ಪಡುಬಿದ್ರಿ: ಸಮುದ್ರ ತೀರವನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವು ಪರಿಸರಕ್ಕೆ ಅತ್ಯಂತ ಹಾನಿಕಾರಕವಾಗಿದ್ದು, ಪರಿಸರ ಸಂರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಹಸ್ತಾಂತರಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಹೇಳಿದರು.

ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಬ್ಲೂ ಫ್ಲ್ಯಾಗ್ ಬೀಚ್ ವತಿಯಿಂದ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನಾಚರಣೆ ಅಂಗವಾಗಿ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‌ನಲ್ಲಿ ಆಯೋಜಿಸಿದ್ದ ಸ್ವಚ್ಛ ಸಾಗರ, ಸುರಕ್ಷಿತ ಸಾಗರ ಕಾರ್ಯಕ್ರಮಕ್ಕೆ ರವಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ರಶ್ಮಿ ಚಹರ್ ಮಾತನಾಡಿ, ನಾವು ನಮ್ಮ ಕರ್ತವ್ಯದಿಂದ ವಿಮುಖರಾಗದೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಸಮುದ್ರ ತೀರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ಸಮುದ್ರದಲ್ಲಿನ ಜಲಚರಗಳ ರಕ್ಷಣೆಯೂ ಸಾಧ್ಯವಾಗುತ್ತದೆ. ಈ ಮೂಲಕ ಪರಿಸರ ಸಂರಕ್ಷಣೆಗೆ ನಮ್ಮ ಕೊಡುಗೆ ನೀಡಿದಂತಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪಡುಬಿದ್ರಿಯ ಕೆಪಿಎಸ್ ಶಾಲೆ, ಉಚ್ಚಿಲದ ಮಹಾಲಕ್ಷ್ಮೀ ಇಂಗ್ಲಿಷ್ ಮೀಡಿಯಂ ಶಾಲೆ, ಮಾಹೆ ಮಣಿಪಾಲದ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಪಾಲ್ಗೊಂಡರು. ಬೀಚ್ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯ ನಡೆಸಿ 50ಕ್ಕೂ ಅಧಿಕ ಚೀಲಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಅವರು ಕುಟುಂಬ ಸಮೇತರಾಗಿ ವಿದ್ಯಾರ್ಥಿಗಳ ಜತೆಗೂಡಿ ಕೊನೆಯವರೆಗೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಅಧಿಕಾರಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದರ ಜತೆಗೆ ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸಿಆರ್‌ಝಡ್ ಪ್ರಾದೇಶಿಕ ನಿರ್ದೇಶಕ ಸತೀಶ್ ಎನ್., ಹರೀಶ್ ಪುತ್ರನ್, ಸುಕುಮಾರ್ ಶ್ರೀಯಾನ್, ಮಾಹೆ ಎಂಐಟಿಯ ಪ್ರೊ. ಅನೀಶ್ ಹಾಗೂ ವಿಜಯಕುಮಾರ್ ಉಪಸ್ಥಿತರಿದ್ದರು.

ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸ್ವಾಗತಿಸಿದರು. ವಿಜಯ್ ಕಾರ್ಯಕ್ರಮ ನಿರ್ವಹಿಸಿದರು. ವಿಜಯ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಮಲಿಂಗ ರೆಡ್ಡಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor