ರೆಂಜಾಳ ಭೂಕುಸಿತದ ಪ್ರದೇಶಕ್ಕೆ ಸಚಿವ ಯುಟಿ ಖಾದರ್ ಭೇಟಿ; ಸಂತ್ರಸ್ಥ ಕುಟುಂಬಕ್ಕೆ ಸೂಕ್ತ ವ್ಯವಸ್ಥೆಯ ಭರವಸೆ

Update: 2026-08-08 21:35 IST

ರೆಂಜಾಳ (ಉಡುಪಿ), ಆ.8: ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವರೂ ಆಗಿರುವ ಯು.ಟಿ.ಖಾದರ್ ಅವರು ಇಂದು ಭೂಕುಸಿತ ಅಪಾಯ ಎದುರಿಸುತ್ತಿರುವ ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಪೆರಾಲ್ದಬೆಟ್ಟು ಹೇಡ್ಮೆ ಪ್ರದೇಶಕ್ಕೆ ಭೇಟಿ ನೀಡಿ ಅಪಾಯದ ಗಂಭೀರತೆಯನ್ನು ಅರಿತು ಕೊಂಡರು.

ಈ ಸಂದರ್ಭದಲ್ಲಿ ಭೂಕುಸಿತದಿಂದ ಅಪಾಯ ಎದುರಿಸುತ್ತಿರುವ ಅಲ್ಲೇ ಸಮೀಪದಲ್ಲಿ ವಾಸವಾಗಿರುವ ಎರಡು ಕುಟುಂಬಗಳನ್ನು-ಹರಿಪ್ರಸಾದ್ ಹಾಗೂ ಸುಮಿತ್ರಾ- ಕಂಡು ಮಾತನಾಡಿಸಿದ ಸಚಿವರು, ಅವರಿಗೆ ಎಲ್ಲಾ ರೀತಿಯ ಸಹಾಯದ ಭರವಸೆಯನ್ನು ನೀಡಿದರು.

ಗ್ರಾಪಂನಿಂದ ಮನೆ ತೆರವು ಮಾಡಿ ರೆಂಜಾಳ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ತೆರಳುವಂತೆ ಸೂಚನೆ ಬಂದಿರುವುದನ್ನು ತಿಳಿಸಿದ ಹರಿಪ್ರಸಾದ್, ಶಾಲೆಯಲ್ಲಿ ವಾಸ ಮಾಡುವುದಕ್ಕಿರುವ ಸಮಸ್ಯೆಯನ್ನು ಹೇಳಿಕೊಂಡರು. ತಮಗೆ ಗ್ರಾಪಂ ವತಿಯಂದ ಸೂಕ್ತ ವ್ಯವಸ್ಥೆ ಮಾಡುವಂತೆ ಅವರು ಸಚಿವರಿಗೆ ಮನವಿ ಮಾಡಿದರು.

ಮಳೆಗಾಲದ ಮುಗಿಯುವವರೆಗೆ ಅವರಿಗೆ ಪ್ರತ್ಯೇಕ ವಾಸ್ತವ್ಯದ ವ್ಯವಸ್ಥೆ ಕಲ್ಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಒಂದು ಕಡೆ ಭೂಮಿ ಮೇಲಕ್ಕೆದ್ದಿರುವ ಪ್ರದೇಶವನ್ನು ವೀಕ್ಷಿಸಿದ ಸಚಿವರು, ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾದ ಭೂವಿಜ್ಞಾನಿಗಳು ಹಾಗೂ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅವರ ವರದಿಯನ್ನಾಧರಿಸಿ ಮುಂದಿನ ಕ್ರಮವನ್ನು ಜಿಲ್ಲಾಡಳಿತ ತೆಗೆದುಕೊಳ್ಳಲಿದೆ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News