ಉಡುಪಿ ಜಿಲ್ಲೆಯಾದ್ಯಂತ ನಿರಂತರ ಮಳೆ; 7 ಮನೆಗಳಿಗೆ ಹಾನಿ
ಉಡುಪಿ, ಜು.24: ಉಡುಪಿ ಜಿಲ್ಲೆಯಲ್ಲಿ ಗುರುವಾರ ದಿನವಿಡೀ ನಿರಂತರ ಮಳೆ ಸುರಿದಿದ್ದು, ಬಹುಕಾಲದ ಬಳಿಕ ಇಂಥ ಮಳೆಗಾಲವನ್ನು ಕಂಡಿರುವುದಾಗಿ ಜನಸಾಮಾನ್ಯರು ಮಾತನಾಡಿಕೊಳ್ಳುವಂತಾಗಿದೆ. ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ ಸತತವಾಗಿ ಮಳೆ ಬೀಳುತ್ತಿದೆ.
ಜಿಲ್ಲಾದಿಕಾರಿ ಕಚೇರಿಯ ವಿಕೋಪ ನಿಯಂತ್ರಣ ಕೇಂದ್ರ ನೀಡಿರುವ ಮಾಹಿತಿಯಂತೆ ಇಂದು ಬೆಳಗ್ಗೆ 8:30ರವರೆಗೆ ಹಿಂದಿನ 24 ಗಂಟೆಗಳಲ್ಲಿ ಜಿಲ್ಲೆ 105.2 ಮಿ.ಮೀ. ಮಳೆಯನ್ನು ಕಂಡಿದೆ. ಬೈಂದೂರಿನಲ್ಲಿ ಅತ್ಯಧಿಕ 12.8 ಸೆ.ಮೀ. ಮಳೆಯಾದರೆ, ಬ್ರಹ್ಮಾವರದಲ್ಲಿ 12.3ಸೆ.ಮೀ. ಮಳೆ ಬಿದ್ದಿದೆ.
ಇನ್ನಿಳಿದಂತೆ ಕುಂದಾಪುರ ತಾಲೂಕಿನಲ್ಲಿ 10.8ಸೆ.ಮೀ., ಹೆಬ್ರಿಯಲ್ಲಿ 10.6 ಸೆ.ಮೀ., ಉಡುಪಿಯಲ್ಲಿ 9.1ಸೆ.ಮೀ., ಕಾರ್ಕಳದಲ್ಲಿ 8.4 ಹಾಗೂ ಕಾಪು ನಲ್ಲಿ 8.2ಸೆ.ಮೀ. ಮಳೆ ಬಿದ್ದಿರುವುದು ದಾಖಲಾಗಿದೆ.
ದಿನದಲ್ಲಿ ಒಟ್ಟು 7 ಮನೆಗಳಿಗೆ ಹಾನಿಯಾಗಿರುವ ಮಾಹಿತಿ ಬಂದಿದೆ. ಇವುಗಳಲ್ಲಿ ಐದು ಕುಂದಾಪುರ ತಾಲೂಕಿನಿಂದ ಹಾಗೂ ಎರಡು ಕಾರ್ಕಳ ತಾಲೂಕಿನಿಂದ ವರದಿಯಾಗಿವೆ.
ಕುಂದಾಪುರ ತಾಲೂಕು ಕೋಣಿ ಗ್ರಾಮದ ಕಟ್ಕೇರಿ ಎಂಬಲ್ಲಿ ಶ್ರೀಕಾಂತ ಗಾಣಿಗ ಎಂಬವರ ಮನೆಯ ದನದ ಕೊಟ್ಟಿಗೆ ಗಾಳಿ-ಮಳೆಗೆ ಸಂಪೂರ್ಣ ಕುಸಿದು ಬಿದ್ದಿದ್ದು, ಅಪಾರ ನ,ಷ್ಟ ಸಂಭವಿಸಿದೆ. ಕಾಳಾವರ ಗ್ರಾಮದ ಮಂಜುನಾಥ ಶೆಟ್ಟಿಗಾರ್ ಎಂಬವರ ವಾಸ್ತವ್ಯದ ಮನೆ ನಿನ್ನೆಯ ಭಾರೀ ಮಳೆಗೆ ಭಾಗಶ: ಹಾನಿಯಾಗಿದ್ದು, 75,000ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ರಾತ್ರಿ ಬೀಸಿದ ಗಾಳಿಗೆ ಕುಂಭಾಶಿ ಗ್ರಾಮದ ಮೂರು ಮನೆಗಳಿಗೆ ಹಾನಿಯಾಗಿದೆ. ಗ್ರಾಮದ ಸುರೇಶ್ ಪೂಜಾರಿಯವರ ಮನೆಯ ಹೆಂಚು ಹಾಗೂ ಸಿಮೆಂಟ್ ಶೀಟುಗಳು ಗಾಳಿಗೆ ಹಾರಿಹೋದರೆ, ಸುಭಾಸ್ ಎಂಬವರ ಮನೆಯ ಹೆಂಚು ಸಹ ಹಾರಿಹೋಗಿ ಭಾಗಶ: ಹಾನಿಯಾಗಿದೆ. ಇನ್ನು ಉದಯಾ ಎಂಬವರ ಮನೆಯ ಮಾಡಿನ ಹೆಂಚು ಸಹ ಗಾಳಿಗೆ ಹಾರಿಹೋಗಿದೆ.
ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮದ ಯೋಗಿನಿ ಎಂಬವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಗೊಳಗಾಗಿ 15,000ರೂ. ಹಾಗೂ ಎರ್ಲಪಾಡಿ ಗ್ರಾಮದ ಪ್ರಭಾಕರ ಎಂಬವರ ಮನೆಯೂ ಹಾನಿಗೊಂಡು 30 ಸಾವಿರ ರೂ.ಗೂ ಅಧಿಕ ನಷ್ಟದ ಅಂದಾಜು ಮಾಡಲಾಗಿದೆ.
ಹವಾಮಾನ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳಲ್ಲೂ ವೇಗದ ಗಾಳಿ ಸಹಿತ ಭಾರೀ ಮಳೆ ಸುರಿಯಲಿದೆ. ರಾಜ್ಯ ಕರಾವಳಿಯ ಬಂದರುಗಳಲ್ಲಿ ಸ್ಥಳೀಯ ಎಚ್ಚರಿಕೆಯ ಸೂಚನೆಗಳಾದ ನಂ.ಮೂರನ್ನು ಹಾರಿಸುವಂತೆ ತಿಳಿಸಲಾಗಿದೆ.