ಡಿಜಿಟಲ್ ಅರೆಸ್ಟ್ ಮಾಡುವ ಬೆದರಿಕೆ: ವ್ಯಕ್ತಿಗೆ ಆನ್‌ಲೈನ್ ವಂಚನೆ
Update: 2026-07-19 22:22 IST
ಉಡುಪಿ, ಜು.19: ಮತ್ತೊಂದು ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಉಡುಪಿಯ ವಾಸುದೇವ ಪ್ರಭು (76) ಎಂಬವರನ್ನು ಡಿಜಿಟಲ್ ಅರೆಸ್ಟ್ ಮಾಡುವ ಬೆದರಿಕೆಯೊಂದಿಗೆ 9,29,000ರೂ.ಗಳನ್ನು ವಂಚಿಸಿರುವ ಪ್ರಕರಣ ವರದಿಯಾಗಿದೆ.
ಪ್ರಭು ಅವರಿಗೆ ಜು.2ರಂದು ವಾಟ್ಸಪ್ ಕರೆ ಮಾಡಿದ ವಂಚಕರು, ಪ್ರಭು ಹೆಸರಿನಲ್ಲಿ ಇನ್ನೊಂದು ಖಾತೆ ತೆರೆದು ಅದರಲ್ಲಿ 2 ಕೋಟಿ ರೂ.ಮನಿ ಲಾಂಡರಿಂಗ್ ಆಗಿದ್ದು, ಈ ಬಗ್ಗೆ ಇಡಿ ಕೇಸು ದಾಖಲಿಸಿ ಬಂಧಿಸಲು ಬರುತ್ತಿದೆ. ಮುಂಬಯಿಗೆ ಕರೆದೊಯ್ದು 45 ದಿನ ಪೊಲೀಸ್ ಕಸ್ಟಡಿಯಲ್ಲಿರಿಸುತ್ತೇವೆ ಎಂದು ಬೆದರಿಸಿ ಆತ ಹೇಳಿದ ಖಾತೆಗೆ 9.29 ಲಕ್ಷ ರೂ.ಗಳನ್ನು ವರ್ಗಾಯಿಸಿಕೊಂಡಿದ್ದ. ಇದೀಗ ವಂಚನೆಗೊಳಗಾದ ಪ್ರಭು ಅವರು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.