×
Ad

ರಾಜ್ಯದಲ್ಲೇ ಅತ್ಯಧಿಕ ಮಳೆ ಬಿದ್ದರೂ, ಉಡುಪಿ ಜಿಲ್ಲೆಯಲ್ಲಿ ಶೇ.8ರಷ್ಟು ಮಳೆ ಕೊರತೆ

Update: 2025-09-02 22:17 IST

ಉಡುಪಿ, ಸೆ.2: ಸತತ ಮೂರನೇ ತಿಂಗಳು ಉಡುಪಿ ಜಿಲ್ಲೆ ರಾಜ್ಯದಲ್ಲೇ ಅತ್ಯಧಿಕ ಮಳೆ ಬೀಳುವ ಜಿಲ್ಲೆಯಾಗಿ ಗುರುತಿಸಿಕೊಂಡರೂ, ಆಗಸ್ಟ್ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆಯಲ್ಲಿ ಶೇ.8ರಷ್ಟು ಕೊರತೆ ಕಂಡುಬಂದಿದೆ. ಜಿಲ್ಲೆಯಲ್ಲಿ ಆಗಸ್ಚ್ ತಿಂಗಳ ವಾಡಿಕೆ ಮಳೆ 1064 ಮಿ.ಮೀ, ಆಗಿದ್ದರೆ ಈ ಬಾರಿ ಬಿದ್ದಿರುವುದು 975 ಮಿ.ಮೀ. ಮಳೆ ಮಾತ್ರ. ಆದರೆ ಇದು ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ ಬಿದ್ದಿರುವ ಮಳೆಗಿಂತ ಅಧಿಕ ಎನಿಸಿಕೊಂಡಿದೆ.

ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರ ನೀಡಿರುವ ಮಾಹಿತಿಯ ಪ್ರಕಾರ ಜೂನ್, ಜುಲೈ ತಿಂಗಳಿನಂತೆ, ಆಗಸ್ಟ್ ತಿಂಗಳಲ್ಲೂ ಉಡುಪಿ ಜಿಲ್ಲೆ ರಾಜ್ಯದಲ್ಲಿ ಅತ್ಯಧಿಕ ಮಳೆ ಬಿದ್ದ ಜಿಲ್ಲೆಯಾಗಿ ದಾಖಲೆಗೆ ಸೇರಿದೆ. ಆದರೆ ಜಿಲ್ಲೆಯ ಮಳೆಯ ಹಿಂದಿನ ಅಂಕಿಅಂಶಗಳನ್ನು ಪರಿಶೀಲಿಸಿದಾಗ, ನಿಜವಾಗಿಯೂ ಜಿಲ್ಲೆಯಲ್ಲಿ ವಾಡಿಕೆಯ ಮಳೆ ಸುರಿದಿರಲಿಲ್ಲ.

ಮಳೆಗಾಲದ ಮೂರು ತಿಂಗಳಲ್ಲಿ (ಜೂನ್, ಜುಲೈ, ಆಗಸ್ಟ್) ಬಿದ್ದ ಮಳೆಯನ್ನು ಗಮನಿಸಿದಾಗ ಜಿಲ್ಲೆಯಲ್ಲಿ ಒಟ್ಟಾರೆ ಯಾಗಿ ಶೇ.4ರಷ್ಟು ಅಧಿಕ ಮಳೆ ಬಿದ್ದಿದೆ. ಈ ಅವಧಿಯಲ್ಲಿ ಜಿಲ್ಲೆಯ ಸರಾಸರಿ ಮಳೆ 3655ಮಿ.ಮೀ. ಆಗಿದ್ದು, ಜಿಲ್ಲೆಯಲ್ಲಿ ಈ ಬಾರಿ 3799ಮಿ.ಮೀ. ಮಳೆ ಬಿದ್ದಿದೆ.

ಇದೇ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ ಮಳೆ 675.6ಮಿ.ಮೀ. ಆಗಿದ್ದರೆ ಈ ಬಾರಿ ರಾಜ್ಯದಲ್ಲಿ 786ಮಿ.ಮೀ. ಮಳೆಯಾಗಿದೆ. ಮಲೆನಾಡಿನ ಶಿವಮೊಗ್ಗ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಏಳು ಜಿಲ್ಲೆಗಳಲ್ಲಿ ವಾಡಿಕೆ ಮಳೆಯಲ್ಲಿ ಕೊರತೆ ಕಂಡುಬಂದಿದೆ ಎಂದು ಹವಾಮಾನ ಕೇಂದ್ರದ ಮಾಹಿತಿ ತಿಳಿಸಿದೆ.

ಹೆಬ್ರಿಯಲ್ಲಿ ಅತ್ಯಧಿಕ ಕೊರತೆ: ಅಚ್ಚರಿ ವಿಷಯವೆಂದರೆ ಉಡುಪಿ ಜಿಲ್ಲೆಯಲ್ಲೇ ಅತ್ಯಧಿಕ ಮಳೆ ಬೀಳುವ ತಾಲೂಕಾ ಗಿರುವ, ಪಶ್ಚಿಮ ಘಟ್ಟದ ತಪ್ಪಲಲ್ಲೇ ಇರುವ ಹೆಬ್ರಿ ತಾಲೂಕಿನಲ್ಲಿ ಆಗಸ್ಟ್ ತಿಂಗಳ ಮಳೆಯಲ್ಲಿ ಅತ್ಯಧಿಕ ಕೊರತೆ ಕಂಡುಬಂದಿದೆ. ಅಲ್ಲಿ ಆಗಸ್ಟ್ ತಿಂಗಳಲ್ಲಿ 1511ಮಿ.ಮೀ ಮಳೆ ಬೀಳ ಬೇಕಿದ್ದಲ್ಲಿ 1152ಮಿ.ಮೀ. ಮಳೆ ಮಾತ್ರ ಬಿದ್ದಿದೆ. ಈ ಮೂಲಕ ಶೇ.24ರಷ್ಟು ಕೊರತೆ ಕಂಡುಬಂದಿದೆ.

ಜಿಲ್ಲೆಯಲ್ಲಿ ಕಳೆದ ತಿಂಗಳು ಮಳೆಗೆ ಕೊರತೆ ಕಂಡುಬಂದಿರುವ ಇನ್ನೊಂದು ತಾಲೂಕು ಕಾರ್ಕಳ. ಇಲ್ಲಿ 1143 ಮಿ.ಮೀ. ಮಳೆಯಾಗಬೇಕಿದ್ದಲ್ಲಿ ಈ ಸಲ ದಾಖಲಾಗಿರುವುದು 926ಮಿ.ಮೀ. ಮಾತ್ರ. ಈ ಮೂಲಕ ಶೇ.19ರಷ್ಟು ಕೊರತೆ ಉಂಟಾಗಿದೆ. ಬ್ರಹ್ಮಾವರದಲ್ಲೂ ಶೇ.1 ಮಳೆ ಕೊರತೆ ಕಂಡುಬಂದಿದೆ. ಇಲ್ಲಿ 864ಮಿ.ಮೀ. ಮಳೆ ಯಾಗಬೇಕಿದ್ದು ಈ ಬಾರಿ 858 ಮಿ.ಮೀ. ಮಳೆಯಾಗಿದೆ.

ಆದರೆ ಉಳಿದ ಜಿಲ್ಲೆಯಲ್ಲಿ ಅಲ್ಪಪ್ರಮಾಣದಿಂದ ಸಾಧಾರಣ ಮಟ್ಟಿನಲ್ಲಿ ಅಧಿಕ ಮಳೆಯಾಗಿದೆ. ಕುಂದಾಪುರ ತಾಲೂಕಿನಲ್ಲಿ ಶೇ.22 (ವಾಡಿಕೆ ಮಳೆ 829ಮಿ.ಮೀ., ಬಿದ್ದಿರುವ ಮಳೆ 1008ಮಿ.ಮೀ.), ಉಡುಪಿಯಲ್ಲಿ ಶೇ.8 (781-844), ಬೈಂದೂರು ಶೇ.13 (970-1093), ಕಾಪು ಶೇ.2 (726- 740)ರಷ್ಟು ಅಧಿಕ ಮಳೆಯಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಉಡುಪಿ ಜಿಲ್ಲೆಯಲ್ಲಿ ಮಳೆಗಾಲದ ಮೂರು ತಿಂಗಳು ಜೂನ್‌1ರಿಂದ ಸೆ.2ರವರೆಗೆ ಬಿದ್ದಿರುವ ಮಳೆಯ ಪ್ರಮಾಣ ವಾಡಿಕೆ ಮಳೆ 3655ಮಿ.ಮೀ., ಬಿದ್ದಿರುವ ಮಳೆ 3799ಮಿ.ಮೀ. (ಶೇ.4 ಅಧಿಕ).

ಜಿಲ್ಲೆಯಲ್ಲಿ ತಾಲೂಕುವಾರು ಮಳೆಯ ಪ್ರಮಾಣ:-

ಕಾರ್ಕಳ: ವಾಡಿಕೆ ಮಳೆ 3732, ಬಿದ್ದ ಮಳೆ 3655ಮಿ.ಮೀ., ಶೇ.2 ಅಧಿಕ, ಕುಂದಾಪುರ: ವಾಡಿಕೆ ಮಳೆ 3031, ಬಿದ್ದ ಮಳೆ 3911 (ಶೇ.29ಅಧಿಕ), ಉಡುಪಿ: ವಾಡಿಕೆ ಮಳೆ 3056, ಬಿದ್ದ ಮಳೆ 3344 (ಶೇ.9ಅಧಿಕ), ಬೈಂದೂರು: ವಾಜಿಕೆ ಮಳೆ 3534, ಬಿದ್ದ ಮಳೆ 4069 (ಶೇ.15 ಅಧಿಕ), ಬ್ರಹ್ಮಾವರ: ವಾಡಿಕೆ ಮಳೆ 3195, ಬಿದ್ದ ಮಳೆ 3433 (ಶೇ.7 ಅಧಿಕ), ಕಾಪು: ವಾಡಿಕೆ ಮಳೆ 2913, ಬಿದ್ದ ಮಳೆ 3122 (ಶೇ.7 ಅಧಿಕ), ಹೆಬ್ರಿ: ವಾಡಿಕೆ ಮಳೆ 4820, ಬಿದ್ದ ಮಳೆ 4247 (ಶೇ.12 ಕೊರತೆ).

ಜನವರಿಯಿಂದ ಆಗಸ್ಟ್ 31ರವರೆಗೆ ಶೇ.23 ಅಧಿಕ ಮಳೆ: ಈ ವರ್ಷದ ಪ್ರಾರಂಭದಿಂದ ಈವರೆಗೆ ಜಿಲ್ಲೆಯಲ್ಲಿ ಬಿದ್ದ ಸಮಗ್ರ ಮಳೆಯ ಮಾಹಿತಿ ಯನ್ನು ಗಣನೆಗೆ ತೆಗೆದುಕೊಂಡರೆ ಒಟ್ಟಾರೆಯಾಗಿ ಶೇ.23ರಷ್ಟು ಅಧಿಕ ಮಳೆಯಾಗಿರು ವುದು ಕಂಡುಬರುತ್ತದೆ. ಈ ಪ್ರಮಾಣ ಕಳೆದ ವರ್ಷ ಶೇ.19 ಮಾತ್ರ ಇತ್ತು.

2025ರ ಜನವರಿ ಒಂದರಿಂದ ಆಗಸ್ಟ್ 31ರವರೆಗೆ ಜಿಲ್ಲೆಯ ವಾಡಿಕೆ ಮಳೆಯ ಪ್ರಮಾಣ 3856ಮಿ.ಮೀ. ಆಗಿದೆ. ಈ ವರ್ಷ ಬಿದ್ದಿರುವ ಮಳೆ 47387 ಮಿ.ಮೀ. (ಶೇ.23ರಷ್ಟು ಅಧಿಕ) ಆಗಿದೆ.

ಜನವರಿಯಿಂದ ಆಗಸ್ಟ್ ಕೊನೆಯವರೆಗೆ ತಾಲೂಕುವಾರು ಮಳೆಯ ಪ್ರಮಾಣವನ್ನು ನೋಡಿದಾಗ ಕಾರ್ಕಳ ತಾಲೂಕಿನ ವಾಡಿಕೆ ಮಳೆ 2953 ಮಿ.ಮೀ. ಆಗಿದ್ದು, ಈ ಅವಧಿಯಲ್ಲಿ 4752ಮಿ.ಮೀ. ಮಳೆಯಾಗಿದ್ದು, ಶೇ.20ರಷ್ಟು ಅಧಿಕ ಮಳೆ ತಾಲೂಕಿನಲ್ಲಿ ಕಂಡುಬಂದಿದೆ.

ಕುಂದಾಪುರ ತಾಲೂಕಿನ ವಾಡಿಕೆಗೆ ಮಳೆ 3230ಮಿ.ಮೀ. ಆಗಿದ್ದರೆ ಈ ಬಾರಿ 4709ಮಿ.ಮೀ. ಮಳೆ ಬಿದ್ದು ಶೇ.46ರಷ್ಟು ಅಧಿಕ ಮಳೆ ಸುರಿದಿದೆ. ಉಡುಪಿ ತಾಲೂಕಿನ ವಾಡಿಕೆ ಮಳೆ 3269ಮಿ.ಮೀ. ಆಗಿದ್ದು 4292 ಮಳೆ ಬೀಳುವ ಮೂಲಕ ಶೇ.31ರಷ್ಟು ಅಧಿಕ ಮಳೆಯನ್ನು ಕಂಡಿದೆ.

ಬೈಂದೂರು ತಾಲೂಕಿನ ವಾಡಿಕೆ ಮಳೆ 3755ಮಿ.ಮೀ. ಆಗಿದ್ದು ಈ ವರ್ಷ 4971ಮಿ.ಮೀ. ಮಳೆಯಾಗಿ ಶೇ.32ರಷ್ಟು ಅಧಿಕ ಮಳೆಯನ್ನು ತಾಲೂಕು ಕಂಡಿದೆ. ಬ್ರಹ್ಮಾವರದ ವಾಡಿಕೆ ಮಳೆ 3397ಮಿ.ಮೀ ಆಗಿದ್ದರೆ 4388 ಮಿ.ಮೀ. ಬೀಳುವ ಮೂಲಕ ಶೇ.29ರಷ್ಟು ಅಧಿಕ ಮಳೆ ತಾಲೂಕಿ ನಲ್ಲಿ ದಾಖಲಾಗಿದೆ.

ಕಾಪು ತಾಲೂಕಿನ ವಾಡಿಕೆ ಮಳೆ 3151ಮಿ.ಮೀ. ಆದರೆ, ಈ ಸಾಲಿನಲ್ಲಿ 4127ಮಿ.ಮೀ ಮಳೆಯಾಗುವ ಮೂಲಕ ಶೇ.31ರಷ್ಟು ಅಧಿಕ ಮಳೆಯಾಗಿದೆ. ಇನ್ನು ಹೆಬ್ರಿ ತಾಲೂಕಿನ ವಾಡಿಕೆ ಮಳೆ 5006ಮಿ.ಮೀ. ಆಗಿದ್ದು, ಈ ಬಾರಿ 5191 ಮಿ.ಮೀ. ಮಳೆ ಬಿದ್ದಿದೆ. ಇದರಿಂದ ತಾಲೂಕಿನಲ್ಲಿ ಶೇ.4ರಷ್ಟು ಅಧಿಕ ಮಳೆಯಾಗಿರುವುದು ಅಂಕಿ ಅಂಶಗಳಿಗೆ ಗೊತ್ತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಬಿ ಬಿ ಶೆಟ್ಟಿಗಾರ್

contributor

Similar News