×
Ad

ದೈವರಾಧನೆ ಜೊತೆಗೆ ಶಿಕ್ಷಣಕ್ಕೆ ಆದ್ಯತೆ ಅಗತ್ಯ: ರಿಷಬ್ ಶೆಟ್ಟಿ

Update: 2023-09-03 17:53 IST

ಉಡುಪಿ, ಸೆ.3: ಪಾಣರ ಸಮುದಾಯದ ಮಕ್ಕಳಿಗೆ ದೈವರಾಧನೆ ಜೊತೆಗೆ ಶಿಕ್ಷಣ ಅತೀ ಅಗತ್ಯವಾಗಿದೆ. ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಶಿಕ್ಷಣದ ಜೊತೆ ಆಚಾರ ವಿಚಾರ ಸಂಸ್ಕೃತಿ ದೈವರಾಧನೆಯನ್ನು ಮುಂದುವರೆಸಿಕೊಂಡು ಹೋಗುವುದರಿಂದ ಅದ್ಭುತ ಸಮಾಜ ಕಟ್ಟಲು ಸಾಧ್ಯ. ಸಮಾಜದ ಸಮುದಾಯ ಭವನ ನಿರ್ಮಿಸಲು ಸರಕಾರಕ್ಕೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ಚಲನಚಿತ್ರ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪಾಣ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಉಡುಪಿ ಜಿಲ್ಲೆ ಇದರ ವತಿಯಿಂದ ರವಿವಾರ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಜಿಲ್ಲಾ ಪಾಣರ ವಾರ್ಷಿಕೋತ್ಸವ ಸಮಾರಂಭ ಮತ್ತು ಸಮಾವೇಶದಲ್ಲಿ ಸಮುದಾಯದ ಹಿರಿಯರನ್ನು ಗೌರವಿಸಿ ಅವರು ಮಾತನಾಡುತಿದ್ದರು.

ದೈವಾರಾಧನೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಇಲ್ಲಿ ದೇವಸ್ಥಾನ ಗಳು ಇರುವ ಮೊದಲೇ ದೈವರಾಧನೆ ಇತ್ತು ಎಂಬುದು ಅಧ್ಯಯನ ದಿಂದ ಕಂಡುಕೊಂಡಿದ್ದೇವೆ. ಪ್ರಕೃತಿಯ ಆರಾಧನೆಯನ್ನು ಇಲ್ಲಿನ ಜನ ಮಾಡುತ್ತಿದ್ದರು. ಕಲೆಯಲ್ಲಿ ತುಂಬಾ ಪ್ರವೀಣರಾಗಿದ್ದ ಪಾಣರ ಸಮುದಾಯ ದೈವನರ್ಕತರಾಗಿ ಮೂಡಿಬರಲು ಸಾಧ್ಯವಾಗಿದೆ ಎಂದರು.

ಸಂಘದ ಲೋಗೋ ಅನಾವರಣಗೊಳಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ನಲಿಕೆಯವರದ್ದು ವಿನಯಶೀಲ ವ್ಯಕ್ತಿತ್ವ ಹೊಂದಿರುವ ಸಮಾಜ. ಈ ಜಗತ್ತಿನಲ್ಲಿ ಸೂರ್ಯಚಂದ್ರ ಇರುವವರೆಗೆ ದೈವಾರಾಧನೆಯ ಕೆಲಸ ವನ್ನು ಈ ಸಮುದಾಯ ಕೈಬಿಡಬಾರದು. ಇದು ನಮ್ಮನ್ನು ರಕ್ಷಣೆ ಮಾಡುವ ವ್ಯವಸ್ಥೆಯಾಗಿರುವುದರಿಂದ ದೈವರಾಧನೆ ನಿಮಗಿಂತ ಈ ಜಗತ್ತಿಗೆ ಅತೀ ಅವಶ್ಯಕವಾಗಿದೆ. ಆದುದರಿಂದ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಎಂದರು.

ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ಯಮಿ ಸದಾಶಿವ ಹೆಗ್ಡೆ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಾಂಡುರಂಗ ಎಸ್.ಪಡ್ಡಂ ವಹಿಸಿದ್ದರು.

2022-23ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕೋವಿಡ್ ಸಮಯದಲ್ಲಿ ಕಿಟ್ ವಿತರಿಸಿ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ ಕಿನ್ನಿಮುಲ್ಕಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವನರ್ತಕ ಗುಡ್ಡ ಪಾಣರ ಮೂಳೂರು, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್, ದೈವ ನರ್ತಕರಾದ ಡಾ.ರವೀಶ್ ಪರವ ಪಡು ಮಲೆ, ನಾಗರಾಜ್ ಪಾಣ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಕಲಾವಿದ ಬೊಗ್ರ ಶೇರಿಗಾರ್, ಉದ್ಯಮಿ ರತ್ನಾಕರ ಶೆಟ್ಟಿ, ಮುಖ್ಯ ಅತಿಥಿಗಳಾಗಿದ್ದರು.

ವೇದಿಕೆಯಲ್ಲಿ ಜಿಲ್ಲಾ ದೈವಾರಾಧನೆ ಸಮಿತಿಯ ಅಧ್ಯಕ್ಷ ಮುನ್ನ ಎರ್ಮಾಳು, ಗೌರವಾಧ್ಯಕ್ಷ ಸಾಧು ಪಾಣ ಮಂಚಿ, ಗೌರವ ಸಲಹೆಗಾರ ಸುಬ್ಬು ಪಾಣ ಕುಕ್ಕೆಹಳ್ಳಿ, ದ.ಕ. ಜಿಲ್ಲಾಧ್ಯಕ್ಷ ಜನಾರ್ದನ ಬುಡೋಳಿ, ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಲಲಿತಾ ಸಖಾರಾಮ್, ಸಂಘದ ಮೂಡಬಿದಿರೆ ಅಧ್ಯಕ್ಷ ಪದ್ಮನಾಭ ಮೂಡಬಿದಿರೆ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎನ್.ಪ್ರಭಾಕರ್ ಉಪಸ್ಥಿತರಿದ್ದರು.

ಸಂಘದ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಎಚ್.ಸಖಾರಾಮ್ ಮಾಸ್ತರ್ ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನಾ ಕಡಿಯಾಳಿ ದೇವಸ್ಥಾನದಿಂದ ರಾಜಾಂಗಣದವರೆಗೆ ಮೆರವಣಿಗೆ ನಡೆಯಿತು. ಕೊನೆಯಲ್ಲಿ ಹಾಸ್ಯ ಕಲಾವಿದರಿಂದ ಯಕ್ಷ ತೆಲಿಕೆ ಯಕ್ಷಗಾನ ಪ್ರದರ್ಶನಗೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News