×
Ad

ಮಹಿಳಾ ದೌರ್ಜನ್ಯ ಕೊನೆಯಾಗಿ ಸಮಾನತೆ ಬರಲಿ: ಡಾ.ಅನುಪಮಾ

Update: 2023-08-20 18:29 IST

ಉಡುಪಿ, ಆ.20: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಕಪ್ಪು ಉಡುಪಿನಲ್ಲಿ ಮಹಿಳೆಯರು ಎಂಬ ವಿಶಿಷ್ಟವಾದ ಮೌನ ಪ್ರತಿಭಟನೆಯನ್ನು ಇಂದು ಉಡುಪಿ ಮದರ್ ಆಫ್ ಸಾರೋಸ್ ಚರ್ಚ್‌ನ ಎದುರು ಇರುವ ಕೆಎಂ ಮಾರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಒಕ್ಕೂಟದ ಸದಸ್ಯರು ಹಾಗು ಸಮಾನ ಮನಸ್ಕ ಬೆಂಬಲಿಗರು ಕಪ್ಪುವಸ್ತ್ರ ಧರಿಸಿ ಹಾಗೂ ಕಪ್ಪು ಪಟ್ಟಿ ಕಟ್ಟಿಕೊಂಡು ಕೈಯಲ್ಲಿ ಪೋಸ್ಟರ್‌ಗಳನ್ನು ಹಿಡಿದು, ಸಾಲಾಗಿ ನಿಂತು ಮಹಿಳೆಯರ ಮೇಲೆ ನಡೆಯುತ್ತಿರುವ ಎಲ್ಲ ರೀತಿಯ ದೌರ್ಜನ್ಯಗಳನ್ನು ಖಂಡಿಸಿದರು. ಸಂಜೆ 4.30ರಿಂದ 5ಗಂಟೆಯವರೆಗೆ ಸುಮಾರು ಅರ್ಧ ಗಂಟೆಗಳ ಕಾಲ ಪ್ರತಿಭಟನೆ ನಡೆಸಲಾಯಿತು.

ಬಳಿಕ ಮಾತನಾಡಿದ ಒಕ್ಕೂಟದ ಪ್ರಮುಖರಾದ ಲೇಖಕಿ, ಕವಯತ್ರಿ ಡಾ. ಎಚ್.ಎಸ್.ಅನುಪಮಾ, ದೇಶದ ಎಲ್ಲ ಕಡೆಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಜಾತಿ, ಧರ್ಮ, ದೇಶ, ಸಿದ್ಧಾಂತ, ಪಕ್ಷ ಹಾಗೂ ಮಾರುಕಟ್ಟೆ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ ಹಾಗೂ ದೌರ್ಜನ್ಯ ನಿಲ್ಲಬೇಕು. ನಾವು ಮನುಷ್ಯರು ಪ್ರೀತಿಯಿಂದ ಬಾಳಬೇಕು. ಆ ಮೂಲಕ ಪ್ರೀತಿಯೇ ನಮ್ಮ ರಾಜಕಾರಣ ಆಗಬೇಕು ಎಂದು ತಿಳಿಸಿದರು.

ಕಪ್ಪು ಉಡುಪಿನವಲ್ಲಿ ಮಹಿಳೆಯರು ಎಂಬ ಮೌನ ಪ್ರತಿಭಟನೆಯಲ್ಲಿ ಕಪ್ಪು ಬಟ್ಟೆ ಧರಿಸುವ ಮೂಲಕ ನಮ್ಮ ಪ್ರತಿರೋಧ ಹಾಗೂ ಮನಸ್ಸಿನಲ್ಲಿರುವ ಹೇಳಿಕೆಯನ್ನು ವ್ಯಕ್ತಪಡಿಸಿದ್ದೇವೆ. ಆ ಮೂಲಕ ಹೆಣ್ಣು ಮಕ್ಕಳ ಮೇಲೆ ವಿವಿಧ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಕೊನೆಯಾಗಬೇಕು. ಈ ದೌರ್ಜನ್ಯ, ಹಿಂಸೆಯ ದಿನಗಳು ದೂರವಾಗಿ ಸ್ವಾತಂತ್ರ್ಯ, ಸಮಾನತೆಯ ದಿನಗಳು ಬರಬೇಕು ಎಂದು ಅವರು ಆಶಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ತುಳು ಅಕಾಡೆಮಿ ಮಾಜಿ ಅಧ್ಯಕ್ಷೆ, ಲೇಖಕಿ ಜಾನಕಿ ಬ್ರಹ್ಮಾವರ, ಹಿರಿಯ ಚಿಂತಕ ಪ್ರೊ.ಫಣಿರಾಜ್, ಫಾ.ವಿಲಿಯಂ ಮಾರ್ಟಿಸ್, ಒಕ್ಕೂಟದ ಪ್ರಮುಖರಾದ ವಾ ಪೆರಿಯಾಡಿ, ಮಂಜುಳಾ ಸುನೀಲ್, ಅರು ದಂತಿ ತುಮಕೂರು, ಮುಮ್ತಾಜ್ ತುಮಕೂರು, ರೇಖಾಂಬ ಶಿವಮೊಗ್ಗ, ಅಖಿಲಾ ಬೆಂಗಳೂರು, ಕೃತಿ ಸಾಗರ, ಮಮತಾ ನಿರಂಜನ್, ಪದ್ಮಾಕ್ಷಿ ಶಿವಮೊಗ್ಗ, ಪವಿತ್ರಾ ಮಂಗಳೂರು, ಮಲ್ಲಿಕಾ ಜ್ಯೋತಿಗೊಡ್ಡೆ, ಸುಶೀಲಾ ನಾಡ, ಸುಲೋಚನಾ ಕೊಡವೂರು, ಗೀತಾ ಬೈಂದೂರು, ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್, ರಾಮಾಂಜಿ ನಮ್ಮ ಭೂಮಿ, ರೋಶನಿ ಒಲಿವೇರಾ, ವರೋನಿಕಾ ಕರ್ನೆಲಿಯೋ, ದಸಂಸ ಮುಖಂಡ ಮಂಜುನಾಥ್ ಗಿಳಿಯಾರು ಮೊದಲಾದವರು ಉಪಸ್ಥಿತರಿದ್ದರು.






 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News