×
Ad

ಕೊಲ್ಲೂರಿನ ಸಮಗ್ರ ಅಭಿವೃದ್ಧಿಗಾಗಿ ಕೊಲ್ಲೂರು ಪ್ರಾಧಿಕಾರ ಸ್ಥಾಪನೆ: ಸಚಿವ ರಾಮಲಿಂಗಾ ರೆಡ್ಡಿ

Update: 2025-12-27 21:04 IST

ಬೈಂದೂರು: ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಕೊಲ್ಲೂರಿನ ಸಮಗ್ರ ಅಭಿವೃದ್ಧಿಗಾಗಿ ಕೊಲ್ಲೂರು ಪ್ರಾಧಿಕಾರವನ್ನು ಸ್ಥಾಪಿಸುವುದಾಗಿ ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ವಿಭಾಗದಿಂದ ಸುಮಾರು ಎಂಟು ಕೋಟಿ ರೂ.ವೆಚ್ಚದಲ್ಲಿ ಯಡ್ತರೆ ಗ್ರಾಮದ ಸುಮಾರು ಎರಡು ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಬೈಂದೂರು ನೂತನ ಬಸ್ ನಿಲ್ದಾಣವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೊಲ್ಲೂರು ಪ್ರಾಧಿಕಾರದ ಸ್ಥಾಪನೆಗಾಗಿ ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಶಾಸಕರು ಸೇರಿದಂತೆ ಎಲ್ಲರ ಒಕ್ಕೊರಳ ಮನವಿ ಯಂತೆ ಕಳೆದ ವಿಧಾನಮಂಡಲ ಅಧಿವೇಶನದಲ್ಲಿ ಘೋಷಿಸಿದ ಚಂದ್ರಗುತ್ತಿ ಪ್ರಾಧಿಕಾರದ ಮಾದರಿಯಲ್ಲಿ ಕೊಲ್ಲೂರು ಪ್ರಾಧಿಕಾರವನ್ನು ಸ್ಥಾಪಿಸುವುದಾಗಿ ಸಚಿವರು ತಿಳಿಸಿದರು.

ನಿಮ್ಮೆಲ್ಲರ ಬೇಡಿಕೆಯಂತೆ ಕೂಡಲೇ ಕೊಲ್ಲೂರು ಪ್ರಾಧಿಕಾರವನ್ನು ಸ್ಥಾಪಿಸುತ್ತೇವೆ. ಆದರೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯಾರಂಭ ಮಾಡಿ ಒಂದು ವರ್ಷವಷ್ಟೇ ಆಗಿರುವುದರಿಂದ ಇದರ ಅಧಿಕಾರಾವಧಿ ಮುಗಿದ ಬಳಿಕ ಅದನ್ನು ಜಾರಿಗೊಳಿಸುವುದಾಗಿ ರಾಮಲಿಂಗಾ ರೆಡ್ಡಿ ತಿಳಿಸಿದರು.

ಕೊಲ್ಲೂರಿಗೆ ಕೆಎಸ್ಸಾರ್ಟಿಸಿ ಬಸ್ ಸಂಪರ್ಕ ಒದಗಿಸುವ ಬೇಡಿಕೆಗೆ ಸ್ಪಂಧಿಸಿ ಮಾತನಾಡಿದ ಅವರು, ಕೊರೋನಾದ ಬಳಿಕ ದೂರದ ಕೇಂದ್ರಕ್ಕೆ (ಲಾಂಗ್ ರೂಟ್) ಹೊಸ ಬಸ್ ಓಡಿಸುವುದನ್ನು ನಿಲ್ಲಿಸಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಹೊಸ ಲಕ್ಸುರಿ ಬಸ್‌ಗಳನ್ನು ನಿಗಮ ಓಡಿಸಿಲ್ಲ. ಇದೀಗ 70 ಹೊಸ ಲಕ್ಸುರಿ ಬಸ್‌ಗಳ ಸೇರ್ಪಡೆಗೆ ಟೆಂಡರ್ ಆಗಿದೆ. ಇನ್ನೊಂದು ತಿಂಗಳಲ್ಲಿ ಲಾಂಗ್‌ರೂಟ್ ಬಸ್‌ಗಳನ್ನು ಮಾರ್ಗಕ್ಕಿಳಿಸುವುದಾಗಿ ರೆಡ್ಡಿ ತಿಳಿಸಿದರು.

ಈ 70 ಹೊಸ ಬಸ್‌ಗಳು 35 ನಗರಗಳಿಗೆ ಓಡಲಿವೆ. ಇವುಗಳಲ್ಲಿ ಮಂಗಳೂರು ವಿಭಾಗಕ್ಕೆ ಅಗ್ರ ಪ್ರಾಶಸ್ತ್ಯ ನೀಡುತ್ತೇವೆ. ಏಕೆಂದರೆ ಬೆಂಗಳೂರು ಬಿಟ್ಟರೆ ಮಂಗಳೂರು ಅತೀ ಹೆಚ್ಚು ಜನರನ್ನು ಆಕರ್ಷಿಸುವ ನಗರ. ಅತಿ ಹೆಚ್ಚು ಮೆಡಿಕಲ್, ಇಂಜಿನಿಯರಿಂಗ್, ಸೇರಿ ವಿವಿಧ ವಿದ್ಯಾಸಂಸ್ಥೆಗಳಿರುವ ವಿಭಾಗ. ಇಲ್ಲಿ ಜನರ ಓಡಾಟವೂ ಹೆಚ್ಚಿದೆ. ಆದ್ದರಿಂದ ಮಂಗಳೂರು ವಿಭಾಗಕ್ಕೆ ಆದ್ಯತೆ ನೀಡುತ್ತೇವೆ ಎಂದರು.

900 ಹೊಸ ಬಸ್: ಇದರೊಂದಿಗೆ 2000 ಹೊಸ ಬಸ್‌ಗಳನ್ನು (ಸಾಮಾನ್ಯ) ಖರೀದಿಸಲಾಗುತ್ತಿದೆ. ಇವುಗಳಲ್ಲಿ 900 ಬಸ್‌ಗಳನ್ನು ಕೆಎಸ್ಸಾರ್ಟಿಸಿಗೆ ನೀಡಲಾಗುವುದು. 15 ಜಿಲ್ಲೆಗಳಿಗೆ ಹಂಚುವ ಈ ಬಸ್‌ಗಳಲ್ಲೂ ಮಂಗಳೂರು-ಉಡುಪಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಆಗ ಉಡುಪಿ ಜಿಲ್ಲೆಗೆ ಹೆಚ್ಚಿನ ಬಸ್‌ಗಳ ನಿಮ್ಮ ಬೇಡಿಕೆಗೆ ಮನ್ನಣೆ ನೀಡ ಲಾಗುತ್ತದೆ ಎಂದೂ ರಾಮಲಿಂಗಾ ರೆಡ್ಡಿ ನುಡಿದರು.

ಮಂಗಳೂರು ವಿಭಾಗಕ್ಕೆ 100 ಎಲೆಕ್ಟ್ರಿಕ್ ಬಸ್‌ಗಳು ಶೀಘ್ರದಲ್ಲೇ ಬರಲಿವೆ ಎಂದ ಸಾರಿಗೆ ಸಚಿವರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚೆಚ್ಚು ಕೆಎಸ್ಸಾರ್ಟಿಸಿ ಬಸ್‌ಗಳನ್ನು ಓಡಿಸಬೇಕೆಂದು ಎಲ್ಲಾ ಶಾಸಕರು, ಜನಪ್ರತಿನಿಧಿ ಗಳು ಹೇಳುತ್ತಾರೆ. ಆದರೆ ಕೆಎಸ್ಸಾರ್ಟಿಸಿ ಗ್ರಾಮೀಣ ಭಾಗವು ಸೇರಿದಂತೆ ಬಸ್‌ಗೆ ಪರ್ಮಿಟ್ ಪಡೆಯುತಿದ್ದಂತೆ ಖಾಸಗಿಯವರು ನ್ಯಾಯಾಲಯದ ಮೆಟ್ಟಿಲು ಏರಿ ತಡೆಯಾಜ್ಞೆ ತರುತ್ತಿದ್ದಾರೆ. ಇದರಿಂದ ಅಪೇಕ್ಷೆಯ ಹೊರತಾ ಗಿಯೂ ಬಸ್ ಓಡಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಆದ್ದರಿಂದ ಉಡುಪಿಯ ಜಿಲ್ಲಾಧಿಕಾರಿಗಳು, ಶಾಸಕರು, ವಿಧಾನಪರಿಷತ್ ಸದಸ್ಯರು ಖಾಸಗಿ ವಾಹನ ಮಾಲಕರ ಮೇಲೆ ಒತ್ತಡ ಹಾಕಿ, ತಡೆಯಾಜ್ಞೆ ತೆರವುಗೊಳಿಸುವಂತೆ ಮನವಿ ಮಾಡಬೇಕು. ನಾವು ಎಲ್ಲಾ ಕಡೆಗಳಲ್ಲೂ ಬಸ್ ಓಡಿಸಲು ಸಿದ್ಧರಿದ್ದೇವೆ ಎಂದು ಸಚಿವ ರೆಡ್ಡಿ ತಿಳಿಸಿದರು.

ಕೆಎಸ್ಸಾರ್ಟಿಸಿ ಎಲ್ಲಿಯೇ ಆದರೂ ಹೊಸ ಕಟ್ಟಡ ನಿರ್ಮಿಸಲು ನಿರ್ಧರಿಸಿದರೆ, ಅದನ್ನು 18 ತಿಂಗಳಲ್ಲಿ ಪೂರ್ಣಗೊಳಿಸುವ ಸಂಪ್ರದಾಯ ಹೊಂದಿದೆ. ಆದರೆ ಬೈಂದೂರು ವಿಷಯದಲ್ಲಿ ಮಾತ್ರ ಇದು ಸಾಧ್ಯವಾಗಿಲ್ಲ. 2018ರಲ್ಲಿ ಶಂಕುಸ್ಥಾಪನೆಗೊಂಡ ಈ ಸುಂದರ, ಎಲ್ಲಾ ಸೌಲಭ್ಯ ಹೊಂದಿರುವ ಬಸ್ ನಿಲ್ದಾಣ ಉದ್ಘಾಟನೆಗೊಳ್ಳಲು ಎಂಟು ವರ್ಷ ಬೇಕಾಯಿತು. ಇದಕ್ಕೆ ನೀರಿನ ಲಭ್ಯತೆ ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದೇ ಕಾರಣ ಎಂದರು.

ಸಮಾರಂಭದಲ್ಲಿ ಸಚಿವರು ವಿಭಾಗದಲ್ಲಿ 2022ನೇ ಸಾಲಿನ ಅಪಘಾತ ರಹಿತ ಚಾಲಕರ ಬೆಳ್ಳಿಪದಕಕ್ಕೆ ಆಯ್ಕೆಯಾದ ಆರು ಮಂದಿ ಸಿಬ್ಬಂದಿಗಳಿಗೆ ಬೆಳ್ಳಿ ಪದಕ ಹಾಗೂ 25,000ರೂ. ನಗದು ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಿದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕಕುಮಾರ್ ಕೊಡವೂರು,ರಾಜು ಪೂಜಾರಿ, ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಾಬು ಶೆಟ್ಟಿ ತೆಗ್ಗರ್ಸೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪ್ರಿಯ ಪವನ್‌ಕುಮಾರ್ ಅತಿಥಿಗಳನ್ನು ಸ್ವಾಗತಿಸಿದರೆ, ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.ವಿಭಾಗೀಯ ಸಂಚಾರ ಅದಿಕಾರಿ ಎಚ್.ಆರ್.ಕಮಲ್‌ಕುಮಾರ್ ವಂದಿಸಿದರೆ ಸುಬ್ರಹ್ಮಣ್ಯಂ ಕಾರ್ಯಕ್ರಮ ನಿರೂಪಿಸಿದರು.

ನಿಲ್ದಾಣಕ್ಕೆ ಮೂಕಾಂಬಿಕಾ ಹೆಸರು

ಇಂದು ಉದ್ಘಾಟನೆಗೊಂಡ ಬಸ್ ನಿಲ್ದಾಣಕ್ಕೆ ಮೂಕಾಂಬಿಕಾ ಬಸ್ ನಿಲ್ದಾಣವೆಂದು ನಾಮಕರಣ ಮಾಡಬೇಕೆಂದು ಶಾಸಕ ಗುರುರಾಜ ಗಂಟಿಹೊಳೆ, ಮಾಜಿ ಶಾಸಕ ಗೋಪಾಲ ಪೂಜಾರಿ ಅವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂಧಿಸಿದ ಸಚಿವ ರಾಮಲಿಂಗಾ ರೆಡ್ಡಿ, ಮಂಡಳಿಯ ಮುಂದಿಟ್ಟು ಒಪ್ಪಿಗೆ ಪಡೆದು ಮೂಕಾಂಬಿಕಾ ಬಸ್ ನಿಲ್ದಾಣವೆಂದು ನಾಮಕರಣ ಮಾಡುವುದಾಗಿ ಆಶ್ವಾಸನೆ ನೀಡಿದರು.

ಯಡ್ತರೆ ಗ್ರಾಮದ 8.32 ಎಕರೆ ಪ್ರದೇಶವನ್ನು ಕೆಎಸ್ಸಾರ್ಟಿಸಿಗೆ ನೀಡಲಾಗಿದೆ. ಇದರಲ್ಲಿ ಎರಡು ಎಕರೆ ಪ್ರದೇಶದಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಉಳಿದ ಆರು ಎಕರೆ ಪ್ರದೇಶದಲ್ಲಿ ಡಿಪೋ ಮಾಡಬೇಡೆನ್ನುವ ಬೇಡಿಕೆಗೂ ಒಪ್ಪಿಕೊಂಡು ಶೀಘ್ರವೇ ಇದನ್ನು ಮಾಡುವು ದಾಗಿ ಭರವಸೆ ನೀಡಿದರು.

ತಕ್ಷಣಕ್ಕೆ ಜಿಲ್ಲೆಯ ಶಾಸಕರು, ಅಧಿಕಾರಿಗಳು ಹಾಗೂ ಗಣ್ಯರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೊಂದಿಗೆ ಮಾತನಾಡಿ ನಿಲ್ದಾಣದ ಎದುರು ರಸ್ತೆಯನ್ನು ಓಪನ್ ಮಾಡಿಸಬೇಕು. ಇದರಿಂದ ನಿಲ್ದಾಣ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯ ಎಂದು ರಾಮಲಿಂಗಾ ರೆಡ್ಡಿ ನುಡಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News