ಕುಂದಾಪುರ, ಸೆ.19: ಪ್ರಜಾ ಸೇವಾ ಆಂದೋಲವನ್ನು ಸರಕಾರ ಜಾರಿಗೆ ತಂದಿದ್ದು, ಜನರಿಂದ ಅಹವಾಲುಗಳನ್ನು ಪಡೆದು, ಸ್ಥಳದಲ್ಲೇ ಇತ್ಯರ್ಥ ಪಡಿಸಲು ಪ್ರಯತ್ನಿಸಬೇಕು. ಇಲ್ಲವಾದಲ್ಲಿ 20 ದಿನದೊಳಗೆ ಪರಿಹರಿಸಲು ಕ್ರಮ, ಒಂದೊಮ್ಮೆ ಅದು ಆಗದಿದ್ದರೆ ಜನರಿಗೆ ಸರಿಯಾದ ನಿರ್ದೇಶನ ನೀಡಬೇಕು ಎಂಬ ಯೋಜನೆಯಿದು ಎಂದು ಕುಂದಾಪುರ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ.

ಶನಿವಾರ ಇಲ್ಲಿನ ಬೋರ್ಡ್ ಹೈಸ್ಕೂಲ್ ಕಲಾಮಂದಿರದಲ್ಲಿ ಪ್ರಜಾ ಸೇವೆ ಇಲಾಖೆ ಕುಂದಾಪುರ ತಾಲೂಕು ಆಡಳಿತ, ಪುರಸಭೆ ಆಶ್ರಯದಲ್ಲಿ ಇಲ್ಲಿನ ಪುರಸಭೆ ವ್ಯಾಪ್ತಿಗೆ ಸಂಬಂಧಿಸಿದಂತೆ ನಡೆದ ಪ್ರಜಾ ಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಆಂದೋಲನದ ಭಾಗವಾಗಿ ಜನತೆ ತಮ್ಮ ಅಹವಾಲುಗಳನ್ನು ಹೇಳಿ ಕೊಳ್ಳಬೇಕು. ಕಂದಾಯ ಸಹಿತ ಎಲ್ಲ ಇಲಾಖೆ ಇದಕ್ಕೆ ಸ್ಪಂದಿಸಬೇಕು ಎನ್ನುವ ಉದ್ದೇಶ ಇದರದ್ದಾಗಿದೆ. ನಾವು ಕೂಡ ಜನರ ಸಮಸ್ಯೆ ಪರಿಹರಿಸಲು ಪ್ರಯತ್ನಿಸು ತ್ತೇವೆ ಎಂದು ಶಾಸಕರು ಭರವಸೆ ನೀಡಿದರು.

ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾತನಾಡಿ, ಜನರ ಸಮಸ್ಯೆ ಬಗೆಹರಿಸಲು ಸರಕಾರ ಹಲವಾರು ಕ್ರಮಗಳನ್ನು ಮಾಡುತ್ತಿದೆ. ಜನರ ಮನೆ ಬಾಗಿಲಿಗೆ ಸರಕಾರಿ ಸೇವೆಯನ್ನು ತಲುಪಿಸುವ ಮುಖ್ಯಮಂತ್ರಿಗಳ ನಡೆ ಶ್ಲಾಘನೀಯ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸೌಜನ್ಯದಿಂದ ಸ್ಪಂದಿಸಿ, ಬಗೆಹರಿಸುವ ಕಾರ್ಯ ಮಾಡಬೇಕು ಎಂದರು.

ಕುಂದಾಪುರ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್ ಮಾತನಾಡಿ, ಜನರ ಸಮಸ್ಯೆಗಳನ್ನು ಸ್ಥಳೀಯ ಮಟ್ಟದಲ್ಲಿ ಬಗೆಹರಿಸುವ ವಿನೂತನ ಪ್ರಯೋಗ ಇದಾಗಿದೆ. ಜನರು ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ಸಮಸ್ಯೆಗಳನ್ನು ದಾಖಲಿ ಸಬೇಕು. ಮೊಬೈಲ್‌ಗೆ ಸಂದೇಶ ಬರುತ್ತದೆ. ಅದನ್ನು ಶಾಸಕರು ಅನುಮೋದಿಸುತ್ತಾರೆ. ಪ್ರತೀ ಬುಧವಾರ ಸಲ್ಲಿಕೆಯಾದ ದೂರುಗಳ ಪರಿಶೀಲನೆ ಕೂಡ ಇರುತ್ತದೆ ಎಂದು ಜನರಿಗೆ ಮಾಹಿತಿ ನೀಡಿದರು.

ಕುಂದಾಪುರ ಡಿವೈಎಸ್ಪಿ ಹೆಚ್.ಡಿ.ಕುಲಕರ್ಣಿ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಮಹೇಶ್ ಕೆ.ಜಿ., ಪುರಸಭೆ ಮುಖ್ಯಾಧಿಕಾರಿ ಆನಂದ ಜೆ. ಮತ್ತಿತರರು ಉಪಸ್ಥಿತರಿದ್ದರು.

30 ಅರ್ಜಿ ಸಲ್ಲಿಕೆ: ಸಭೆಯಲ್ಲಿ ಕುಂದಾಪುರ ಕಸಬಾ ಹಾಗೂ ವಡೇರ ಹೋಬಳಿ ಗ್ರಾಮಗಳ 30 ಅರ್ಜಿಗಳು ಸಲ್ಲಿಕೆಯಾಗಿವೆ. ಹಳೆ ಆದರ್ಶ ಆಸ್ಪತ್ರೆ ಬಳಿ ಹಾದುಹೋಗುವ ರಾಜ ಕಾಲುವೆ ದುರಸ್ತಿ, ನಗರದ ಪಾರ್ಕಿಂಗ್ ಸಮಸ್ಯೆ, ವಿವಿಧ ರಸ್ತೆ, ಚರಂಡಿ, ಅಭಿವೃದ್ದಿ, ಸುಡುಗಾಡು ತೋಡು ದುರಸ್ತಿ ಬೇಡಿಕೆ ಸಹಿತ ವಿವಿಧ ಅಹವಾಲು ಗಳನ್ನು ಜನರು ಸಲ್ಲಿಸಿದರು.

ಸಭೆಯಲ್ಲಿ ವಿವಿಧ ಇಲಾಖೆಗಳ ಸವಲತ್ತುಗಳನ್ನು ಅರ್ಹ ಫಲಾನುಭವಿ ಗಳಿಗೆ ವಿತರಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಲಾಲ್ ಸ್ವಾಗತಿಸಿ, ಉಪ ತಹಶೀಲ್ದಾರ್ ವಿನಯ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor