ಕ್ರಿಸ್‌ಮಸ್: ಉಡುಪಿ ಧರ್ಮಾಧ್ಯಕ್ಷರ ಸಂದೇಶ
ಕ್ರಿಸ್ತಜಯಂತಿ, ದೇವನ ಪ್ರೀತಿಯ ಹೃದಯದ ಒಂದು ಮಿಡಿತ. ಮನುಜನ ಮೇಲಿನ ಪ್ರೀತಿಯ ತುಡಿತ. ತನ್ನ ಮಗನನ್ನೇ ಜಗತ್ತಿಗೆ ಧಾರೆ ಎರೆದ ಅಪರಿಮಿತ ಪ್ರೀತಿ. ಕ್ರಿಸ್ತ ಜಯಂತಿ ದೇವನ ಅನುಪಮ ಪ್ರೀತಿಯ ರೀತಿ. ಮಮತೆ, ಮಮಕಾರದ ಆಗರವಾಗಿರುವ ಆ ದೇವರ ಪ್ರೀತಿಯನ್ನು ಅನುಭವಿಸಿ ನಾವದರ ನೆರಳಾದಾಗ, ನಮ್ಮ ಹೃದಯ ಪ್ರೇಮದಿಂದ ಕ್ರಿಸ್ತನನ್ನು ನೀಡಲು ಮುಂದಾದಾಗ ನೈಜ ಕ್ರಿಸ್ತಜಯಂತಿಯ ಆಚರಣೆಯಾಗುತ್ತದೆ.
ಬೆಳಗು ಬಾ ಜ್ಯೋತಿಯನು, ಎದೆಯ ಮಂದಿರದಲ್ಲಿ, ಜಗಕೆ ಬೆಳಕಾಗುವೇ ಶುಭ ಘಳಿಗೆಯಲ್ಲಿ. ಇನಿತು ಜಡ ನಾನು ಬಂದ ಚೇತನ ನೀನು ನಿನ್ನ ಶಕ್ತಿಯ ಬಲದಿ, ವ್ಯಕ್ತಿಯಾದೆನು ನಾನು ಈ ಲೋಕದಲ್ಲಿ... ಬೆಳಗು ಬಾ ಹಣತೆಯನು ನನ್ನೆದೆಯ ಗುಡಿಯಲ್ಲಿ, ಚಿರಕಾಲ ಪ್ರಜ್ವಲಿಸಿ ಬೆಳಗುವಂತೆ ಜಿ.ಎಸ್. ಶಿವರುದ್ರಪ್ಪನವರ ಅದ್ಬುತ ಸಾಲುಗಳಿವು. ಬದುಕಿಗೆ ಬೆಳಕಿನ ಮಹತ್ವವನ್ನು ಸಾರುವ ನುಡಿಗಳಿವು. ಬಂದರೇಸು ಧರೆಗೆ ಕತ್ತಲು ತುಂಬಿದ ಜಗಕೆ, ಶಾಂತಿ ಪ್ರೀತಿ ನೀಡಲು ಸೂರ್ಯ ಮುಳುಗಿ ಕತ್ತಲು ಜಗತ್ತನ್ನು ಆವರಿಸಿದಾಗ, ಕ್ರಿಸ್ಮಸ್ ನಡುರಾತ್ರಿಯಲ್ಲಿ ಬೆಳಕಿನ ಆಗಮನವಾಯಿತು. ಬೆಳಕಿನಲ್ಲಿ ನಡೆಯಲು, ಬೆಳಕಿನ ರಾಜ್ಯದ ಸದಸ್ಯರಾಗಲು ಕ್ರಿಸ್ತ ಜಯಂತಿ ಪ್ರೇರಣೆಯಾಯಿತು. ಕತ್ತಲ ಬದುಕಿಗೆ ಬೆಳಕಿನ ಆಹ್ವಾನವಾಯಿತು. ನೀರಸ ಬದುಕಿಗೆ ಚೈತನ್ಯದ ಸೆಲೆ ಮೂಡಿತು. ನಿಸ್ತೇಜ ಜೀವನಕ್ಕೆ ಜೀವದ ಸಂಚಾರವಾಯಿತು.
ಪ್ರಭುಯೇಸು ಜಗಜ್ಯೋತಿಯಾಗಿ ಭುವಿಯ ಅಂಧಕಾರ ನೀಗಿಸಿದರು. ಕ್ರಿಸ್ಮಸ್ ಮನುಜನ ಬದುಕನ್ನು ಜ್ಯೋತಿ ಯಾಗಿ ಆಲಂಗಿಸಿ ಪ್ರೀತಿಯ ಸಿಂಚನವೆರೆದ ಹಬ್ಬ. ಕ್ರಿಸ್ಮಸ್, ನಮ್ಮ ಬದುಕಿನ ಬೆಳಕಿನ ಹಬ್ಬ. ಕ್ರಿಸ್ತ ಜಯಂತಿಯಲ್ಲಿನ ಜಗಜ್ಯೋತಿ ಯೇಸು ನಮ್ಮ ಹೃದಯಲ್ಲಿ ಜನಿಸಲಿ. ಅವರ ಪ್ರಭೆಯಿಂದ ಪುಳಕಿತರಾಗಿ, ಸ್ವಾರ್ಥ ದ್ವೇಷ ತೊರೆದು, ಐಕ್ಯತೆ, ಅನ್ಯೋನ್ಯತೆ ಯಿಂದ ನಾವು ಬದುಕುವಂತಾಗಲಿ.
ಸಹೋದರತ್ವ, ಸಾಮರಸ್ಯದ ಬದುಕು ನಮ್ಮದಾಗಲಿ. ನಿಮಗೆಲ್ಲರಿಗೂ ಕ್ರಿಸ್ತ ಜಯಂತಿಯ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ.
-ಜೆರಾಲ್ಡ್ ಲೋಬೊ, ಧರ್ಮಾಧ್ಯಕ್ಷರು ಉಡುಪಿ.