ಕಾರಿನ ಮೇಲೆ ಮರಬಿದ್ದು ಚಾಲಕ ಮೃತ್ಯು: ಅರಣ್ಯ ಇಲಾಖೆ ವಿರುದ್ಧ ಸಚಿವ ಖಾದರ್ ಆಕ್ರೋಶ
ಕಾರ್ಕಳ ತಾಲೂಕು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ
ಕಾರ್ಕಳ, ಆ.8: ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದ ಹೆಬ್ರಿಯ ಮೂರು ರಸ್ತೆ ಹತ್ತುರ್ಕೆ ಬಳಿ ಶುಕ್ರವಾರ ಸಂಜೆ ಚಲಿಸುತಿದ್ದ ಕಾರಿನ ಮೇಲೆ ಮರಬಿದ್ದು ಕಾರಿನ ಚಾಲಕ ಪ್ರಗತಿಪರ ಕೃಷಿಕ ಮೃತಪಟ್ಟ ಘಟನೆಯ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
ರೆಂಜಾಳ ಗ್ರಾಮಪಂಚಾಯತ್ ವ್ಯಾಪ್ತಿಯ ಹೇಡ್ಮೆ ಎಂಬಲ್ಲಿ ಕಂಡುಬಂದಿರುವ ಭೂಕುಸಿತ ಸಾಧ್ಯತೆಯ ಪ್ರದೇಶಕ್ಕೆ ಭೇಟಿ ನೀಡಿ ಎರಡು ಕುಟುಂಬಗಳ ಸದಸ್ಯರಿಗೆ ಸೂಕ್ತ ವ್ಯವಸ್ಥೆಯ ಭರವಸೆ ನೀಡಿದ ಬಳಿಕ ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿ ದಂತೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮತನಾಡುತಿದ್ದರು.
ನಿನ್ನೆ ಹೆಬ್ರಿಯಲ್ಲಿ ಅದಕ್ಕೆ ಹಿಂದೆ ಬೆಳಂಜೆಯಲ್ಲಿ ಇದೇ ರೀತಿ ಆಗಿದೆ. ನಿನ್ನೆಯ ಈ ಸಾವಿಗೆ ನೀವೆ ಕಾರಣರು ಎಂದು ನೇರವಾಗಿ ಅಧಿಕಾರಿಯನ್ನುದ್ದೇಶಿಸಿ ಹೇಳಿದ ಖಾದರ್, ನಿಮಗೆ ಈ ಬಗ್ಗೆ ಮೊದಲೇ ಎಚ್ಚರಿಕೆ ನೀಡಿದ್ದರೂ, ಮರವನ್ನು ತೆರವುಗೊಳಿಸಲಿಲ್ಲ. ಅರಣ್ಯ ಇಲಾಖೆಯೊಂದಿಗೆ ಲೋಕೋಪಯೋಗಿ ಇಲಾಖೆ, ಮೆಸ್ಕಾಂ ಇಲಾಖೆಗೂ ಇದು ಎಚ್ಚರಿಕೆ ಗಂಟೆ ಎಂದರು.
ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮಾತನಾಡಿ, ಅಪಾಯಕಾರಿ ಮರದ ಕುರಿತಂತೆ ಇಲಾಖೆಗಳಿಗೆ ಪದೇ ಪದೇ ಎಚ್ಚರಿಕೆ ನೀಡಿದರೂ, ಎಲ್ಲರೂ ಅದನ್ನು ನಿರ್ಲಕ್ಷ್ಯಿಸಿ ಈ ಘಟನೆಗೆ ಕಾರಣರಾಗಿದ್ದಾರೆ. ಮಳೆಗಾಲ ಪ್ರಾರಂಭಕ್ಕೆ ಮೊದಲೇ ಇದನ್ನು ಇಲಾಖೆಗಳ ಗಮನಕ್ಕೆ ತರಲಾಗಿತ್ತು ಎಂದರು.
ಇಡೀ ಮರವನ್ನು ಕಡಿಯಲು ಕೆಲವು ನಿಯಮಗಳಿವೆ. ಆದರೆ ಅಪಾಯಕಾರಿ ಕೊಂಬೆಗಳನ್ನು, ಗೆಲ್ಲನ್ನು ಕಡಿಯಲು ಯಾಕೆ ಮೀನಮೇಷ ಎಣಿಸುತ್ತೀರಿ. ಸಕಾಲದಲ್ಲಿ ಮರ ತೆರವು ಮಾಡಿದ್ದರೆ ನಿನ್ನೆಯ ದುರ್ಘಟನೆ ನಡೆಯುತ್ತೀತ್ತೇ ಎಂದು ಪ್ರಶ್ನಿಸಿದ ಖಾದರ್, ಈಗ ಆ ಕುಟುಂಬಕ್ಕೆ ಏನು ಉತ್ತರ ನೀಡುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿದರು.
ಪೊಲೀಸ್ ಇಲಾಖೆಗೆ ಅಭಿನಂದನೆ: ಸಭೆಯ ಪ್ರಾರಂಭದಲ್ಲಿ ನಿನ್ನೆ ಮುದರಂಗಡಿಯಲ್ಲಿ ನಡೆದ ಶೂಟೌಟ್‌ನ ಆರೋಪಿಗಳನ್ನು 12ಗಂಟೆಯೊಳಗೆ ಬಂಧಿಸಿದ ಉಡುಪಿ ಪೊಲೀಸ್ ಇಲಾಖೆಯನ್ನು ಹಾಗೂ ಸಭೆಯಲ್ಲಿ ಉಪಸ್ಥಿತ ರಿದ್ದ ಎಸ್ಪಿ ಹರಿರಾಮ್ ಶಂಕರ್‌ರನ್ನು ಖಾದರ್ ಅಭಿನಂದಿಸಿದರು. ಆರೋಪಿಗಳೆಲ್ಲರೂ ಉತ್ತರ ಭಾರತದ ಶಾರ್ಪ್ ಶೂಟರ್‌ಗಳಾಗಿದ್ದು, ಅಲ್ಲಿ ಅವರು ಎಲ್ಲೂ ಸಿಕ್ಕಿ ಬಿದ್ದಿರಲಿಲ್ಲ. ಉಡುಪಿ ಪೊಲೀಸರು ಚಾಣಾಕ್ಷತನದಿಂದ ಅವರನ್ನು ಪತ್ತೆ ಹಚ್ಚಿ ಮೊದಲ ಬಾರಿ ಬಂಧಿಸಿದ್ದಾರೆ. ಇದಕ್ಕಾಗಿ ಸಭೆಯ ಪರವಾಗಿ ಇಲಾಖೆಯನ್ನು ಹಾಗೂ ಎಸ್ಪಿ ಅವರನ್ನು ಅಭಿನಂದಿಸುವುದಾಗಿ ಹೇಳಿದರು.
ವಿವಿಧ ಇಲಾಖೆಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ಸಚಿವ ಖಾದರ್, ಮಳೆಗಾಲದಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅಧಿಕಾರಿಗಳು ಜನರು ಸಂಕಷ್ಟಕ್ಕೆ ಸಿಲುಕಿದಾಗ ತಕ್ಷಣ ಸ್ಪಂಧಿಸಬೇಕೆಂದು ತಾಕೀತು ಮಾಡಿದರು. ಈ ದಿನಗಳಲ್ಲಿ ನೀವು ದಿನ 24 ಗಂಟೆಯೂ ಕೆಲಸ ಮಾಡಬೇಕು. ತುರ್ತು ಸಂದರ್ಭದಲ್ಲಿ ತಕ್ಷಣವೇ ಸ್ಪಂಧಿಸಬೇಕು ಎಂದರು.
ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ತಾಲೂಕಿನಲ್ಲಿ ಬೆಳೆವಿಮೆ ಪ್ರಗತಿಯನ್ನು ಕೇಳಿದರು. ಕಳೆದ ಸಾಲಿನಲ್ಲಿ 1900 ಸದಸ್ಯರು ಒಟ್ಟು 4.5 ಕೋಟಿ ರೂ. ಬೆಳೆವಿಮೆ ಪರಿಹಾರ ಪಡೆದಿದ್ದಾರೆ ಎಂದು ಕೃಷಿ ಅಧಿಕಾರಿ ಉತ್ತರಿಸಿ ದರು. ಈ ಬಾರಿ ಬೆಳೆವಿಮೆಗೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 4188 ಮಂದಿ ಈಗಾಗಲೇ ಸದಸ್ಯರಾಗಿದ್ದಾರೆ ಎಂದರು.
ಮಳೆಹಾನಿಯಾದ ಸಂದರ್ಭದಲ್ಲಿ ಸ್ಥಳಕ್ಕೆ ತೆರಳುವ ವಿಎ, ಕುಟುಂಬಕ್ಕೆ ಅಲ್ಲಿಯೇ 5,500ರೂ. ಪ್ರಾಥಮಿಕ ಪರಿಹಾರ ಮೊತ್ತ ನೀಡಬೇಕು ಎಂದು ತಿಳಿಸಿ, ಬಳಿಕ ಆದ ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ತಿಳಿಸಿದರು. ನೀವು ನಿಮ್ಮ ಕೈಯಿಂದ ಹಣ ನೀಡುವುದಿಲ್ಲ. ಆದ ಹಾನಿಗೆ ಸ್ವಲ್ಪವಾದರೂ ನ್ಯಾಯ ಸಿಗುವಂತೆ ಪರಿಹಾರ ಮೊತ್ತ ನೀಡಿ ಎಂದು ಸಲಹೆ ನೀಡಿದರು.
ಕಾರ್ಕಳ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತ ಇಲಾಖೆಗಳ ಹಾಸ್ಟೆಲ್‌ಗಳ ಸ್ಥಿತಿಗತಿ ಬಗ್ಗೆ ವಿವರವಾಗಿ ಕೇಳಿ ತಿಳಿದರು. ಆರೋಗ್ಯ ಇಲಾಖೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಗ್ಗೆ ವಿವರವಾಗಿ ಮಾಹಿತಿಗಳನ್ನು ಪಡೆದುಕೊಂಡರು.
ಸಭೆಯಲ್ಲಿ ಶಾಸಕ ಸುನಿಲ್‌ಕುಮಾರ್, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಸಿಇಒ ಪ್ರತೀಕ್ ಬಾಯಲ್, ಎಸ್ಪಿ ಹರಿರಾಮ್ ಶಂಕರ್, ಕರಾವಳಿ ಅಭಿವೃದ್ಧಿ ಮಂಡಳಿಯ ಎಂ.ಎ.ಗಫೂರ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಉಪಸ್ಥಿತರಿದ್ದರು.