ಗೂಗಲ್ ನೋಡಿ ವೈದ್ಯರಾಗುವುದು ಬೇಡ: ಡಾ.ಪಿ.ವಿ.ಭಂಡಾರಿ
ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಸಹಯೋಗದೊಂದಿಗೆ ವಾತ್ಸಲ್ಯ ಕ್ಲಿನಿಕ್‌ನ ವಿಂಶತಿ ಸಮಾರಂಭ ಮತ್ತು ಸ್ತ್ರೀ ಆರೋಗ್ಯ ವೈದ್ಯೆ ಡಾ.ರಾಜಲಕ್ಷ್ಮಿ ಬರೆದ ವಾತ್ಸಲ್ಯದ ಒಸಗೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಶನಿವಾರ ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ ನಡೆಯಿತು.
ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಕನ್ನಡ ಭಾಷೆಯಲ್ಲಿ ವೈದ್ಯರು ಬರೆದ ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳ ಅವಶ್ಯಕತೆ ಬಹಳಷ್ಟು ಇದೆ. ಗೂಗಲ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿ ಎಷ್ಟೋ ಬಾರಿ ತಾವೇ ವೈದ್ಯರಾಗುವುದು ನಮ್ಮ ಸಮಾಜದಲ್ಲಿ ನಡೆಯುತ್ತಿದೆ. ಇದು ಸಲ್ಲದು. ಆಯಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದ ವೈದ್ಯರು ಈ ವಿಚಾರದ ಕುರಿತು ಬರೆದಾಗ ಅದು ಜನರಿಗೆ ತಲುಪಲು ಸಾಧ್ಯ ಮತ್ತು ಆರೋಗ್ಯದ ಕುರಿತು ಇರುವ ಅಪನಂಬಿಕೆಗಳನ್ನು ಹೋಗಲಾಡಿಸಲು ಸಾಧ್ಯ ಎಂದರು.
ಉಡುಪಿಯ ರನಿತಾ ಹೆಲ್ತ್ ಕೇರ್ ಮುಖ್ಯಸ್ಥ ಡಾ.ಆರ್.ಎನ್.ಭಟ್ ಮಾತನಾಡಿ, ನಾವು ವಿವಿಧ ರೀತಿಯ ಋಣಗಳನ್ನು ಹೊಂದಿ ಬದುಕುತ್ತಿದ್ದೇವೆ ಈ ಋಣವನ್ನು ತೀರಿಸಬೇಕಾದರೆ ನಾವು ಮಾಡುವ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಅದೇ ರೀತಿ ಸಮಾಜಕ್ಕೆ ಅರ್ಪಣೆ, ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಹೆಚ್.ಪಿ. ವಹಿಸಿದ್ದರು. ಭದ್ರಾವತಿ ನಯನ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ವೀಣಾ ಭಟ್ ಪುಸ್ತಕ ಪರಿಚಯ ಮಾಡಿದರು. ನಿವೃತ್ತ ಕನ್ನಡ ಪ್ರಾಧ್ಯಾಪಕಿ ಮತ್ತು ಲೇಖಕಿ ಬಿ.ಮಹಾಲಕ್ಷ್ಮಿ ಆಶಯ ನುಡಿಗಳನ್ನಾಡಿದರು. ನಿವೃತ್ತ ಸರಕಾರಿ ನೌಕರ ಬಿ.ವಾಸುದೇವ ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಕಾರ್ಯಕ್ರಮದ ಮೊದಲು ಸ್ನೇಹಾ ಆಚಾರ್ಯ ಇವರಿಂದ ನೃತ್ಯ ಸಿಂಚನ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ವಂದಿಸಿದರು.