×
Ad

ರಾಷ್ಟ್ರಗೀತೆ ಕುರಿತು ಸಂಸದ ಕಾಗೇರಿಯ ಹೇಳಿಕೆಯ ಹಿಂದೆ ಬಿಜೆಪಿ ಗುಪ್ತ ಕಾರ್ಯಸೂಚಿ ಅಡಗಿದೆ: ಕಾಂಗ್ರೆಸ್

Update: 2025-11-09 20:43 IST

ಉಡುಪಿ: ದೇಶ, ಸಂವಿಧಾನದಡಿಯಲ್ಲಿ ರಾಷ್ಟ್ರಗೀತೆಯನ್ನಾಗಿ ಒಪ್ಪಿಕೊಂಡ ಕವಿ ರವೀಂದ್ರನಾಥ ಠಾಗೂರರ ಜನ ಗಣ ಮನ ಬ್ರಿಟಿಷ್ ಅಧಿಕಾರಿಯನ್ನ ಸ್ವಾಗತಿಸಲು ಬರೆದ ಕವಿತೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದ ಹೇಳಿಕೆ ರಾಷ್ಟ್ರಕ್ಕೆ ಮಾಡಿದ ಅಪಮಾನ. ಇದರ ಹಿಂದೆ ಬಿಜೆಪಿಯ ಮನುವಾದಿ ಹಿನ್ನೆಲೆಯ ಗುಪ್ತ ಕಾರ್ಯ ಸೂಚಿ ಅಡಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.

ಸಂವಿಧಾನದ ಗೌರವ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೂಡಲೇ ಅವರನ್ನು ಲೋಕಸಭಾ ಸದಸ್ಯತ್ವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಹೇಳಿರುವ ಜಿಲ್ಲಾ ಕಾಂಗ್ರೆಸ್, ದೇಶದ ಪ್ರಜೆಯನ್ನು ಭಾರತದ ಭಾಗ್ಯವಿಧಾತನನ್ನಾಗಿ ಕಾಣುವ, ದೇಶದ ಭೌಗೋಲಿಕ ಸಾಮಾಜಿಕ ಸಾಂಸ್ಕೃತಿಕ ಐಖ್ಯತೆ ಸಮಗ್ರತೆಯನ್ನು ಜಾಗೃತಗೊಳಿಸುವ ರಾಷ್ಟ್ರಗೀತೆಯಾಗಿ ಜನಮಾನಸ ದಲ್ಲಿ ಮೆರೆದ ಜನಗಣಮನ ಹಾಡಿನ ಅರ್ಥ, ಮಹತ್ವ ಕಾಗೇರಿಯಂತಹ ಒಬ್ಬ ಮಾಜಿ ಸ್ಪೀಕರ್, ಹಾಲೀ ಸಂಸದನಿಗೆ ತಿಳಿಯದೇ ಹೋಗಿರುವುದರ ಹಿಂದೆ ಅವರ ರಾಜಕೀಯ ಸಂಸ್ಕೃತಿಯ ಪ್ರಭಾವ ಅಡಗಿದೆ ಎಂದು ಹೇಳಿಕೆಯಲ್ಲಿ ಅದು ತಿಳಿಸಿದೆ.

ದೇಶದ ಆಡಳಿತದ ಹೊಣೆ ಹೊತ್ತವರ ಮನುವಾದಿ ಚಿಂತನೆ ಇದೀಗ ರಾಷ್ಟಗೀತೆಯನ್ನು ಬದಲಿಸಲು ಹೊರಟಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಧರ್ಮ ನಿರಪೇಕ್ಷತೆ, ಜಾತ್ಯತೀತತೆ ವಿವಿಧತೆಯಲ್ಲಿ ಏಕತೆಯ ಸಮ ಸಮಾಜ ನಿರ್ಮಾಣವೇ ಮೊದಲಾದ ಸಾಂವಿಧಾನಿಕ ಮೌಲ್ಯಗಳನ್ನು ಬದಿಗೊತ್ತಿ ಕೇಸರಿಯನ್ನು ರಾಷ್ಟ್ರ ಧ್ವಜವಾಗಿಸಿ, ಮನುಸ್ಮತಿಯನ್ನು ಸಂವಿಧಾನವನ್ನಾಗಿಸಿ, ವಂದೇ ಮಾತರಂನ್ನು ರಾಷ್ಟ್ರಗೀತೆಯಾಗಿಸುವದನ್ನೆ ತಮ್ಮ ಆಡಳಿತದ ಗುರಿ ಯಾಗಿಸಿಕೊಂಡ ಬಿಜೆಪಿಗೆ ದೇಶ ಒಪ್ಪಿಕೊಂಡ ಅಂಬೇಡ್ಕರ್ ಸಂವಿಧಾನ, ಪಿಂಗಲಿ ವೆಂಕಯ್ಯರ ರಾಷ್ಟ್ರಧ್ವಜ, ಠಾಗೂರರ ರಾಷ್ಟ್ರಗೀತೆ ಅಡ್ಡವಾಗಿ ನಿಂತಿದೆ. ದೇಶದ ಪ್ರಜಾಪ್ರಭುತ್ವ ಈ ಬದಲಾವಣೆಯನ್ನು ಒಪ್ಪಲು ಸಾಧ್ಯವಿಲ್ಲ. ಇದು ಮುಂದಿನ ದಿನಗಳಲ್ಲಿ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಪ್ರಜಾ ಕ್ರಾಂತಿಗೆ ಕಾರಣವಾದೀತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News