×
Ad

ಪರ್ಯಾಯೋತ್ಸವಕ್ಕೆ ಸಂಪೂರ್ಣ ಸಹಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

Update: 2023-11-01 19:14 IST

ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಈ ಬಾರಿಯ ಪುತ್ತಿಗೆ ಪರ್ಯಾಯ ಮಹೋತ್ಸವದಲ್ಲಿ ಯಾವುದೇ ರಾಜಕಾರಣ ಮಾಡದೆ ಭಕ್ತಿ ಹಾಗೂ ಪೂಜ್ಯ ಭಾವನೆಯಿಂದ ಸರಕಾರ, ವೈಯಕ್ತಿಕ ಹಾಗೂ ಜಿಲ್ಲಾಡಳಿತದ ಪರವಾಗಿ ಸಂಪೂರ್ಣ ಸಹ ಕಾರ ನೀಡಲಾಗುವುದು ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.

ಉಡುಪಿಯ ಪುತ್ತಿಗೆ ಮಠದಲ್ಲಿ ಬುಧವಾರ ನಡೆದ ಪರ್ಯಾಯೋತ್ಸವ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಮುಂದಿನ ಉಡುಪಿ ಭೇಟಿ ವೇಳೆ ಜಿಲ್ಲಾಡಳಿತದ ವತಿಯಿಂದ ಪರ್ಯಾಯೋತ್ಸವ ಸಂಬಂಧ ಪೂರ್ವಭಾವಿ ಸಭೆಯನ್ನು ಆಯೋಜಿಸಿ, ಜಿಲ್ಲಾಡಳಿತದಿಂದ ಬೇಕಾದ ವ್ಯವಸ್ಥೆ ಬಗ್ಗೆ ಚರ್ಚಿಸಲಾಗುವುದು ಎಂದರು.

ಹಿಂದಿನ ಸರಕಾರಗಳು ಪರ್ಯಾಯಕ್ಕೆ ಎಷ್ಟು ಅನುದಾನ ಕೊಟ್ಟಿದೆ ಎಂಬುದು ನನಗೆ ಮುಖ್ಯ ಅಲ್ಲ. ಆದರೆ ನಮ್ಮ ಸರಕಾರದಿಂದ ನನ್ನ ಜವಾಬ್ದಾರಿ ಹಾಗೂ ಶಕ್ತಿಗೆ ಮೀರಿ ಸಹಾಯವನ್ನು ನೀಡುವ ಪ್ರಯತ್ನ ಮಾಡುತ್ತೇನೆ. ಬರಗಾಲದ ಈ ಸಂದರ್ಭದಲ್ಲೂ ಯಾವುದೇ ರೀತಿಯ ಕಡಿಮೆ ಮಾಡದೇ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಸಚಿವರನ್ನು ಪುತ್ತಿಗೆ ಪರ್ಯಾಯ ಸಮಿತಿಯ ಮಹಾ ಪೋಷಕರನ್ನಾಗಿ ಘೋಷಿಸಲಾಯಿತು. ಈ ವೇಳೆ ಪುತ್ತಿಗೆ ಮಠದ ದಿವಾನ ನಾಗರಾಜ್ ಆಚಾರ್ಯ ಸಚಿವರಿಗೆ ಮನವಿ ಹಾಗೂ ಆಹ್ವಾನ ಪತ್ರವನ್ನು ನೀಡಿದರು.

ಪರ್ಯಾಯ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿದರು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ಸ್ವಾಗತ ಸಮಿತಿಯ ಕೋಶಾಧಿಕಾರಿ ರಂಜನ್ ಕಲ್ಕೂರ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಉಪಸ್ಥಿತರಿದ್ದರು. ಗೋಪಾಲಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News