×
Ad

ಉಡುಪಿ: ಹಿರಿಯ ರಂಗಕರ್ಮಿ ಪ್ರೊ.ಕೆ. ರಾಮದಾಸ್ ನಿಧನ

Update: 2025-12-23 23:12 IST

ಉಡುಪಿ, ಡಿ.23: ಶ್ರೇಷ್ಠ ನಾಟಕಕಾರ, ರಂಗ ನಟ, ನಿರ್ದೇಶಕ, ಕವಿ, ಸಾಹಿತಿ ಪ್ರೊಫೆಸರ್ ರಾಮದಾಸ್ ಕೆ.(86) ಇಂದು ಮುಂಜಾನೆ ನಿಧನರಾದರು.

ರಂಗಭೂಮಿ ಉಡುಪಿಯ ರಂಗನಟರಾಗಿ ನಿರ್ದೇಶಕರಾಗಿ ಇವರ ಕೊಡುಗೆ ಅಪಾರವಾದುದು. ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ಪ್ರಾಧ್ಯಾಪಕರಾಗಿದ್ದ ಇವರು ಕಾಲೇಜಿನ ಹಾಗೂ ಉಡುಪಿಯ ಸಾಂಸ್ಕೃತಿಕ, ಸಾಹಿತ್ಯ ರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದರು.

ರಂಗಭೂಮಿ ಉಡುಪಿಯ ಮುಖ್ಯ ಕಲಾವಿದರಲ್ಲಿ ಒಬ್ಬರಾಗಿ ಪುರೂರವ, ಧರ್ಮಚಕ್ರ, ಸಂಕ್ರಾಂತಿ, ನಾಯೀಕತೆ, ಹರಕೆಯ ಕುರಿ , ಓಡಿಸ್ಸಿ, ಸಾಕ್ಷಾತ್ಕಾರ, ಸೂರ್ಯ ಶಿಕಾರಿ .. ಇನ್ನೂ ಹಲವು ನಾಟಕಗಳಲ್ಲಿ ಮುಖ್ಯ ಭೂಮಿಕೆಯನ್ನು ನಿರ್ವಹಿಸಿದ್ದರು.

ತಲೆದಂಡ, ನಾಯೀಕತೆ, ಓಡೀಸ್ಸಿ, ಸೂರ್ಯ ಶಿಕಾರಿ ನಾಟಕಗಳ ನಿರ್ದೇಶನವನ್ನು ಹಾಗೂ ಜೋಕುಮಾರ ಸ್ವಾಮಿ, ಸಂಕ್ರಾಂತಿ ನಾಟಕವನ್ನು ಕುತ್ಪಾಡಿ ಆನಂದ ಗಾಣಿಗರ ಜೊತೆ ಜಂಟಿಯಾಗಿ ನಿರ್ದೇಶನ ಮಾಡಿದ್ದರು.

ಇವರು ರಚಿಸಿದ "ಸಾಕ್ಷಾತ್ಕಾರ" ನಾಟಕ ಕೃತಿ ಕರ್ನಾಟಕ ನಾಟಕ ಅಕಾಡೆಮಿಯ ನಾಟಕ ರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿತ್ತು ಹಾಗೂ ರಂಗಭೂಮಿ ತಂಡ ಇದನ್ನು ಪ್ರೊ. ಉದ್ಯಾವರ ಮಾಧವ ಆಚಾರ್ಯರ ನಿರ್ದೇಶನದಲ್ಲಿ ರಂಗಕ್ಕೆ ತಂದಿತ್ತು. ಪ್ರೊ. ರಾಮದಾಸರ ಸಂಕ್ರಾಂತಿ ನಾಟಕದ ' ಉಜ್ಜ' ಪಾತ್ರ, ಸೂರ್ಯ ಶಿಕಾರಿ ಯ ರಾಜ, ಹರಕೆಯ ಕುರಿ ನಾಟಕದ 'ರಾಜಕಾರಣಿ' ಇದೆಲ್ಲ ಇಂದಿಗೂ ಪ್ರೇಕ್ಷಕರ ಮನದಲ್ಲಿ ಚಿರಸ್ಥಾಯಿಯಾಗಿದೆ.

ಕಥಾಸಂಕಲನಗಳು, ಕವನ ಸಂಕಲನಗಳು, ಕಾದಂಬರಿಗಳು, ನಾಟಕಗಳು.... ಹೀಗೆ ಸಾಹಿತ್ಯದ ಎಲ್ಲಾ ಪ್ರಕಾರ ಗಳಲ್ಲಿ ಇವರ ಕೊಡುಗೆ ಅಪಾರವಾದುದು. ಉಡುಪಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

ರಂಗಭೂಮಿ ರಿ. ಉಡುಪಿ ಸಂಸ್ಥೆಯು "ರಂಗ ವಿಭೂಷಣ" ಬಿರುದಿನೊಂದಿಗೆ 2000ದಲ್ಲಿ ರಂಗಭೂಮಿ ಪ್ರಶಸ್ತಿ ನೀಡಿ ಗೌರವಿಸಿತ್ತು ಹಾಗೂ 2015ರ "ರಂಗಭೂಮಿ ಆನಂದೋತ್ಸವ" ದ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News