×
Ad

ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ನಿರಂತರ ಅಪಘಾತ: ಆಕ್ರೋಶಿತ ಉಚ್ಚಿಲ ನಾಗರಿಕರಿಂದ ಹೆದ್ದಾರಿ ತಡೆ

Update: 2025-01-20 13:49 IST

ಪಡುಬಿದ್ರೆ: ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯಿಂದ ಉಚ್ಚಿಲ ಪೇಟೆಯಲ್ಲಿ ನಿರಂತರ ಅಪಘಾತಗಳು ನಡೆಯುತ್ತಿವೆ ಎಂದು ಆರೋಪಿಸಿ ಉಚ್ಚಿಲ ನಾಗರಿಕ ಹೋರಾಟ ಸಮಿತಿಯ ನೇತೃತ್ವದಲ್ಲಿ ಸೋಮವಾರ ಉಚ್ಚಿಲದಲ್ಲಿ ರಾಷ್ಟ್ರೀಯ ಹೆದ್ದಾರಿ 66 ತಡೆ ನಡೆಸಲಾಯಿತು.

ಉಚ್ಚಿಲ ಪೇಟೆಯಲ್ಲಿ ಪ್ರತಿಭಟನಾ ಸಭೆ ನಡೆಸಿದ ಪ್ರತಿಭಟನಾಕಾರರು ರಾ. ಹೆದ್ದಾರಿ ಪ್ರಾಧಿಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉಚ್ಚಿಲ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಸಿರಾಜ್ ಉಚ್ಚಿಲ ಸಹಿತ ನೂರಾರು ಮಂದಿ ಹೆದ್ದಾರಿ ತಡೆ ನಡೆಸಿ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟುಹಿಡಿದರು.

ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಉಡುಪಿ ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರನ್ನು ನಿಲ್ಲಿಸಿ ಮನವಿ ಸಲ್ಲಿಸಲಾಯಿತು.

ಸ್ಥಳಕ್ಕೆ ಬಂದ ಹೆದ್ದಾರಿ ಪ್ರಾಧಿಕಾರದ ಪ್ರಾದಿಕಾರದ ಯೋಜನಾಧಿಕಾರಿ ಜಾವೇದ್ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು ಕೂಡಲೇ ಸಮಸ್ಯೆಗೆ ಪರಿಹರಿಸದಿದ್ದಲ್ಲಿ ಮುಂದೆ ಇನ್ನಷ್ಟು ಉಗ್ರರೀತಿಯ ಪ್ರತಿಭಟನೆ ಎದುರಿಸಬೆಕಾದೀತು ಎಂದು ಎಚ್ಚರಿಸಿದರು.

ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಶೀಘ್ರದಲ್ಲೇ ಉಡುಪಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಹೆದ್ದಾರಿ ಸುರಕ್ಷತಾ ಸಭೆಯನ್ನು ಕರೆದು ಇಲ್ಲಿನ ಸಮಸ್ಯೆಗಳ ಪರಿಹರಿಸಲಾಗುವುದು ಎಂದು ಹೇಳಿದರು.

ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಪಡುಬಿದ್ರೆ ಠಾಣಾಧಿಕಾರಿ ಪ್ರಸನ್ನ ಬಂದೋಬಸ್ತ್ ಏರ್ಪಡಿಸಿದ್ದರು.

ಬೇಡಿಕೆ: ಉಚ್ಚಿಲ ಪೇಟೆಯಲ್ಲಿ ಕ್ರಾಸಿಂಗ್ ವ್ಯವಸ್ಥೆ, ಎರ್ಮಾಳು ಡಿವೈಡರಿನಿಂದ ಆಲ್ ಇಹ್ಸಾನ್ ಶಾಲೆಯ ಡಿವೈಡೆರ್ ತನಕ ಹೆದ್ದಾರಿ ಮಧ್ಯೆ ಹೆದ್ದಾರಿ ದೀಪ ಅಳವಡಿಕೆ, ಉಚ್ಚಿಲ ಪೇಟೆಯಲ್ಲಿ ಹೈಮಾಸ್ಕ್ ದೀಪ ಅಳವಡಿಕೆ, ಹೆದ್ದಾರಿಯಲ್ಲಿ ಝೀಬ್ರಾ ಕ್ರಾಸಿಂಗ್, ಸಮರ್ಪಕ ಕ್ರಾಸಿಂಗ್ ವ್ಯವಸ್ಥೆ, ಸರ್ವಿಸ್ ರಸ್ತೆ ಡಿವೈಡರಿಗೆ ಸ್ಪೀಡ್ ಬ್ರೇಕರ್ ಅಳವಡಿಸಬೇಕು.

ಪ್ರತಿಭಟನಾ ಸಂದರ್ಭ ಉಚ್ಚಿಲ ಪೇಟೆಯ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡಿದರು.

ಪ್ರತಿಭಟನಾ ಸಭೆಯಲ್ಲಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಕುಮಾರ್ ಮೆಂಡನ್, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಸಾಮಾಜಿಕ ಹೋರಾಗಾರ ಶೇಖರ್ ಹೆಜಮಾಡಿ, ಎಂ.ಎ ಗಫರ್, ಎಸ್ಡಿಪಿಐ ಕಾಪು ಕ್ಷೇತ್ರ ಅಧ್ಯಕ್ಷ ಹನೀಫ್ ಮೂಳೂರು ಮತ್ತಿತರರು ಇದ್ದರು.

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News