×
Ad

ಉಡುಪಿ| ಹೊಳೆಯಲ್ಲಿ ಬಾಲಕನ ಮೃತದೇಹ ಪತ್ತೆ ಪ್ರಕರಣ: ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು

Update: 2025-11-13 22:54 IST

ಸಾಂದರ್ಭಿಕ ಚಿತ್ರ

ಉಡುಪಿ: ಕುಕ್ಕುಂಡಿ ಹೊಳೆಬಾಗಿಲು ಮಡಿಸಾಲು ಹೊಳೆಯಲ್ಲಿ ನ.10ರಂದು ಸಂಜೆ 4ಗಂಟೆಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ತಮ್ಮ ಮಗ ಶ್ರೀಶಾನ್ ಶೆಟ್ಟಿ (16) ಸಾವಿನಲ್ಲಿ ತಮಗೆ ಅನುಮಾನ ಇರುವುದಾಗಿ ಮೃ ಬಾಲಕನ ತಂದೆ ಪೆರ್ಡೂರು ಗ್ರಾದ ಕುಕ್ಕುಂಜಾರು ಅನಂತಪದ್ಮನಾಭ ನಿಲಯದ ಕರುಣಾಕರ ಶೆಟ್ಟಿ ದೂರು ನೀಡಿದ್ದಾರೆ.

ಹಿರಿಯಡಕ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿಯಾಗಿದ್ದ ಶ್ರೀಶಾನ್ ಶೆಟ್ಟಿ ನ.9ರಂದು ಅಪರಾಹ್ನ 12:15ಕ್ಕೆ ತಂದೆಯೊಂದಿಗೆ ಪೆರ್ಡೂರಿಗೆ ಹೋಗಿದ್ದು, ಅಲ್ಲಿಂದ ಅಜ್ಜಿ ಮನೆಯಾದ ಅಲಂಗಾರಿಗೆ ತೆರಳಿದ್ದ. ಅಲ್ಲಿಂದ ತಾನು ಪಕ್ಕದ ನದಿಗೆ ಆಟವಾಡಲು ಹೋಗುವುದಾಗಿ ತಂದೆಗೆ ಅಜ್ಜಿ ಮೊಬೈಲ್‌ನಿಂದ ಕರೆ ಮಾಡಿ ತಿಳಿಸಿದ್ದ. ಆದರೆ ಅಪರಾಹ್ನ 3ಗಂಟೆಯಾದರೂ ಮನೆಗೆ ಮರಳದಿದ್ದಾಗ ಸುತ್ತಮುತ್ತೆಲ್ಲಾ ಹುಡುಕಿದ್ದರೂ ಆತ ಪತ್ತೆಯಾಗಿರಲಿಲ್ಲ. ಆತನನ್ನು ಯಾರೋ ಪುಸಲಾಯಿಸಿ, ಆಮಿಷ ತೋರಿಸಿ ಅಪಹರಣ ಮಾಡಿರಬೇಕು. ನವೀನ್ ಎಂಬವರ ಜೊತೆ ಆತ ಹೋಗಿರಬೇಕು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಶ್ರೀಶಾನ್‌ನ ಮೃತದೇಹ ಮರುದಿನ ಮಡಿಸಾಲು ಹೊಳೆಯಲ್ಲಿ ಪತ್ತೆಯಾಗಿತ್ತು. ಮಣಿಪಾಲ ಆಸ್ಪತ್ರೆಯಲ್ಲಿ ಶವಮಹಜರನ್ನು ನಡೆಸಲಾಗಿತ್ತು. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮೃತ ತಂದೆ ನೀಡಿದ ದೂರಿನಲ್ಲಿ ತಿಳಿಸಿದಂತೆ ನವೀನ್ ಎಂಬಾತನ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ. ಮಣಿಪಾಲ ಕೆಎಂಸಿಯಿಂದ ಮರಣದ ವರದಿ ಹಾಗೂ ಎಫ್‌ಎಸ್‌ಎಲ್ ವರದಿ ಬಂದ ನಂತರ ಏನಾದರೂ ಕುರುಹು ಕಂಡುಬಂದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News