ಅ.6: ದೇಶದ ಸಾಂವಿಧಾನಿಕ ಸಂಸ್ಥೆ ಚುನಾವಣಾ ಆಯೋಗವನ್ನು ಕೇಂದ್ರ ಸರಕಾರ ಕೈಗೊಂಬೆಯಂತೆ ಬಳಸಿಕೊಂಡು ಮುಖ್ಯ ಆಯುಕ್ತ ಗ್ಯಾನೇಶ್ ಕುಮಾರ್ ಮೂಲಕ ಕ್ರಿಮಿನಲ್ ಕೆಲಸಗಳನ್ನು ಮಾಡಿಸುತ್ತಿದೆ. ಗ್ಯಾನೇಶ್ ಕುಮಾರ್ ಬಿಜೆಪಿಯ ಅಧಿಕಾರ ಭದ್ರಪಡಿಸಿ ಕೊಳ್ಳಲು ಕಾರ್ಯಾಂಗವನ್ನೇ ಕ್ರಿಮಿನಲ್ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದು ಪ್ರಜಾತಂತ್ರಕ್ಕೆ ಅಪಾಯಕಾರಿಯಾಗಿದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಕಲ್ಲಾಗರ್ ಆರೋಪಿಸಿದ್ದಾರೆ.

ದೇಶದ ಜನರ ಅಮೂಲ್ಯ ಮತದ ಹಕ್ಕುಗಳನ್ನು ಅನ್ಯಾಯವಾಗಿ ಕಿತ್ತುಕೊಂಡ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸಿ, ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು ಮತ್ತು ಎಸ್‌ಐಆರ್ ರದ್ದುಗೊಳಿಸಬೇಕೆಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ) ಉಡುಪಿ ವಲಯ ಸಮಿತಿಯ ವತಿಯಿಂದ ಮಂಗಳವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಧರಣಿಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಈ ದೇಶದಲ್ಲಿ ಎಲ್ಲರಿಗೂ ಒಂದೇ ಮತ ಎಂಬುದನ್ನು ಸಂವಿಧಾನ ನೀಡಿದೆ. ಈಗ ಅದನ್ನೇ ಬುಡಮೇಲು ಮಾಡುವ ಕೃತ್ಯವನ್ನು ಆಡಳಿತ ನಡೆಸುತ್ತಿರುವ ಮನುವಾದಿಗಳು ಮಾಡುತ್ತಿದ್ದಾರೆ. ದೆಹಲಿಯ ಗೃಹ ಸಚಿವಾಲಯದಿಂದ ಹಳ್ಳಿಯವರೆಗೂ ಈ ಅಪರಾಧೀಕರಣ ರೀತಿಯ ವರ್ತನೆ ನಡೆಯುತ್ತಿದೆ. ಕೇಂದ್ರ ಸರಕಾರದಿಂದ ಸ್ಥಳೀಯ ಬಿಜೆಪಿ ನಾಯಕರವರೆಗೆ ಫಾರಂ 7ಯನ್ನು ಸಲ್ಲಿಸಿ ಮತದಾರ ಹೆಸರನ್ನು ಡಿಲೀಟ್ ಮಾಡಲಾಗುತ್ತಿದೆ. ಈ ರೀತಿ ಅರ್ಜಿ ಸಲ್ಲಿಸಿದವರ ವಿರುದ್ಧ ಸರಕಾರ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದರು.

ಚುನಾವಣಾ ಮುಖ್ಯ ಆಯುಕ್ತರನ್ನು ರಕ್ಷಿಸಲು ಕೇಂದ್ರ ಸರಕಾರ ಕಾನೂನು ಜಾರಿಗೆ ತಂದಿದೆ. ಇದರಿಂದ ಅವರನ್ನು ಏನೂ ಮಾಡಲು ಸಾಧ್ಯ ಇಲ್ಲ ಎಂಬಂತೆ ವರ್ತಿಸಲಾಗುತ್ತಿದೆ. ಈ ಬೆಳವಣಿಗೆ ಪ್ರಜಾಪ್ರಪಭುತ್ವಕ್ಕೆ ಅಪಾಯ ಕಾರಿಯಾಗಿದೆ. ಈ ದೇಶದ ಕೆಲವೇ ಕೆಲವು ಮಂದಿಗೆ ಮಾತ್ರ ಹಕ್ಕುಗಳನ್ನು ಕೊಡುವ ಕಾನೂನು ಜಾರಿಗೆ ತರಲಾಗುತ್ತಿದೆ. ಇದರ ವಿರುದ್ಧ ಹೋರಾಟ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಸಿಪಿಐಎಂ ಉಡುಪಿ ವಲಯ ಸಮಿತಿ ಕಾರ್ಯದರ್ಶಿ ಶಶಿಧರ್ ಗೊಲ್ಲ ಮಾತನಾಡಿ, ಎಸ್‌ಐಆರ್ ಹಿಂದೆ ಕೇಂದ್ರ ಸರಕಾರ ರಾಜಕೀಯ ತಂತ್ರ ಅಡಗಿದೆ. ಸರಕಾರದ ಒತ್ತಡದಿಂದ ಇಂದು ಅಲ್ಪಸಂಖ್ಯಾತರು, ದಲಿತರು, ಬಡವರು, ಮಹಿಳೆಯರು ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಇವರ ಗುರಿ ಕೇವಲ ಅಲ್ಪಸಂಖ್ಯಾತರು ಮಾತ್ರವಲ್ಲ ಬಿಜೆಪಿ ಪ್ರಭಾವ ಇಲ್ಲದ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಿ ಚುನಾವಣೆ ಗೆಲ್ಲುವುದು ಇವರ ಹುನ್ನಾರವಾಗಿದೆ. ಈ ಮೂಲಕ ಶತಮಾನಗಳ ಕಾಲ ಕೋಮುವಾದಿ ಸರಕಾರ ಮುಂದುವರೆಸುವುದು ಇವರ ಯೋಜನೆಯಾಗಿದೆ ಎಂದು ದೂರಿದರು.

ಮತದಾನ ಎಂಬುದು ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬರ ಹಕ್ಕು ಆಗಿದೆ. ಆ ಹಕ್ಕನ್ನೇ ಕಸಿದು ಜನರನ್ನು ಗುಲಾಮಿಗಿರಿಗೆ ತೆಗೆದುಕೊಂಡು ಹೋಗುವ ಕಾರ್ಯವನ್ನು ಬಿಜೆಪಿ ಮಾಡುತ್ತಿದೆ. 2028ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಲು ಎಸ್‌ಐಆರ್‌ನ್ನು ಈಗ ದುರ್ಬಳಕೆ ಮಾಡುತ್ತಿದೆ. ಇದಕ್ಕೆ ಯಾವುದೇ ರೀತಿಯಲ್ಲೂ ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ಹೋರಾಟ ಮುಂದುವರೆಯುತ್ತದೆ ಎಂದು ಅವರು ತಿಳಿಸಿದರು.

ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಕವಿರಾಜ್ ಎಸ್.ಕಾಂಚನ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಧರಣಿಯಲ್ಲಿ ದಲಿತ ಹಕ್ಕುಗಳ ಸಮಿತಿಯ ಅಧ್ಯಕ್ಷ ಸಂಜೀವ ಬಳ್ಕೂರು, ಮುಖಂಡರಾದ ಚಂದ್ರಶೇಖರ ವಿ., ಉಮೇಶ್ ಕುಂದರ್, ನಳಿನಿ, ಸರೋಜ, ಪ್ರಭಾಕರ ಕುಂದರ್, ವಾಮನ ಪೂಜಾರಿ, ಸುಭಾಸ್ ಚಂದ್ರ ನಾಯಕ್, ಸುನೀತಾ ಶೆಟ್ಟಿ, ಬಲ್ಕೀಸ್, ಸುನಂದ, ರತ್ನ, ಲಲಿತ ಸುವರ್ಣ, ಸುನಂದ ಕುಕ್ಕಿಕಟ್ಟೆ, ವಸಂತಿ ಉಪಸ್ಥಿತರಿದ್ದರು.

‘ಕಾನೂನುಗಳನ್ನು ಅನುಷ್ಠಾನಕ್ಕೆ ತರುವ ಕಾರ್ಯಾಂಗವನ್ನೇ ಇಂದು ಅಪರಾಧೀಕರಣ ಮಾಡುವ ಕಾರ್ಯವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಕಾರ್ಯಾಂಗದ ಮೂಲಕ ಬಿಜೆಪಿ ತನ್ನ ಹಿಡೆನ್ ಅಜೆಂಡಾವನ್ನು ಜಾರಿ ತರುತ್ತಿದೆ. ದಲಿತರು, ಅಲ್ಪಸಂಖ್ಯಾತರ ಹೆಸರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡುವ ಕೃತ್ಯವನ್ನು ಫಾರಂ-7 ಮೂಲಕ ಮಾಡಲಾಗುತ್ತಿದೆ’

-ಸುರೇಶ್ ಕಲ್ಲಾಗರ್, ಕಾರ್ಯದರ್ಶಿ, ಸಿಪಿಎಂ ಉಡುಪಿ ಜಿಲ್ಲೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor