ಎಸ್‌ಐಆರ್ ಕುರಿತ ಮುಖ್ಯಮಂತ್ರಿ ಹೇಳಿಕೆ: ಉಡುಪಿ ಜಿಲ್ಲಾ ಸಹಬಾಳ್ವೆ ತೀವ್ರ ಆತಂಕ
ಉಡುಪಿ, ಜ.21: ಕೇಂದ್ರ ಸರಕಾರ ಭಾರತದ ಚುನಾವಣಾ ಆಯೋಗದ ಮೂಲಕ ಕರ್ನಾಟಕದಲ್ಲಿ ನಡೆಸುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ ‘ಎಸ್‌ಐಆರ್’ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬೆಳಗಾವಿ ಜಿಲ್ಲೆಯ ನಂದಗಾವಿನಲ್ಲಿ ಸೋಮವಾರ ನೀಡಿದ ಹೇಳಿಕೆಯ ಕುರಿತಂತೆ ಉಡುಪಿ ಜಿಲ್ಲಾ ‘ಸಹಬಾಳ್ವೆ’ ಸಂಘಟನೆ ತೀವ್ರ ಆತಂಕ ಹಾಗೂ ಕಳವಳವನ್ನು ವ್ಯಕ್ತಪಡಿಸಿದೆ.
‘ಕಾಂಗ್ರೆಸ್‌ಎಸ್‌ಐಆರ್‌ನ್ನು ರಾಜಕೀಯ ವಿಷಯವಾಗಿ ಪರಿಗಣಿಸುವುದಿಲ್ಲ. ಎಸ್‌ಐಆರ್‌ನ್ನು ರಾಜಕೀಯಗೊಳಿಸು ವುದಿಲ್ಲ. ಅರ್ಹ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳುವ ಕಡೆಗೆ ನಮ್ಮ ಗಮನ ವಿದೆ.’ ಎಂದು ಸಿದ್ಧರಾಮಯ್ಯ ಜ.19ರಂದು ನಂದಗಾವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದರು.
ಮುಖ್ಯಮಂತ್ರಿಯವರ ಪ್ರಸ್ತುತ ಹೇಳಿಕೆಯಿಂದ ನಾವು ಖಂಡಿತವಾಗಿ ಆತಂಕಿತರಾಗಿದ್ದೇವೆ. ನಮ್ಮ ಆತಂಕವು ಸಕಾರಣವಾಗಿದೆ. ಆದಕ್ಕೆ ಕಾರಣಗಳು ಸ್ಪಷ್ಟವಾಗಿವೆ ಎಂದು ಸಹಬಾಳ್ವೆಯ ಸಂಚಾಲಕ ಸಮಿತಿಯ ಪರವಾಗಿ ಪ್ರಧಾನ ಸಂಚಾಲಕ ಕೆ.ಫಣಿರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
1.ಭಾರತದ ಸಂವಿಧಾನವು ಚುನಾವಣಾ ಆಯೋಗಕ್ಕೆ ಕಾಲ ಕಾಲಕ್ಕೆ ತೀವ್ರ ಪರಿಶೀಲನೆ (ಐಆರ್) ಮಾಡುವ ಅಧಿಕಾರವನ್ನು ಕೊಟ್ಟಿದೆಯೇ ವಿನಹ, ಪ್ರಜೆಗಳ ನಾಗರಿಕತೆಯನ್ನು ಪರೀಶೀಲಿಸುವ ನಿರಂಕುಶ ಅಧಿಕಾರವಾದ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಅಧಿಕಾರ ನೀಡಿಲ್ಲ. ಆದ್ದರಿಂದ ಚುನಾವಣಾ ಆಯೋಗದ ಈ ಕ್ರಮವೇ ಸಂವಿಧಾನಬಾಹಿರವಾದದ್ದು.
ಇದನ್ನು ಒಕ್ಕೂಟ ಸರಕಾರವು ಸಂವಿಧಾನ ವಿರೋಧಿ ಎನ್‌ಆರ್‌ಸಿಗೆ ಕೈ ಹಾಕಿ, ನಾಗರಿಕರ ಪ್ರತಿಭಟನೆಗೆ ಮಣಿದು ಹಿಂತೆಗೆದುಕೊಂಡದ್ದಕ್ಕೆ ಪ್ರತಿಕಾರ ವಾಗಿ ಎನ್‌ಆರ್‌ಸಿಯನ್ನು ಎಸ್‌ಐಆರ್ ರೂಪದಲ್ಲಿ ದೇಶಾದ್ಯಂತ ಹರಿಬಿಟ್ಟಿದೆ. ಇದು ಸ್ಪಷ್ಟವಾಗಿ ಸಂವಿಧಾನವನ್ನು ಸಾಂವಿಧಾನಿಕ ಸಂಸ್ಥೆಗಳ ಮೂಲಕವೇ ಬುಡಮೇಲು ಮಾಡುವ ರಾಜಕೀಯ ತಂತ್ರವಾಗಿದೆ.
ಇದನ್ನರಿತು ಕೇರಳ, ತಮಿಳುನಾಡು ಹಾಗು ಪಶ್ಚಿಮ ಬಂಗಾಳದ ಸರಕಾರಗಳು ಎಸ್‌ಐಆರ್‌ನ್ನು ಸರ್ವಾಧಿಕಾರಿ ರಾಜಕೀಯ ತಂತ್ರವೆಂದು ಪರಿಗಣಿಸಿ ಎದುರಿಸುವ ಇಚ್ಛಾಶಕ್ತಿಯನ್ನು ತೋರುತ್ತಿವೆ. ಇಂಥಾ ವಿಷಮ ಸನ್ನಿವೇಶದಲ್ಲಿ ಕರ್ನಾಟಕದಲ್ಲಿ ಮತದಾರರ ನಕ್ಷೆ ತಯಾರಿಯು ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸರಕಾರವೇ ಆಡಳಿತದಲ್ಲಿದ್ದು, ಪಕ್ಷವು ಇಡೀ ನಡಾವಳಿ ಗಳನ್ನು ‘ರಾಜಕೀಯವಾಗಿ ಕಾಣುವುದಿಲ್ಲ’ ಎಂಬ ಸೂಚನೆಯನ್ನು ಮುಖ್ಯಮಂತ್ರಿಗಳು ನೀಡುವುದು ಕೋಟ್ಯಾಂತರ ಜನರ ಸಂವಿಧಾನಿಕ ಪ್ರಜಾ ಹಕ್ಕನ್ನು ಕಿತ್ತುಕೊಳ್ಳುವ ತಂತ್ರವನ್ನು ಹಗುರವಾಗಿ ಅವರು ಕಾಣುತ್ತಿದ್ದಾರೆ ಎನ್ನುವುದು ಆತಂಕಕಾರಿ ವಿಷಯವಾಗಿದೆ.
2.ಇಲ್ಲಿಯವರೆಗೆ ಎಸ್‌ಐಆರ್ ನಡೆದಿರುವ ರಾಜ್ಯಗಳಲ್ಲಿ, ನಿಯಮಾನುಸಾರ ಪರಿಷ್ಕರಣೆಯ ನಂತರವೂ ಕೋಟ್ಯಾಂತರ ಪ್ರಜೆಗಳ ಹಕ್ಕನ್ನು ಅಸಾಂವಿಧಾನಿಕ ಕುಂಟು ನೆಪಗಳ ಮೂಲಕ ಕಸಿಯುವ ತಂತ್ರಗಳನ್ನು ಮಾಡಲಾಗುತ್ತಿದೆ. ಪಶ್ಚಿಮಬಂಗಾಳದಲ್ಲಿ 1.30 ಕೋಟಿ ಪ್ರಜೆಗಳು ಎಸ್‌ಐಆರ್‌ನ ಎಲ್ಲ ಅಗತ್ಯಗಳನ್ನು ಪೂರೈಸಿದಾಗಲೂ, ‘ತಾರ್ಕಿಕ ಪರೀಕ್ಷೆ’ ಎಂಬ ಭಯಾನಕ ನಡಾವಳಿಗಳನ್ನು ಮುಂದಿಟ್ಟು ಹಿಂಸಿಸಲಾಗುತ್ತಿದೆ!.
ಈ ಸಂಗತಿಯು ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತರಲಾಗಿ, ನ್ಯಾಯಮೂರ್ತಿಗಳೂ ನಡಾವಳಿಗಳ ಕುರಿತು ದಿಗ್ಬ್ರಮೆ ವ್ಯಕ್ತಪಡಿಸಿ ಮಧ್ಯ ಪ್ರವೇಶಿಸಿದ್ದಾರೆ. ಇವುಗಳ ಪರಿವೇ ಇಲ್ಲದಂತೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಹೇಳಿಕೆ ನೀಡುವುದು, ರಾಜ್ಯದ ಪ್ರಜೆಗಳ ಪ್ರಜಾ ಹಕ್ಕನ್ನು ಕಸಿಯುವ ಮತ್ತಷ್ಟೂ ಭಯಾನಕ ಆಯುಧಗಳು ಬರಲಿವೆಯೇ? ಎಂಬ ಆತಂಕ ಮೂಡುತ್ತಿದೆ.
ಈ ಹಿನ್ನೆಲೆಯಲ್ಲಿ, ಜಾತಿ ಮತ ಲಿಂಗಾತೀತವಾಗಿ ಸರ್ವ ಪ್ರಜೆಗಳ ಸಾಂವಿಧಾನಿಕ ಹಕ್ಕುಗಳ ರಕ್ಷಣೆಯ ಮೂಲಕ ಶಾಂತ ಸೌಹಾರ್ದ ಸಮಾಜ ನಿರ್ಮಾಣದ ಧ್ಯೇಯೋದ್ದೇಶ ಹೊಂದಿರುವ ಸಹಬಾಳ್ವೆ ವೇದಿಕೆಯು ಮುಖ್ಯಮಂತ್ರಿ ಗಳ ಈ ಹೇಳಿಕೆಯನ್ನು ಪ್ರಶ್ನಿಸುತ್ತದೆ. ಹಾಗೂ ಕರ್ನಾಟಕ ಸರಕಾರ ಮತ್ತು ಕಾಂಗ್ರೆಸ್ ಪಕ್ಷವೂ ಎಸ್‌ಐಆರ್‌ನ್ನು ಸಂವಿಧಾನ ವಿರೋಧಿ ಕ್ರೂರ ರಾಜಕೀಯವೆಂದೇ ಪರಿಗಣಿಸಿ ಎದುರಿಸಲು ಮುಂದಾಗಬೇಕು ಎಂದು ಸಹಬಾಳ್ವೆಯ ಸಂಚಾಲಕ ಸಮಿತಿ ಆಗ್ರಹಿಸಿದೆ.