ಛಾಂದಸ ಗಣೇಶ ಕೊಲೆಕಾಡಿ ನಿಧನ
ಉಡುಪಿ: ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಛಾಂದಸ, ಯಕ್ಷಗಾನ ಕವಿ, ವಿಮರ್ಶಕ ಗಣೇಶ ಕೊಲೆಕಾಡಿ(54) ಅವರು ಇಂದು ಸಂಜೆ ಮೂಲ್ಕಿ ಸಮೀಪದ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಪ್ರಸಿದ್ಧ ಹಿಮ್ಮೇಳ ವಾದಕರಾದ ದಿವಾಣ ಭೀಮ ಭಟ್ಟರಲ್ಲಿ ಭಾಗವತಿಕೆ ಮತ್ತು ಮದ್ದಳೆ ವಾದನವನ್ನು, ಛಾಂದಸರಾದ ಡಾ.ಶಿಮಂತೂರು ನಾರಾಯಣ ಶೆಟ್ಟಿ ಅವರಲ್ಲಿ ಯಕ್ಷಗಾನ ಕಾವ್ಯ ರಚನೆಯನ್ನು ಅಭ್ಯಾಸ ಮಾಡಿದ್ದ ಗಣೇಶ ಕೊಲೆಕಾಡಿ ಸುಮಾರು 50ಕ್ಕೂ ಅಧಿಕ ಪ್ರಸಂಗಗಳನ್ನು ರಚಿಸಿದ್ದರು.
ಯಕ್ಷಗಾನದಲ್ಲಿ ಬಳಕೆಯಾಗಿರುವ ಛಂದಸ್ಸಿನ ವೈಶಿಷ್ಟ್ಯದ ಕುರಿತು ವಿದ್ವತ್ಪೂರ್ಣವಾಗಿ ಮಾತನಾಡಬಲ್ಲವರಾಗಿದ್ದ ಗಣೇಶ್, ತಮ್ಮ ಮನೆಯಲ್ಲೇ ಆಸಕ್ತರಿಗೆ ಛಂದಸ್ಸಿನ ಸೂಕ್ಷ್ಮತೆಗಳನ್ನು, ವಿವಿಧ ಮಟ್ಟುಗಳನ್ನು ತಿಳಿಸಿಕೊಟ್ಟು ಬಹುಸಂಖ್ಯೆಯಲ್ಲಿ ಭಾಗವತರನ್ನು ರೂಪಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೊಳಗಾಗಿದ್ದರು. ತಾಯಿಯೊಂದಿಗೆ ಮುಲ್ಕಿ ಬಳಿಯ ಮೈಲೊಟ್ಟು ಎಂಬಲ್ಲಿ ವಾಸವಾಗಿದ್ದ ಅವರಿಗೆ ಉಡುಪಿಯ ಯಕ್ಷಗಾನ ಕಲಾರಂಗ ೨೦೧೪ರಲ್ಲಿ ಮನೆಯೊಂದನ್ನು ನಿರ್ಮಿಸಿಕೊಟ್ಟಿತ್ತು. ಯಕ್ಷಗಾನ ಕಲಾರಂಗ ಅವರ ನಿರ್ದೇಶನದಲ್ಲಿ ಭಾಗವತಿಕೆಯ ಕಮ್ಮಟವನ್ನು ಸಹ ಆಯೋಜಿಸಿತ್ತು.
ಗಣೇಶ ಕೊಲೆಕಾಡಿ ಅವರಿಗೆ ಯಕ್ಷಗಾನ ಕಲಾರಂಗ ಕನಕಾ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ಹತ್ತು ಗಂಟೆಗೆ ಅತಿಕಾರಿಬೆಟ್ಟು ಮನೆಯ ಸನಿಹ ಜರುಗಲಿದೆ ಎಂದು ತಿಳಿದುಬಂದಿದೆ.
ಗಣೇಶ ಕೊಲೆಕಾಡಿ ಅವರ ನಿಧನಕ್ಕೆ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ಗಾಢ ಸಂತಾಪ ಸೂಚಿಸಿದ್ದಾರೆ.