ಕ್ಯಾಂಡಲ್ ಬೆಳಕಲ್ಲಿ ನಿತ್ಯ ಜೀವನ: ಬೆಳಕಿಗಾಗಿ ಬಡ ಕುಟುಂಬದ ಹೋರಾಟ
ಯೋಗೀಶ್ ಕುಂಭಾಸಿ
ಕುಂದಾಪುರ, ಆ.13: ಬಡತನದ ನಡುವೆಯೂ ನಾಲ್ಕು ವರ್ಷಗಳ ಹಿಂದೆ ಸಣ್ಣದೊಂದು ಮನೆ ನಿರ್ಮಿಸಿಕೊಂಡ ಪುಟ್ಟ ಕುಟುಂಬವು ವಿದ್ಯುತ್ ಸಂಪರ್ಕ ಸಿಗದೆ ಕತ್ತಲಲ್ಲಿ ಜೀವನ ಸಾಗಿಸುತ್ತಿದೆ. ಪಕ್ಕದ ಮನೆಯವರ ಆಕ್ಷೇಪ ಕಾರಣವೊಡ್ಡಿ ಈ ಮನೆಗೆ ’ಬೆಳಕು’ ನೀಡಲು ಇಲಾಖೆ ನಿರಾಕರಿಸುತ್ತಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಗುಲ್ವಾಡಿ ಗ್ರಾ.ಪಂ ವ್ಯಾಪ್ತಿಯ ಸೌಕೂರಿನ ಮೊರಿಕಾರ್ ಮನೆ ನವದುರ್ಗಿ ನಿಲಯದ ನಿವಾಸಿ ಮಾಲತಿ ದೇವಾಡಿಗರ ಕುಟುಂಬ ಅನುಭವಿಸುತ್ತಿರುವ ನೋವು ಇದೆ. ಇವರ ಪತಿ ರಿಕ್ಷಾ ಚಾಲನೆ ಹಾಗೂ ವಯರಿಂಗ್ ವೃತ್ತಿ ಮಾಡುತ್ತಾರೆ. ವಿಪರ್ಯಾಸವೆಂದರೆ ಬೇರೆಯವರ ಮನೆಗೆ ತನ್ನ ಕಾಯಕದ ಮೂಲಕ ಬೆಳಕು ನೀಡುವ ಇವರ ಮನೆ ಬೆಳಕಿಲ್ಲದೆ ಕತ್ತಲಾಗಿದೆ.
ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದ ಕುಟುಂಬ ಹತ್ತು ವರ್ಷದ ಹಿಂದೆ ಊರಾದ ಸೌಕೂರಿಗೆ ಬಂದು ನೆಲೆಕಂಡುಕೊಂಡಿದ್ದರು. ಕಳೆದ ನಾಲ್ಕು ವರ್ಷಗಳ ಹಿಂದೆ ಪುಟ್ಟ ಸೂರು ನಿರ್ಮಿಸಿಕೊಂಡಿದ್ದರು. ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಹಾಕಿ ಮಂಜೂರಾದ ಬಳಿಕ ಸಾವಿರಾರು ರೂ. ವ್ಯಯಿಸಿ ಮನೆಗೆ ವಯರಿಂಗ್ ಕೆಲಸ ಕೂಡ ಮಾಡಿಸಿದ್ದರು. ಆದರೆ ಪಕ್ಕದ ಮನೆಯವರಿಂದ ಆಕ್ಷೇಪ ಅರ್ಜಿ ಸಲ್ಲಿಕೆಯಾದ ಹಿನ್ನೆಲೆ ಬೆಳಕು ಕಾಣುವ ಕನಸು ಇನ್ನೂ ನನಸಾಗಿಲ್ಲ. ಈ ಮದ್ಯೆ ಸಿವಿಲ್, ಜಿಲ್ಲಾಧಿಕಾರಿ ಸಹಿತ ಮೂರು ನ್ಯಾಯಾಧಿಕರಣದಲ್ಲಿಯೂ ಇವರ ಪರವಾಗಿ ತೀರ್ಪಾದರೂ ಕೂಡ ಬೇರೆಬೇರೆ ಸಬೂಬು ಹೇಳಿ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ ಎಂಬ ಆರೋಪವಿದೆ.
ಅನಾರೋಗ್ಯ ಪೀಡಿತ ಕೂಸು: ಸೌಕೂರಿನ ಮೊರಿಕಾರ್ ಮನೆ ನವದುರ್ಗಿ ನಿಲಯದಲ್ಲಿ ಮಾಲತಿ ದೇವಾಡಿಗ, ಪತಿ ಗಣೇಶ್, ಮಗಳು ರೇಣುಕಾ ಹಾಗೂ ಅವರ 9 ತಿಂಗಳ ಹೆಣ್ಣು ಮಗುವಿದೆ. ಈ ಮಗು ಜನಿಸಿ ಒಂದೂವರೆ ತಿಂಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಯಾಗಿದ್ದು ಬೆಂಗಳೂರಿನ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ವ್ಯಯಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಈಗಲೂ ಕೂಡ ಚಿಕಿತ್ಸೆ ನಡೆಯುತ್ತಿದೆ.
ಮನೆಯ ಹಾಲ್‌ನಲ್ಲಿ ತೊಟ್ಟಿಲು ಕಟ್ಟಿ ಸೆಕೆ ದೂರ ಮಾಡಲು ಬೀಸಣಿಗೆ ಗಾಳಿ ಬೀಸಿ ಅಜ್ಜಿ ಹಾಗೂ ತಾಯಿ ಆರೈಕೆ ಮಾಡು ತ್ತಾರೆ. ಇನ್ನು ಮನೆಯವರ ಮೊಬೈಲ್ ಫೋನ್ ಚಾರ್ಜ್ ಮಾಡಲು ಒಂದು ಕಿ.ಮೀ ದೂರದ ಸೌಕೂರು ದುರ್ಗಾಪರಮೇಶ್ವರಿ ದೇವಳಕ್ಕೆ ಬರಬೇಕು.
ಮನೆ ದೀಪ ಉರಿಸಲು ಇದ್ದ ಒಂದು ಸೋಲಾರ್ ದೀಪವೂ ಕೆಟ್ಟಿದ್ದು, ಸೀಮೆಎಣ್ಣೆ ಸಿಗದ ಹಿನ್ನೆಲೆ ಚಿಮಣಿ ಬಳಸಲೂ ಆಗಲ್ಲ. ಹಾಗಾಗಿ ಇದೀಗಾ ಕ್ಯಾಂಡಲ್, ಮೊಬೈಲ್, ಟಾರ್ಚ್ ಬೆಳಕು ಇವರಿಗೆ ಆಸರೆ. ಆಹಾರ ತಯಾರಿಸಲು ಮಿಕ್ಸಿ, ಗ್ರಾಂಡರ್ ಬದಲಿಗೆ ರುಬ್ಬು ಕಲ್ಲು ಬಳಸಬೇಕಾಗಿದೆ.
"ವಿದ್ಯುತ್ ಸಂಪರ್ಕವಿಲ್ಲದೆ ಬಾರಿ ಸಮಸ್ಯೆ ಅನುಭವಿಸಿದ್ದೇವೆ. ಅಡುಗೆ ಮಾಡಿ ತಿನ್ನಲು ಕಷ್ಟಪಡುತ್ತಿದ್ದು ಅದೆಷ್ಟೋ ಬಾರಿ ಅನಾರೋಗ್ಯ ಸಮಸ್ಯೆಯಿರುವ 9 ತಿಂಗಳ ಮಗು, ನಾವು ಕತ್ತಲಲ್ಲಿ ಊಟ ಮಾಡಿದ್ದೇವೆ. ನಮಗೊಂದು ವಿದ್ಯುತ್ ಸಂಪರ್ಕ ವ್ಯವಸ್ಥೆ ಕಲ್ಪಿಸಿಕೊಡಿ"
-ಮಾಲತಿ ದೇವಾಡಿಗ ಸೌಕೂರು
"10 ವರ್ಷಗಳಿಂದ ಇಲ್ಲಿ ವಾಸ ಮಾಡಿಕೊಂಡಿದ್ದು 2019ರಲ್ಲಿ ಮನೆ ಕಟ್ಟಿದ್ದು ವಿದ್ಯುತ್ ಸಂಪರ್ಕಕ್ಕೆ 2 ವಿದ್ಯುತ್ ಕಂಬ ಕೂಡ ಮಂಜೂರಾಗಿತ್ತು. ಪಕ್ಕದವರ ಆಕ್ಷೇಪದ ಹಿನ್ನೆಲೆ ಒಂದೆರಡು ಬಾರಿ ಸಂಪರ್ಕ ಸಿಕ್ಕಿಲ್ಲ. ಚಿಕ್ಕ ಮಗುವಿಗೂ ಸಮಸ್ಯೆಯಾಗುತ್ತಿದೆ. ನ್ಯಾಯಾಧೀಕರಣ ವಿಚಾರದಲ್ಲಿ ಗರ್ಭಿಣಿಯಾಗಿದ್ದಾಗಲೂ ಓಡಾಟ ಮಾಡಿದ್ದೆ. ನಮ್ಮ ಪರ ತೀರ್ಪಾಗಿದ್ದರೂ ಈ ಅಧಿಕಾರಿಗಳು ಬೇರೆಬೇರೆ ಕಾರಣ ನೀಡುತ್ತಿದ್ದು ನಮಗೆ ವಿದ್ಯುತ್ ಸಂಪರ್ಕ ನೀಡದಿರಲು ನೈಜ್ಯ ಕಾರಣ ಏನೂ ಎಂದು ತಿಳಿಯುತ್ತಿಲ್ಲ. ಸದ್ಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರವೀಂದ್ರನಾಥ ಶ್ಯಾನುಭಾಗ್ ಅವರ ಮೊರೆ ಹೋಗಿದ್ದೇವೆ. ನ್ಯಾಯ ಸಿಗುವ ಭರವಸೆಯಿದೆ".
-ರೇಣುಕಾ ದೇವಾಡಿಗ