×
Ad

ಮಡಾಮಕ್ಕಿ ಎಡಮಲೆ ಹಳ್ಳದ ಸೇತುವೆಗೆ ಹಾನಿ ಆರೋಪ: ಮಾಜಿ ನಕ್ಸಲ್ ಪದ್ಮನಾಭ ನೀಲುಗುಳಿ ದೋಷಮುಕ್ತಿ

Update: 2026-07-15 22:04 IST

ಕುಂದಾಪುರ: 22 ವರ್ಷಗಳ ಹಿಂದೆ ಸರಕಾರದ ನಿಷೇಧಿತ ಸಂಘಟನೆಯೊಂದಿಗೆ ಸೇರಿದ್ದು ಕೈಯಲ್ಲಿ ಬಂದೂಕು ಗಳನ್ನು ಹಿಡಿದುಕೊಂಡು ಅಕ್ರಮ ಕೂಟ ಸೇರಿ ಶಂಕರನಾರಾಯಣ ಠಾಣಾ ಸರಹದ್ದಿನ ಮಡಾಮಕ್ಕಿ ಗ್ರಾಮದ ಹಂಜ ಗೂಳಿಜಡ್ಡು ರಕ್ಷಿತಾರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿ ಎಡಮಲೆ ಹಳ್ಳಕ್ಕೆ ಹಾಕಿದ್ದ 9ನೇ ನಂಬ್ರದ ಕಾಂಕ್ರಿಟ್ ಸೇತುವೆಯನ್ನು ಕಲ್ಲಿನಿಂದ ಹೊಡೆದು ಜಖಂಗೊಳಿಸಿ ಸರಕಾರಕ್ಕೆ ನಷ್ಟವನ್ನುಂಟು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ನಕ್ಸಲ್ ಪದ್ಮನಾಭ ನೀಲುಗುಳಿಯನ್ನು ದೋಷಮುಕ್ತಿಗೊಳಿಸಿ ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು ಆದೇಶ ನೀಡಿದ್ದಾರೆ.

ಘಟನೆ ಹಿನ್ನೆಲೆ: 2004ರ ಸೆಪ್ಟಂಬರ್ ತಿಂಗಳಿನಲ್ಲಿ ಈ ಘಟನೆ ನಡೆದಿತ್ತು. ಹೆಬ್ರಿ ಬಳ್ಳಿಮನೆ ವನ್ಯಜೀವಿ ಘಟಕ ವ್ಯಾಪ್ತಿಯ ಅಂದಿನ ವನ್ಯಪಾಲಕರು ನೀಡಿದ ದೂರಿನ ಅನ್ವಯ ಪದ್ಮನಾಭ ಹಾಗೂ ಇತರರ ಮೇಲೆ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕಾನೂನು ಬಾಹಿರ ಚಟುವಟಿಕೆ ತಡೆ ಕಾಯಿದೆ ಮತ್ತು ಕಲಂ.3 ಮತ್ತು 25 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವೆಸಗಿದ ಬಗ್ಗೆ ಅಂದಿನ ಕುಂದಾಪುರ ಡಿವೈಎಸ್ಪಿ ವಿಶ್ವನಾಥ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ಸುದೀರ್ಘವಾಗಿ ವಿಚಾರಣೆ ನಡೆಯುತ್ತಿದ್ದು ಆರೋಪಿ ವಿರುದ್ಧ ಮಾಡಲಾದ ದೋಷಾರೋಪಣೆಗಳು ರುಜುವಾತಾಗದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಪದ್ಮನಾಭ ನಿರ್ದೋಷಿಯೆಂದು ತೀರ್ಪು ನೀಡಲಾಗಿದೆ.

ಶಂಕಿತ ನಕ್ಸಲ್ ನೀಲಗುಳಿ ಪದ್ಮನಾಭ್ ಪರವಾಗಿ ಕುಂದಾಪುರದ ನ್ಯಾಯವಾದಿ ಬಿ. ಪ್ರಕಾಶ್ಚಂದ್ರ ಹೆಗ್ಡೆ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News