ಧ್ವಜ ವಿವಾದ| ಕೇಸರಿ ಧ್ವಜ ಹಾರಿಸದೇ ಕಾಂಗ್ರೆಸ್ ಧ್ವಜ ಹಾರಿಸಬೇಕಿತ್ತೇ?: ಸುನಿಲ್ ಕುಮಾರ್ ಪ್ರಶ್ನೆ
ಕಾರ್ಕಳ, ಜ.20: ಉಡುಪಿ ಪರ್ಯಾಯದ ಮೆರವಣಿಗೆಯಲ್ಲಿ ಕೇಸರಿ ಧ್ವಜ ಹಾರಿಸದೇ ಕಾಂಗ್ರೆಸ್ ಬಾವುಟ ಪ್ರದರ್ಶನ ಮಾಡಬೇಕಿತ್ತೇ ? ಎಂದು ಮಾಜಿ ಸಚಿವ ವಿ ಸುನೀಲ್ ಕುಮಾರ್ ಪರ್ಯಾಯ ಮೆರವಣಿಗೆಯಲ್ಲಿ ಧ್ವಜ ವಿವಾದಕ್ಕೆ ಪ್ರತಿಕ್ರಿಯಿಸುತ್ತಾ ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆಯೊಂದನ್ನು ಬಿಡುಗಡೆಗೊಳಿರುವ ಅವರು ಉಡುಪಿ ಪರ್ಯಾಯದಲ್ಲಿ ಭಾಗವಹಿಸಿದ ಜಿಲ್ಲಾಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಪ್ರಕರಣ ಕಾಂಗ್ರೆಸ್ ನಾಯಕರ ಕ್ಷುದ್ರ ಮನಸ್ಥಿತಿಗೆ ಇದು ಕೈಗನ್ನಡಿ. ಹಿಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಬಿಟ್ಟು ಕಾಂಗ್ರೆಸ್ ಅಥವಾ ಹಸಿರು ಧ್ವಜ ಪ್ರದರ್ಶಿಸುವುದು ಮಾತ್ರ ಧರ್ಮ ನಿರಪೇಕ್ಷತೆಯೇ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಾನವ ಹಕ್ಕು ಹಾಗೂ ಕಾನೂನು ವಿಭಾಗದ ಅಧ್ಯಕ್ಷ ಹರೀಶ್ ಶೆಟ್ಟಿ ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆದು ಡಿಸಿ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ. ಉಡುಪಿ ಪರ್ಯಾಯ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿಗಳು ಮೊದಲಿನಿಂದಲೂ ಭಾಗವಹಿಸಿದ್ದನ್ನು ನಾವು ನೋಡಿದ್ದೇವೆ. ಆದರೆ ಈ ಬಾರಿ ಮಾತ್ರ ಕಾಂಗ್ರೆಸ್ ಕಣ್ಣಿಗೆ ಅದ್ಯಾವ ಲೋಪ ಕಂಡಿತು ? ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದು ಆಚರಣೆಗಳಲ್ಲಿ ತಪ್ಪು ಹುಡುಕುವುದೇ ಕಾಂಗ್ರೆಸ್‌ಗೆ ಚಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.