×
Ad

ಸಣ್ಣಪುಟ್ಟ ಭಾಷೆಗಳಿಗೆ ಇಂಗ್ಲಿಷ್, ಹಿಂದಿಯಿಂದ ಆತಂಕ: ಬಿ.ಎಂ.ಬಶೀರ್ ಕಳವಳ

ಕುಂದಾಪುರದಲ್ಲಿ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ ಉದ್ಘಾಟನೆ

Update: 2025-12-28 19:34 IST

ಕುಂದಾಪುರ: ಭಾರತ ದೇಶವು ವಿಶ್ವದಲ್ಲಿಯೇ ಅತ್ಯಧಿಕ ಭಾಷಿಕರನ್ನು ಹೊಂದಿರುವ ದೇಶವಾಗಿದ್ದು ಒಂದು ಕಾಲದಲ್ಲಿ ನಮ್ಮಲ್ಲಿ 1,600ಕ್ಕೂ ಮಿಕ್ಕಿ ಭಾಷೆಗಳಿದ್ದವು. ಭಾಷೆ ಪರಸ್ಪರ ಮನುಷ್ಯರನ್ನು ಬೆಸೆಯುತ್ತದೆ. ಆದರೆ ಇಂದು ಇಂಗ್ಲಿಷ್ ಪ್ರಾದೇಶಿಕ ಭಾಷಿಗರ ಮಧ್ಯೆ ಗೋಡೆ ನಿರ್ಮಿಸಿದೆ. ಸೃಜನಶೀಲ, ಕ್ರೀಯಾಶೀಲ ಗ್ರಾಮೀಣರನ್ನು ಇಂಗ್ಲಿಷ್ ಮಂಕಾಗಿಸಿದೆ. ಸಣ್ಣ ಪುಟ್ಟ ಭಾಷೆಗಳಿಗೆ ಇಂಗ್ಲಿಷ್, ಹಿಂದಿಯಿಂದ ಆತಂಕ ಎದುರಾಗಿದೆ ಎಂದು ಕವಿ, ಕಥೆಗಾರ, ಪತ್ರಕರ್ತ ಬಿ.ಎಂ.ಬಶೀರ್ ಕಳವಳ ವ್ಯಕ್ತಪಡಿಸಿದ್ದಾರೆ.

ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಐವತ್ತರ ಅಂಗವಾಗಿ ́ಮನುಷ್ಯತ್ವದೆಡೆಗೆ ಸಮುದಾಯದ ಜಾಥಾ’ದ ಭಾಗವಾಗಿ ಕುಂದಾಪುರದ ನಾನಾಸಾಹೇಬ ರಸ್ತೆ ಹೆಂಚು ಕಾರ್ಮಿಕರ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ರವಿವಾರ ನಡೆದ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿಯನ್ನು ತನ್ನ ಅಮ್ಮ ತಟ್ಟಿದ ರೊಟ್ಟಿ ಎಂಬ ಕವನ ವಾಚಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಬಹುಭಾಷೆ, ಬಹು ಸಂಸ್ಕೃತಿಯ ಅರಿವು ನಮ್ಮನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಿಸುತ್ತದೆ. ಇಂದು ಭಾಷೆಗಳನ್ನೇ ಗೋಡೆಗಳಾಗಿ ಪರಿವರ್ತಿಸಿದ್ದು, ಮನುಷ್ಯರನ್ನು ವಿಭಾಗಿಸುವುದಕ್ಕೆ, ಪ್ರತ್ಯೇಕಿಸುವುದಕ್ಕೆ ಭಾಷೆಯನ್ನು ಬಳಸುತ್ತಿದ್ದೇವೆ. ಭಾಷೆಯಿದ್ದು, ಭಾಷಾ ಹೀನರಾಗಬಾರದು. ಸಮುದಾಯದ ಕಾರ್ಯ ಭಾಷೆಯನ್ನು ಮೀರಿದ್ದು ಎಂದವರು ಶ್ಲಾಘಿಸಿದರು.

ಸ್ವಾಗತ ಸಮಿತಿ ಕಾರ್ಯದರ್ಶಿ ಗುಂಡಣ್ಣ ಸಿ.ಕೆ. ಮಾತನಾಡಿ, ಕಾವ್ಯ ಅರ್ಥೈಸಲು ಭಾಷೆಯೇ ಬೇಕು ಅಂತ ಇಲ್ಲ. ಭಾವನೆಯಿಂದಲೂ ಅರ್ಥೈಸಬಹುದು. ಆದರೆ ಈಗಿನ ಕೆಲ ಕವನಗಳಲ್ಲಿ ಸಾಮಾಜಿಕ ಮೌಲ್ಯ, ಸಮಾಜಕ್ಕೆ ಪೂರಕವಾಗುವಂತಹ ಅಂಶಗಳು ಕಡಿಮೆಯಾಗಿವೆ. ಕವನಗಳ ಅಂತಃಸತ್ವ ಅರಿಯಲು ಇಂತಹ ಬಹುಭಾಷಾ ಕವಿಗೋಷ್ಠಿಗಳು ಸಹಕಾರಿ. ವರ್ಷವೀಡಿ ರಾಜ್ಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಜನವರಿಯಲ್ಲಿ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಬೀದಿ ನಾಟಕ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಅಧ್ಯಕ್ಷತೆಯನ್ನು ಸಮುದಾಯ ಕರ್ನಾಟಕದ ಅಧ್ಯಕ್ಷ ಶಶಿಧರ್ ಜೆ.ಸಿ.ವಹಿಸಿದ್ದರು. ಜನವಾದಿ ಪ್ರಕಾಶನ ಗುಂಡ್ಮಿಯ ಕೆ.ಕಮಲಾ ಮಯ್ಯ, ಸಮುದಾಯ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಮನೋಜ್‌ ವಾಮಂಜೂರು, ಬಹುಭಾಷಾ ಕವಿಗೋಷ್ಠಿ ಸಿದ್ಧತಾ ಸಮಿತಿ ಅಧ್ಯಕ್ಷ ರಾಮಚಂದ್ರ ನಾವುಡ, ಸಮುದಾಯ ಕುಂದಾಪುರದ ಹಿರಿಯರಾದ ಜಿ.ವಿ. ಕಾರಂತ್ ಮೊದಲಾದವರು ಉಪಸ್ಥಿತರಿದ್ದರು.

ಸಮುದಾಯ ಕುಂದಾಪುರದ ಅಧ್ಯಕ್ಷ ಡಾ.ಸದಾನಂದ ಬೈಂದೂರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ವಾಸುದೇವ ಗಂಗೇರ ನಿರೂಪಿಸಿದರು.

ಆರಿಫ್ ರಾಜಾ ಅಧ್ಯಕ್ಷತೆಯಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ಮೊದಲ ಗೋಷ್ಠಿಯಲ್ಲಿ ಬಾಬು ಪಾಂಗಾಳ(ಕೊರಗ), ರೊನಿ ಕ್ರಾಸ್ತಾ ಕೆಲರೈ (ಕೊಂಕಣಿ), ರೇಣುಕಾ ರಮಾನಂದ (ಕನ್ನಡ), ಅಮೃತಾ ಶೆಟ್ಟಿ ಆತ್ರಾಡಿ (ತುಳು), ವಿಲ್ಸನ್ ಕಟೀಲ್ (ಕನ್ನಡ), ಎರಡನೇ ಗೋಷ್ಠಿಯಲ್ಲಿ ರವೀಂದ್ರನ್ ಪಾಡಿ (ಮಲಯಾಳಂ), ಫಾತಿಮಾ ರಲಿಯಾ (ಕನ್ನಡ), ಸುಮಿತ್ ಮೇತ್ರಿ (ಕನ್ನಡ), ಜೋಸೆಫ್ ಮಲ್ಲಾಡಿ (ಧಾರವಾಡ ಕನ್ನಡ), ಕವಿ ಮುಅದ್ ಜಿ.ಎಂ.(ಬ್ಯಾರಿ) ಕವನಗಳನ್ನು ವಾಚಿಸಿದರು.

ರಮೇಶ್ ಗುಲ್ವಾಡಿ, ಗಣೇಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಉದಯ ಗಾಂವ್ಕರ್ ಸಂಯೋಜಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News