ಗ್ರಾಮೀಣ ಜನತೆಗೆ ಶುಚಿತ್ವದ ಅರಿವಿಗಾಗಿ ಸ್ವಚ್ಛತಾ ಪಾಕ್ಷಿಕ ಆಚರಣೆ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಸೆ.11: ಗ್ರಾಮೀಣ ಪ್ರದೇಶಗಳ ಜನರಲ್ಲಿ ಶುಚಿತ್ವದ ಕುರಿತಂತೆ ಅರಿವನ್ನು ಮೂಡಿಸುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಸೆ.14ರಿಂದ ಅ.2ರವರೆಗೆ ಒಟ್ಟು 15 ದಿನಗಳ ಕಾಲ ಜಿಲ್ಲೆಯ ಪ್ರತಿಯೊಂದು ಗ್ರಾಪಂ ಮಟ್ಟದಲ್ಲಿ ‘ಸ್ವಚ್ಛತಾ ಹೀ ಸೇವಾ ಪಾಕ್ಷಿಕ’ವನ್ನು ಆಚರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜನಶಕ್ತಿ ಮಂತ್ರಾಲಯವು ಗ್ರಾಮಗಳಲ್ಲಿ ಸಂಪೂರ್ಣ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಪ್ರೇರೇಪಿಸಲು ಈ ಪಾಕ್ಷಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ ಎಂದರು.
‘ಸ್ವಭಾವ್ ಸ್ವಚ್ಛತಾ- ಸಂಸ್ಕಾರ್ ಸ್ವಚ್ಛತಾ’ ಘೋಷವಾಕ್ಯದೊಂದಿಗೆ ಗ್ರಾಪಂ ಹಾಗೂ ತಾಲೂಕು ಮಟ್ಟದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಜನತೆಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿ ಸುವುದು, ಗಿಡ ನೆಡುವ ಕಾರ್ಯಕ್ರಮ, ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆ, ದುರಸ್ತಿ, ಸ್ವಚ್ಛತಾ ಶ್ರಮದಾನ, ಜನಜಂಗುಳಿ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ವಾಕಥಾನ್, ಸ್ವಚ್ಛತಾ ಪ್ರತಿಜ್ಞೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಸೆ.14ರಂದು ಜಿಪಂ ಕಚೇರಿಯಲ್ಲಿ ‘ಸ್ವಚ್ಛತಾ ಹೀ ಸೇವಾ’ಕ್ಕೆ ಚಾಲನೆ ನೀಡಲಾಗುವುದು. ಜಿಲ್ಲಾಡಳಿತ ಸಂಕೀರ್ಣದ ಪರಿಸರ ವನ್ನು ಸ್ವಚ್ಛತಾ ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಗುವುದು. ಅದೇ ರೀತಿ ಪ್ರತಿಯೊಂದು ಗ್ರಾಪಂಗಳಲ್ಲೂ ಕಾರ್ಯಕ್ರಮಕ್ಕೆ ಅದೇ ದಿನ ಚಾಲನೆ ನೀಡಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಮುಖ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗು ವುದು ಎಂದರು.
ಮರುದಿನ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ನಡೆಯುವ ಮಾನವ ಸರಪಳಿ ಕಾರ್ಯಕ್ರಮ ಮುಗಿದ ಬಳಿ ಪ್ರತಿ ಗ್ರಾಪಂ ಮಟ್ಟದಲ್ಲಿ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧನೆ, ಶ್ರಮದಾನ, ಗಿಡನೆಡುವ ಚಟುವಟಿಕೆ ನಡೆಯ ಲಿದೆ. ಜನತೆ ಇದರಲ್ಲಿ ಸ್ವಯಂಸ್ಪೂರ್ತಿಯಿಂದ ಭಾಗವ ಹಿಸಬಹುದು ಎಂದರು.
ಬಳಿಕ ಪ್ರತಿದಿನವೂ ಗ್ರಾಪಂ ಮಟ್ಟದಲ್ಲಿ ಸ್ವಚ್ಛತೆಗೆ ಸಂಬಂಧಿಸಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗು ವುದು. ಪ್ರವಾಸಿ ತಾಣಗಳ, ಬೀಚ್‌ಗಳ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ವಿರುದ್ಧಝ ಜಾಗೃತಿ, ಸ್ವಚ್ಛತಾ ಕಾರ್ಯಕರ್ತರ ಆರೋಗ್ಯ ಶಿಬಿರ, ಗ್ರಾಮಗಳಲ್ಲಿ ಬ್ಲಾಕ್‌ಸ್ಪಾಟ್‌ಗಳನ್ನು ಗುರುತಿಸಿ ಅವುಗಳ ಸ್ವಚ್ಛತೆ ಮುಂತಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗುವುದು ಎಂದರು.