ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಸಾಂಪ್ರಾದಾಯಿಕ ರೀತಿ ಮರಳು ವಿಲೇಮಾರಿ ಮಾಡಲು ಕೇಂದ್ರದ ಒಪ್ಪಿಗೆ: ಸಂಸದ ಕೋಟಗೆ ಕೇಂದ್ರ ಪರಿಸರ ಇಲಾಖೆ ಉತ್ತರ

Update: 2026-07-20 19:41 IST

ಸಾಂದರ್ಭಿಕ ಚಿತ್ರ

ಉಡುಪಿ: ದೋಣಿಗಳು ಮತ್ತು ಮೀನುಗಾರಿಕಾ ನೌಕೆಗಳ ಸುಗಮ ಸಂಚಾರಕ್ಕೆ ಅಡಚಣೆಯನ್ನುಂಟು ಮಾಡುವ ಸಿಆರ್‌ಝಡ್ ವ್ಯಾಪ್ತಿಯ ನದಿ ಅಳಿವೆಯಲ್ಲಿರುವ ಮರಳಿನ ದಿಬ್ಬಗಳನ್ನು ತೆರವುಗೊಳಿಸಲು ಕೇಂದ್ರ ಸರಕಾರದ ಪರಿಸರ ಇಲಾಖೆ ಸಹಮತ ವ್ಯಕ್ತಪಡಿಸಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಸಂಸದ ಕೋಟ ಅವರ ಲಿಖಿತ ಪ್ರಶ್ನೆಗೆ ಉತ್ತರಿಸಿರುವ ಕೇಂದ್ರ ಪರಿಸರ, ಅರಣ್ಯ, ಹವಾಮಾನ ಬದಲಾವಣೆ ಸಮೀಕ್ಷೆ ರಾಜ್ಯ ಸಚಿವ ಕೀರ್ತಿ ವರ್ದನ್ ಸಿಂಗ್, ಸಿಅರ್‌ಝಡ್ ಅಧಿಸೂಚನೆ 2019ರ ಅಡಿಯಲ್ಲಿ ಪೂರ್ವಭಾವಿ ಅನುಮತಿ ಪಡೆಯುವ ಷರತ್ತಿಗೆ ಒಳಪಟ್ಟು ಸಿಆರ್‌ಝೆಡ್ -1ಬಿ, ಸಿಆರ್‌ಝಡ್-2, ಸಿಆರ್‌ಝಡ್-3 ಮತ್ತು ಸಿಆರ್‌ಝಡ್-4 ಪ್ರದೇಶಗಳ ಮರಳಿನ ದಿಬ್ಬಗಳನ್ನು ತೆಗೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ 2022ರ ನವೆಂಬರ್ 24ರ ತಿದ್ದುಪಡಿ ಅಧಿಸೂಚನೆ ಸಂಖ್ಯೆ 5495(ಇ) ಮತ್ತು 5494(ಇ)ರ ಅಡಿಯಲ್ಲಿಯೂ ಸ್ಥಳೀಯ ಸಮುದಾಯ ಗಳಿಂದ ಯಾಂತ್ರಿಕವಲ್ಲದ ಸಾಂಪ್ರದಾಯಿಕ, ಯಾಂತ್ರಿಕವಲ್ಲದ ಕೈ ಕೆಲಸದ ವಿಧಾನಗಳ ಮೂಲಕ ಮರಳಿನ ದಿಬ್ಬಗಳನ್ನು ತೆಗೆಯಲು ಸಹ ಸಚಿವಾಲಯ ಅನುಮತಿ ನೀಡಿದೆ ಎಂದು ಲಿಖಿತ ಉತ್ತರದಲ್ಲಿ ಸಚಿವರು ತಿಳಿಸಿದ್ದಾರೆ.

ಆಯಾಯ ರಾಜ್ಯ ಸರಕಾರಗಳು ಕೈಯಿಂದ ಮರಳು ತೆಗೆಯಲು ಅನುಮತಿ ಪಡೆದ ಸಮುದಾಯದ ವ್ಯಕ್ತಿಗಳ ನೊಂದಣಿ ಮತ್ತು ಅದನ್ನು ವಾರ್ಷಿಕವಾಗಿ ನವೀಕರಿಸುವ ಷರತ್ತಿಗೊಳಪಟ್ಟು ನಿರ್ದಿಷ್ಟ ಪ್ರದೇಶದಲ್ಲಿ ನಿಗದಿಪಡಿಸಿದ ಅವಧಿಯಲ್ಲಿ ಮರಳು ತೆಗೆಯಲು ಅನುಮತಿ ನೀಡಬಹುದು ಎಂದು ಅವರು ಉತ್ತರದಲ್ಲಿ ಹೇಳಿದ್ದಾರೆ ಎಂದು ಸಂಸದ ಕೋಟ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News