×
Ad

ಮೀನು ಮಾರಾಟ ಫೆಡರೇಷನ್‌ಗೆ ಸರಕಾರಿ ಜಾಗ ಗುತ್ತಿಗೆ ಒಪ್ಪಂದ ರದ್ದುಗೊಳಿಸುವಂತೆ ಆಗ್ರಹಿಸಿ ಉಸ್ತುವಾರಿ ಸಚಿವರಿಗೆ ಮನವಿ

Update: 2025-11-18 00:05 IST

ಉಡುಪಿ: ಮಲ್ಪೆ ಹನುಮಾನ್‌ನಗರದ ಸರಕಾರಿ ಜಾಗವನ್ನು ಮೀನು ಮಾರಾಟ ಫೆಡರೇಷನ್‌ಗೆ ಗುತ್ತಿಗೆಯಾಗಿ ನೀಡಿರುವ ಒಪ್ಪಂದವನ್ನು ತಕ್ಷಣವೇ ರದ್ದುಗೊಳಿಸುವಂತೆ ಆಗ್ರಹಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ಉಡುಪಿ ಜಿಲ್ಲಾಧಿಕಾರಿಗಳ ಮೂಲಕ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷರಾಗಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್‌ಗೆ ಕರ್ನಾಟಕ ಜಲ ಸಾರಿಗೆ ಮಂಡಳಿಯು ಮಲ್ಪೆಯ ಹನುಮಾನ್‌ನಗರದ ಸೀ ವಾಕ್, ಹನುಮಾನ್ ಭಜನಾ ಮಂದಿರದ ಸುತ್ತಮುತ್ತಲಿನ ಸುಮಾರು 8 ಎಕರೆ ವಿಸ್ತೀರ್ಣದ ಸರಕಾರಿ ಜಾಗವನ್ನು 15 ವರ್ಷಗಳ ಅವಧಿಗೆ ಕಳೆದ ಎಪ್ರಿಲ್ ತಿಂಗಳಿನಲ್ಲಿ ಗುತ್ತಿಗೆ ನೀಡಲಾಗಿದೆ.

ಮಲ್ಪೆ ಕಡಲ ತೀರದ ಪ್ರಕೃತಿ ರಮಣೀಯವಾದ ಈ ಜಾಗವನ್ನು ಸಹಕಾರಿ ಸಂಸ್ಥೆಗೆ ಗುತ್ತಿಗೆ ನೀಡಿರುವುದರಿಂದ ಅಲ್ಲಿನ ಸ್ಥಳೀಯ ಮೀನುಗಾರರಿಗೆ, ಸ್ಥಳೀಯ ಭಜನಾ ಮಂದಿರದವರಿಗೆ ಹಾಗೂ ಪ್ರವಾಸಿಗರಿಗೆ ಮುಂಬರುವ ದಿನಗಳಲ್ಲಿ ಬಹಳಷ್ಟು ತೊಂದರೆಯಾಗಲಿದೆ. ಈ ಪ್ರಕರಣದ ಬಗ್ಗೆ ವಿಶೇಷ ಗಮನಹರಿಸಿ ಈ ಸರಕಾರಿ ಜಾಗದ ಗುತ್ತಿಗೆ ಒಪ್ಪಂದವನ್ನು ರದ್ದುಗೊಳಿಸಿ ಆ ಸರಕಾರಿ ಜಾಗವನ್ನು ಸಾರ್ವಜನಿಕ ಉಪಯೋಗಕ್ಕಲ್ಲದೆ ಯಾವುದೇ ಸಂಸ್ಥೆಗೆ ನೀಡಬಾರದು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿಯನ್ನು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್, ಮಾಜಿ ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ನ ಸದಸ್ಯೆ ಆಶಾ ಚಂದ್ರಶೇಖರ್, ಕಡೆಕಾರ್ ಗ್ರಾಪಂ ಉಪಾಧ್ಯಕ್ಷ ನವೀನ್ ಶೆಟ್ಟಿ, ಅಂಬಲಪಾಡಿ ಗ್ರಾಪಂ ಸದಸ್ಯ ಲಕ್ಷ್ಮಣ್ ಪೂಜಾರಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಕೇಶ್ ಕುಂದರ್, ಸತೀಶ್ ಕೊಡವೂರು, ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಮಂಚಿ, ಕಾಂಗ್ರೆಸ್ ಯುವ ಮುಖಂಡರಾದ ಹಮ್ಮದ್ ಹಾಗೂ ಸಂಜಯ್ ಆಚಾರ್ಯ, ಮುಖಂಡರಾದ ಜಯವೀರ್, ಫೆಡ್ರಿಕ್ಸ್, ಶಿಲ್ಪಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News