×
Ad

Udupi | ಶ್ರೀಕೃಷ್ಣ ಮಠದಲ್ಲಿ ಶಂಕರಾಚಾರ್ಯರ ನಿಂದನಾ ಹೇಳಿಕೆ ವಿವಾದ: ವಿಷಾದ ವ್ಯಕ್ತಪಡಿಸಿದ ಮಠ

► ಕಲಾವಿದೆಯ ಕ್ಷಮೆಯಾಚನೆಯ ನಂತರವೂ ಮುಂದುವರಿದ ಚರ್ಚೆ

Update: 2026-07-15 22:01 IST

ಉಡುಪಿ: ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಆದಿ ಶಂಕರಾಚಾರ್ಯರ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿವಾದವು, ಮಠದ ವಿಷಾದ, ಕಲಾವಿದೆಯ ಸಾರ್ವಜನಿಕ ಕ್ಷಮೆಯಾಚನೆ ಹಾಗೂ ವಿದ್ವಾಂಸರ ಸಂಯಮದ ಮನವಿಯ ಹೊರತಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದಿದೆ.

ರಾಜಾಂಗಣವು ಉಡುಪಿ ಶ್ರೀಕೃಷ್ಣ ಮಠದ ಸಾಂಸ್ಕೃತಿಕ ವೇದಿಕೆಯಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳ ಕಲಾವಿದರಿಂದ ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.

ಜುಲೈ 11ರಂದು ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಈ ವಿವಾದ ಪ್ರಾರಂಭವಾಗಿದೆ.

ಪರ್ಯಾಯ ಶಿರೂರು ಮಠದ ಪ್ರಕಾರ, ಕಲಾತಂಡಕ್ಕೆ ಒಂದು ಗಂಟೆ ಭರತನಾಟ್ಯ ಹಾಗೂ ಒಂದು ಗಂಟೆ ಹರಿಸೇವೆ ನಡೆಸಲು ಮಾತ್ರ ಅನುಮತಿ ನೀಡಲಾಗಿತ್ತು. ಆದರೆ, 'ಭಕ್ತ ಪ್ರಹ್ಲಾದ' ಶೀರ್ಷಿಕೆಯ ಹರಿಕಥೆ ಪ್ರದರ್ಶನದ ವೇಳೆ ಆದಿ ಶಂಕರಾಚಾರ್ಯರ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಶೀರೂರು ಮಠದ ದಿವಾನರಾದ ಡಾ.ಉದಯಕುಮಾರ್ ಸರಳತ್ತಾಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮಠದ ಸುಪರ್ದಿಯಲ್ಲಿರುವ ರಾಜಾಂಗಣದಲ್ಲಿ ಭರತನಾಟ್ಯ ಕಾರ್ಯಕ್ರಮಕ್ಕಾಗಿ ಅಂಕಿತಾ ನಾಯಕ್ ಹಾಗೂ ಗೌರಿ ಪಾಂಡುರಂಗಿ ಅವರಿಗೆ ಅನುಮತಿ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಕಾರ್ಯಕ್ರಮದ ಮಧ್ಯೆ ಕಲಾವಿದರು ‘ಭಕ್ತ ಪ್ರಹ್ಲಾದ’ ಹರಿಕಥೆಯನ್ನು ನಡೆಸಿದ್ದು, ಈ ವೇಳೆ ಜಗದ್ಗುರು ಶ್ರೀ ಆದಿಶಂಕರಾಚಾರ್ಯ ರನ್ನು ಏಕವಚನದಲ್ಲಿ ನಿಂದಿಸಿ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಮಠದ ಗಮನಕ್ಕೆ ಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಬ್ಬರು ಕಲಾವಿದರಿಗೂ ಸಾರ್ವಜನಿಕ ಕ್ಷಮೆಯಾಚಿಸುವಂತೆ ಸೂಚಿಸಲಾಗಿತ್ತು. ಅದರಂತೆ ಅವರು ವಿಡಿಯೋ ಮೂಲಕ ಸಾರ್ವಜನಿಕ ಕ್ಷಮೆಯಾಚನೆ ಮಾಡಿದ್ದು, ನಡೆದ ಅನಪೇಕ್ಷಿತ ಘಟನೆಯ ಕುರಿತಂತೆ ಪರ್ಯಾಯ ಶೀರೂರು ಮಠ ವಿಷಾಧ ವ್ಯಕ್ತಪಡಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದಾದ ಬಳಿಕ ಕಲಾವಿದೆ ವೀಡಿಯೋ ಸಂದೇಶ ಬಿಡುಗಡೆ ಮಾಡಿ ಕ್ಷಮೆಯಾಚಿಸಿದ್ದಾರೆ. ಆದಿ ಶಂಕರಾಚಾರ್ಯ ರನ್ನು ಅವಮಾನಿಸುವ ಅಥವಾ ಯಾವುದೇ ಧಾರ್ಮಿಕ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಉದ್ದೇಶ ತಮ್ಮದಲ್ಲ ಎಂದು ಹೇಳಿದ್ದಾರೆ. ಹರಿಕಥೆಯ ನಿರೂಪಣೆ ಪುಸ್ತಕಗಳಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಸಿದ್ಧಪಡಿಸಲಾಗಿತ್ತು. ಆದರೂ, ತಮ್ಮ ನಿರೂಪಣೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೋರುವುದಾಗಿ ತಿಳಿಸಿದ್ದಾರೆ.

ಹೇಳಿಕೆಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ವಿದ್ವಾಂಸ ರಾಘವೇಂದ್ರ ಭಟ್, ಆರಂಭದಲ್ಲಿ ಕಾನೂನು ಕ್ರಮ ಕೈಗೊಳ್ಳುವ ಕುರಿತು ಚಿಂತನೆ ನಡೆಸಲಾಗಿತ್ತು. ಆದರೆ, ಅದಕ್ಕೂ ಮುನ್ನ ಪರ್ಯಾಯ ಶಿರೂರು ಮಠದ ಗಮನಕ್ಕೆ ವಿಷಯವನ್ನು ತರಲು ನಿರ್ಧರಿಸಲಾಯಿತು ಎಂದು ತಿಳಿಸಿದ್ದಾರೆ.

"ನಾವು ಮಠದ ದಿವಾನ್ ಉದಯ ಕುಮಾರ್ ಸರಳತ್ತಾಯ ಅವರೊಂದಿಗೆ ಮಾತನಾಡಿದ್ದೇವೆ. ಅವರು ಘಟನೆಗೆ ವಿಷಾದ ವ್ಯಕ್ತಪಡಿಸಿದರು. ಬೆಳಗಾವಿಯ ಕಲಾತಂಡಕ್ಕೆ 'ಭಕ್ತ ಪ್ರಹ್ಲಾದ' ಹರಿಕಥೆ ಪ್ರದರ್ಶಿಸಲು ಅನುಮತಿ ನೀಡಲಾ ಗಿತ್ತು. ಆಕ್ಷೇಪಾರ್ಹ ಹೇಳಿಕೆಗಳ ಬಗ್ಗೆ ಮಠಕ್ಕೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಅವರು ತಿಳಿಸಿದರು. ಕಲಾವಿದರಿಂದ ಕ್ಷಮೆಯಾಚಿಸುವ ವೀಡಿಯೋ ಪಡೆಯುವುದಾಗಿ ಭರವಸೆ ನೀಡಿದ್ದರು. ಬಳಿಕ ಕಲಾವಿದೆ ಕ್ಷಮೆಯಾಚಿಸುವ ವೀಡಿಯೋ ಬಿಡುಗಡೆ ಮಾಡಿದರು" ಎಂದು ಭಟ್ ಹೇಳಿದರು.

ಶ್ರೀ ಆದಿ ಶಂಕರಾಚಾರ್ಯ, ಶ್ರೀ ರಾಮಾನುಜಾಚಾರ್ಯ ಹಾಗೂ ಶ್ರೀ ಮಧ್ವಾಚಾರ್ಯರು ಹಿಂದೂ ತತ್ವಶಾಸ್ತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಆದ್ದರಿಂದ ಯಾವುದೇ ಆಚಾರ್ಯರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಬಾರದು ಅಥವಾ ವೈಯಕ್ತಿಕ ದಾಳಿಗಳನ್ನು ನಡೆಸಬಾರದು ಎಂದು ಅವರು ಮನವಿ ಮಾಡಿದರು. ಆದರೂ, ಇಂತಹ ಘಟನೆಗಳು ಮುಂದೆಯೂ ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಮಠದ ಸ್ಪಷ್ಟನೆ, ಕಲಾವಿದೆಯ ಕ್ಷಮೆಯಾಚನೆ ಹಾಗೂ ಸಂಯಮಕ್ಕಾಗಿ ವಿದ್ವಾಂಸರು ಮಾಡಿದ ಮನವಿಯ ಹೊರತಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ–ಪ್ರತ್ಯಾರೋಪಗಳು ಮುಂದುವರಿದಿವೆ.

ಸಾಮಾಜಿಕ ಜಾಲತಾಣದಲ್ಲಿ 'ವಿವೇಕ್' ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಹರಿಕಥೆ ಪ್ರದರ್ಶನವನ್ನು ಸಮರ್ಥಿಸಿಕೊಂಡಿದ್ದು, ವಿವಾದಕ್ಕೆ ಕಾರಣವಾದ ಹೇಳಿಕೆಗಳು ಮಾಧ್ವ ಸಂಪ್ರದಾಯದ ತತ್ವಗಳನ್ನು ಪ್ರತಿಬಿಂಬಿ ಸುತ್ತವೆ ಎಂದು ಹೇಳಿದ್ದಾರೆ. ಶಿರೂರು ಮಠ ಪ್ರಕಟಿಸಿದ ಕ್ಷಮೆಯಾಚನೆ ಕುರಿತು ಟೀಕೆ ವ್ಯಕ್ತಪಡಿಸಿರುವ ಅವರು, ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಪ್ರತಿಪಾದಿಸುವ ಹಾಗೂ ಆಚರಿಸುವ ಸಾಂವಿಧಾನಿಕ ಹಕ್ಕು ಇದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ವಿವಾದ ತಣ್ಣಗಾಗುತ್ತಿರುವ ಸಂದರ್ಭದಲ್ಲಿ ಇಂತಹ ಪೋಸ್ಟ್‌ಗಳು ಮತ್ತೆ ಚರ್ಚೆಯನ್ನು ತೀವ್ರಗೊಳಿಸುತ್ತಿವೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ವಿವಾದಕ್ಕೆ ತೆರೆ ಎಳೆಯಬೇಕು ಎಂದು ಅಭಿಪ್ರಾಯಪಟ್ಟಿರುವ ಕೆಲವರು ಇದೇ ರಾಜಾಂಗಣದಲ್ಲಿ ಶಂಕರಾಚಾರ್ಯರನ್ನು ಕೊಂಡಾಡುವ ಭಜನೆ ಹಾಡುತ್ತಿರುವ ಗಾಯಕನ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಇದೇ ವೇಳೆ, ಶ್ರೀ ರಾಮಾನುಜಾಚಾರ್ಯರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾದ ವೈಷ್ಣವರಲ್ಲದ ವಿದ್ವಾಂಸರೊಬ್ಬರ ವೀಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಸಾರ್ವಜನಿಕ ವಾಗ್ವಾದದ ಕುರಿತು ಬ್ರಾಹ್ಮಣ ಸಮುದಾಯದ ಅನೇಕ ಸದಸ್ಯರು ಕಳವಳ ವ್ಯಕ್ತಪಡಿಸಿದ್ದು, ಧಾರ್ಮಿಕ ಮುಖಂಡರು, ವಿದ್ವಾಂಸರು ಹಾಗೂ ಬೌದ್ಧಿಕ ಸಂಘಟನೆಗಳು ತಕ್ಷಣ ಮಧ್ಯಪ್ರವೇಶಿಸಿ ಸಮುದಾಯಗಳ ನಡುವೆ ಏಕತೆಯನ್ನು ಬಲಪಡಿಸಬೇಕು. ಪಂಥೀಯ ಭಿನ್ನಾಭಿಪ್ರಾಯಗಳು ಮತ್ತಷ್ಟು ಆಳವಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಸೌಜನ್ಯ: deccanchronicle.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News