×
Ad

ಉಡುಪಿ ಡಿಸಿಯನ್ನು ಕೂಡಲೇ ಅಮಾನತು ಮಾಡಲು ದಸಂಸ ಆಗ್ರಹ

Update: 2026-01-20 20:10 IST

ಶ್ಯಾಮ್‌ರಾಜ್ ಬಿರ್ತಿ

ಉಡುಪಿ, ಜ.20: ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಕಾರ್ಯ ಕ್ರಮದ ಮೆರವಣಿಗೆಯಲ್ಲಿ ಸಂವಿಧಾನದ ಅಡಿಯಲ್ಲಿ ಸೇವೆ ಮಾಡುವ, ಜಾತ್ಯತೀತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಎತ್ತಿಹಿಡಿಯಬೇಕಾಗಿರುವ ಉಡುಪಿಯ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆರ್‌ಎಸ್‌ಎಸ್ ಧ್ವಜವನ್ನು ಸಾರ್ವಜನಿಕವಾಗಿ ಎತ್ತಿ ಹಿಡಿದು ಪ್ರದರ್ಶಿಸಿ ಹಿಂದುತ್ವ ವಾದವನ್ನು ಪ್ರದರ್ಶಿಸಿದ್ದಾರೆ. ಇದು ಅಕ್ಷಮ್ಯ ಎಂದು ದಸಂಸ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ ಟೀಕಿಸಿದ್ದಾರೆ.

ಪರ್ಯಾಯ ಎಂಬುದು ಒಂದು ಪುರೋಹಿತಶಾಹಿ ಖಾಸಗಿ ಮಠದ ಪೂಜೆಯ ವರ್ಗಾವಣೆಯ ಸಮಾರಂಭವಾಗಿದೆ. ಈ ಖಾಸಗಿ ಕಾರ್ಯ ಕ್ರಮಕ್ಕೂ ಸರಕಾರದಿಂದ ಕೋಟ್ಯಾಂತರ ರೂ. ಅನುದಾನ ಬಿಡುಗಡೆ ಮಾಡಲಾಗುತ್ತದೆ. ಅಷ್ಟಕ್ಕೂ ಇದು ಸರಕಾರಿ ಕಾರ್ಯಕ್ರಮ ಅಲ್ಲ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ ಸಣ್ಣ ಪುಟ್ಟ ಬೇರೆ ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾರಣಕ್ಕೆ ಸರಕಾರಿ ನೌಕರರನ್ನು ಅಮಾನತು ಮಾಡುತ್ತದೆ. ಸರಕಾರಿ ನೌಕರರು ಮುಖ್ಯಮಂತ್ರಿಯವರಿಗೆ ಮನವಿ ಕೊಟ್ಟ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿದೆ ಎಂಬ ಕಾರಣಕ್ಕೆ ಅಮಾನತು ಮಾಡಿದೆ. ದೇಶಾದ್ಯಂತ ಹಿಂದುತ್ವವಾದಿ ಗಲಭೆಗಳು, ಕೊಲೆಗಳನ್ನು ನಡೆಯುತ್ತಿರುವ ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ಹಿಂದುತ್ವವಾದಿ ಕೋಮಿನ ಧ್ವಜವನ್ನು ಪ್ರದರ್ಶಿಸುವುದು ಖಂಡನೀಯ ಎಂದು ಅವರು ಆರೋಪಿಸಿದ್ದಾರೆ.

ಈಗಾಗಲೇ ಜಿಲ್ಲಾಧಿಕಾರಿಯವರು ಒಂದು ಹಾರಿಕೆಯ ಸ್ಪಷ್ಟನೆ ನೀಡಿದ್ದು ಅದು ಸಮಂಜಸವಲ್ಲ. ಹಿಂದೆ ಯಾವುದೇ ಜಿಲ್ಲಾಧಿಕಾರಿಯವರೂ ಕೇವಲ ಒಂದು ಕೋಮಿನ ಬಗ್ಗೆ ಪರವಾಗಿದ್ದ ಉದಾಹರಣೆಗಳಿಲ್ಲ. ಅಷ್ಟಕ್ಕೂ ಜಿಲ್ಲಾಡಳಿತಕ್ಕೆ ಒಂದು ಜಿಲ್ಲೆಯ ಪ್ರಮುಖ ಖಾಸಗಿ ಕಾರ್ಯಕ್ರಮವನ್ನು ಯಾವುದೇ ಗೊಂದಲ, ಗಲಭೆಗಳಾಗದದಂತೆ ನಡೆಸುವ ಜವಾಬ್ದಾರಿ ಇರತ್ತದೆಯೇ ಹೊರತು ಸ್ವತಃ ಜಿಲ್ಲಾಧಿಕಾರಿಯವರೇ ಆರ್‌ಎಸ್‌ಎಸ್ ಅಥವಾ ಭಗವಾಧ್ವಜವನ್ನು ಬೀಸಿ ಪುರೋಹಿತಶಾಹಿಗಳ ಕಾರ್ಯಕ್ರಮಕ್ಕೆ ಚಾಲನೆ ಕೊಡುವುದು ಈ ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ ಎಂದು ಅವರು ದೂರಿದ್ದಾರೆ.

ಜಿಲ್ಲಾಧಿಕಾರಿ ಸರ್ವಜನಾಂಗದ ಸೌಹಾರ್ದತೆಯ ಪ್ರತೀಕವಾಗಬೇಕೇ ಹೊರತು, ಹಿಂದುತ್ವವಾದಿಗಳಿಗೆ ಬೆಂಬಲಿ ಸುವುದು ಸರಕಾರಿ ಸೇವಾ ನಿಯಮಕ್ಕೆ ವಿರುದ್ಧವಾದುದು. ಈ ಬೆಳವಣಿಗೆಯು ಶಾಂತಿ, ಸೌಹಾದರ್ತೆ ಬೀಡಾದ ಉಡುಪಿಗೆ ದಕ್ಕೆ ತರುವಂತಾದ್ದಾಗಿದೆ. ಈ ಕೂಡಲೇ ಜಿಲ್ಲಾಧಿಕಾರಿ ಸ್ವರೂಪ ಅವರನ್ನು ಅಮಾನತು ಮಾಡಬೇಕೆಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News