ಪ್ರವಾಸೋದ್ಯಮ ಅಭಿವೃದ್ಧಿಯಿಂದ ಉಡುಪಿ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಅಧಿಕ: ಸಚಿವ ರಿಝ್ವಾನ್ ಅರ್ಷದ್
ಕಾಪುವಿನಲ್ಲಿ ಪ್ರಜಾಸೇವಾ ಆಂದೋಲನ
ಕಾಪು, ಸೆ.19: ಕರಾವಳಿ ಭಾಗಕ್ಕೆ ಪ್ರವಾಸೋದ್ಯಮವೇ ಅತಿ ದೊಡ್ಡ ಶಕ್ತಿ. ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಹೆಚ್ಚಿ, ಇಲ್ಲಿನ ಯುವಕರು ದೇಶ-ವಿದೇಶಗಳಿಗೆ ಉದ್ಯೋಗಕ್ಕೆ ತೆರಳುವುದು ತಪ್ಪಲಿದೆ. ಸಮಾಜದಲ್ಲಿ ಶಾಂತಿ ಸೌಹಾರ್ದತೆಯನ್ನು ಬೆಳೆಸಿ, ಎಲ್ಲ ಜಾತಿ- ಧರ್ಮದವರು ಸಾಮರಸ್ಯದಿಂದ ಬಾಳುವ ವಾತಾವರಣ ಸೃಷ್ಠಿ ಮಾಡುವ ಜೊತೆಗೆ ಅಭಿವೃದ್ಧಿ ಕಾರ್ಯ ಕೈಗೊಂಡರೆ ಕರಾವಳಿ ಪ್ರದೇಶ, ಪ್ರಪಂಚಕ್ಕೆ ಸ್ವರ್ಗದ ಮಾದರಿಯಾಗಿ ಕಾಣಿಸಬಹುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಝ್ವಾನ್ ಅರ್ಷದ್ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ಪ್ರಜಾಸೇವೆ ಇಲಾಖೆ ತಾಲೂಕು ಆಡಳಿತ ಕಾಪು ಇದರ ವತಿಯಿಂದ ಕಾಪು ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಕಾಪು ತಾಲೂಕು ಪ್ರಜಡುತಿದ್ದರು.
ಸರಕಾರಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಗ್ರಾಮೀಣ ಭಾಗದ ಜನರ ಸಂಕಷ್ಟಕ್ಕೆ ನಿಗದಿತ ಕಾಲಾವಧಿಯಲ್ಲಿ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರಕಾರವು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸಿ, ಜನಸಾಮಾನ್ಯರ ಸಮಸ್ಯೆ ಹಾಗೂ ಅಹವಾಲುಗಳಿಗೆ ಪರಿಹಾರ ಕಲ್ಪಿಸುವ ಕೆಲಸ ಮಾಡುತ್ತಿದೆ. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಕರಾವಳಿ ಅಭಿವೃದ್ಧಿಗೆ ಬದ್ಧ: ರಾಜ್ಯದ ಕರಾವಳಿ ಭಾಗದ ಅಭಿವೃದ್ಧಿಗೆ ನಮ್ಮ ಸರಕಾರ ಸದಾ ಬದ್ಧವಾಗಿದೆ ಎಂಬುದಕ್ಕೆ ಮಂಗಳೂರಿನಲ್ಲಿ ಮುಖ್ಯಮಂತ್ರಿಗಳು ನಿನ್ನೆ ನಡೆಸಿದ ಸಚಿವ ಸಂಪುಟ ಸಭೆಯೇ ಉತ್ತಮ ನಿದರ್ಶನ. 80ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದರೊಂದಿಗೆ ಕರಾವಳಿ ಭಾಗದ ಸಮಸ್ಯೆಗಳ ಬಗ್ಗೆ ಹಾಗೂ ಈ ಭಾಗದ ಅಭಿವೃದ್ಧಿಗೆ ನೀಡಬೇಕಾದ ಯೋಜನೆಗಳ ಬಗ್ಗೆ ಸಭೆಯಲ್ಲಿ ಸವಿಸ್ತಾರವಾದ ಚರ್ಚೆ ನಡೆಸಲಾಗಿದೆ ಎಂದರು.
ಕಸ್ತೂರಿ ರಂಗನ್ ವರದಿಯ ಹೊಸ ಕರಡು ಅಧಿಸೂಚನೆಯಿಂದ ಜನರು ಆತಂಕಕ್ಕೆ ಒಳಗಾದ ಹಿನ್ನೆಲೆಯಲ್ಲಿ ಇವರ ಸಮಸ್ಯೆ, ಆಂತಕವನ್ನು ಖುದ್ದಾಗಿ ಆಲಿಸಲು ಮುಖ್ಯಮಂತ್ರಿಗಳೇ ನಿನ್ನೆ ಸ್ವತಹ ಹೆಬ್ರಿಗೆ ಬಂದು ಗ್ರಾಮಗಳ ಜನರ ಅಹವಾಲುಗಳನ್ನು ಆಲಿಸಿದ್ದಾರೆ. ಇದಕ್ಕೆ ಉತ್ತಮ ಪರಿಹಾರವನ್ನು ಕಂಡುಕೊಳ್ಳಲು ನಾವು ಬದ್ಧರಾಗಿರುತ್ತೇವೆ ಎಂದು ರಿಝ್ವಾನ್ ನುಡಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸಾರ್ವಜನಿಕರ ಹಿತರಕ್ಷಣೆ ಕಾಪಾಡಲು ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಅದನ್ನು ಮುಂದುವ ರೆಸಿಕೊಂಡು ಹೋಗಬೇಕು. ಸರಕಾರ ಮತ್ತು ಸಮಾಜದ ನಡುವೆ ಕೊಂಡಿ ಯಾಗಿ ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳು ವ್ಯವಸ್ಥಿತ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಸರಕಾರಕ್ಕೆ ಕಿವಿಮಾತು ಹೇಳಿದರು.
ಪ್ರಜಾಸೇವಾ ಆಂದೋಲನ ಸಭೆಗಳು ಆಂದೋಲನ ರೀತಿಯಲ್ಲಿ ನಡೆದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಭೆಯಲ್ಲಿ ನಡೆದ ವಿಷಯಗಳು ಬಗ್ಗೆ ಅನುಪಾಲನ ವರದಿಯ ಆಧಾರದ ಮೇಲೆ ಕ್ರಮವಹಿಸಲು ಮುಂದಾಗಬೇಕು ಎಂದವರು ಸಲಹೆ ನೀಡಿದರು.
ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಸರಕಾರದ ಸೌಲಭ್ಯಗಳು ಕಚೇರಿಯ ಅಂಚಿನಲ್ಲಿ ನಿಲ್ಲದೆ, ಅವುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು, ಪ್ರಜಾಸೇವೆ ಆಂದೋಲನ ಸಭೆ ಗಳನ್ನು ಆಯೋಜಿಸಿ, ಅವರ ಅಹವಾಲು ಸ್ವೀಕರಿಸುವುದರೊಂದಿಗೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಕೃಷಿ ಮೇಳ -2026ರ ಕುರಿತ ಪೋಸ್ಟರ್‌ನ್ನು ರಾಜ್ಯ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವರೂ ಆಗಿರುವ ರಿಝ್ವಾನ್ ಅರ್ಷದ್ ಬಿಡುಗಡೆಗೊಳಿಸಿದರು.
ಸಭೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲಿಕರಣ ಇಲಾಖೆಯ ವತಿಯಿಂದ ಬ್ಯಾಟರಿ ಚಾಲಿತ ವ್ಹೀಲ್ ಚೇರ್, ಹೊಲಿಗೆ ಯಂತ್ರ, ಟಾಕಿಂಗ್ ಲ್ಯಾಪ್‌ಟಾಪ್ ಮತ್ತು ಡಿ.ದೇವರಾಜ ಅರಸು ನಿಗಮದ ವತಿಯಿಂದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರೋಹಿಣಿ ಸಿಂದೂರಿ ದಾಸರಿ, ಕಾಪು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕಾಪು ಪುರಸಭೆ ಅಧ್ಯಕ್ಷೆ ಮೋಹಿನಿ ಶೆಟ್ಟಿ, ಕಾಪು ನಗರ ಪ್ರಾಧಿಕಾರದ ಅಧ್ಯಕ್ಷ ವಿಕ್ರಮ್ ಕಾಪು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ವಿವಿಧ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಪು ತಹಶೀಲ್ದಾರ್ ಅನಂತ ಶಂಕರ್ ಬಿ ಸ್ವಾಗತಿಸಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಇಂದಿನ ಕಾಪು ಪ್ರಜಾಸೇವಾ ಆಂದೋಲನ ಸಭೆಯಲ್ಲಿ ವಿವಿಧ ಇಲಾಖೆಗಳ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಒಟ್ಟು 75 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ಶನಿವಾರ ನಡೆದ ಪ್ರಜಾಸೇವಾ ಸಭೆ ಯಲ್ಲಿದ್ದಂತೆ ಈ ಬಾರಿಯೂ ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳೇ ಅಧಿಕ ಸಂಖ್ಯೆಯಲ್ಲಿದ್ದವು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಡುಬಿದ್ರಿ ಜಂಕ್ಷನ್‌ನಲ್ಲಿ ಅತೀ ಹೆಚ್ಚು ಅಫಘಾತಗಳು ನಡೆಯುತಿದ್ದು, ಇದಕ್ಕಾಗಿ ಅಲ್ಲಿ ತುರ್ತಾಗಿ ಫ್ಲೈಓವರ್ ನಿರ್ಮಿಸುವಂತೆ ಬೇಡಿಕೆ ಸಲ್ಲಿಸಲಾಯಿತು. ಈ ಕುರಿತಂತೆ ಹೆದ್ದಾರಿ ಪ್ರಾಧಿಕಾರ ದ ಗಮನಕ್ಕೆ ವಿಷಯವನ್ನು ತರಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪಾ ಭರವಸೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ತೋಟಗಾರಿಕೆ ಇಲಾಖೆ, ವಿ.ಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ, ಕೃಷಿ ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮಳಿಗೆಗಳನ್ನು ತೆರೆದು ಇಲಾಖಾ ವತಿಯಿಂದ ನೀಡಲಾಗುವ ಸೌಲಭ್ಯಗಳ ಕುರಿತು ಜನರಿಗೆ ಮಾಹಿತಿ ನೀಡಿದವು.