ಗಂಗೊಳ್ಳಿ: ಜಾನುವಾರು ಕಳವು ಪ್ರಕರಣ; ಆರೋಪಿ ಸೆರೆ
ಕುಂದಾಪುರ: ವಾರಗಳ ಹಿಂದೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಜಾನುವಾರು ಕಳ್ಳತನಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಪರಾರಿಯಾದ ಮೂವರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.
ಮೂಡುಬಿದರೆ ತಾಲೂಕಿನ ತೋಡಾರ್ ಮೂಲದ ಅನ್ಸಾರ್ ತೋಡಾರ್ (32) ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ ಅಂದಾಜು 6 ಲಕ್ಷ ಮೌಲ್ಯದ ಕಾರು ಹಾಗೂ ಮೊಬೈಲ್ ಪೋನ್ ವಶಕ್ಕೆ ಪಡೆಯಲಾಗಿದೆ.
ಘಟನೆ ವಿವರ: ಜು.31ರಂದು ಬೆಳಿಗಿನ ಜಾವ ಮೇಲ್ ಗಂಗೊಳ್ಳಿ ಸಮೀಪ ಪೊಲೀಸರು ಗಸ್ತು ತೆರಳುತ್ತಿದ್ದ ವೇಳೆ ರಸ್ತೆಯ ಬದಿಯಲ್ಲಿ ಮಲಗಿರುವ ದನವನ್ನು ಹಿಂಸಾತ್ಮಕವಾಗಿ ಕಾರಿಗೆ ತುಂಬಿಸಿದ್ದು ಪೊಲೀಸರನ್ನು ಕಂಡು ಪರಾರಿ ಯಾಗಿದ್ದಾರೆ. ಈ ಪ್ರಕರಣ ಪತ್ತೆಗಾಗಿ ಗಂಗೊಳ್ಳಿ ಪೊಲೀಸ್ ಠಾಣೆಯಿಂದ ವಿಶೇಷ ತಂಡ ರಚಿಸಿದ್ದು ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಯಾದ ಅನ್ಸಾರ್ ನನ್ನು ಆ.7 ರಂದು ಮಂಗಳೂರಿನ ಕೂಳೂರಿನಲ್ಲಿ ಕೃತ್ಯಕ್ಕೆ ಬಳಸಿದ ಕಾರು ಸಹಿತ ವಶಕ್ಕೆ ಪಡೆದಿದ್ದು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿ ಮೇಲೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿ ಒಟ್ಟು 13 ಪ್ರಕರಣಗಳು ದಾಖಲಾಗಿದೆ. ಪ್ರಕರಣಲ್ಲಿ ತಲೆಮರೆಸಿಕೊಂಡ ಮೂವರನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ ಎಸ್ಪಿ ಹರಿರಾಮ್ ಶಂಕರ್, ಹೆಚ್ಚುವರಿ ಎಸ್ಪಿ ಸುಧಾಕರ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಹೆಚ್.ಡಿ ಕುಲಕರ್ಣಿ, ಬೈಂದೂರು ಪ್ರಭಾರ ವೃತ್ತನಿರೀಕ್ಷಕ ಜಯರಾಮ ಗೌಡ ನಿರ್ದೇಶನದಂತೆ ಗಂಗೊಳ್ಳಿ ಪೊಲೀಸ್ ಠಾಣೆಯ ಕಾನೂನು ಸುವ್ಯವಸ್ಥೆ ಪಿಎಸ್ಐ ಪವನ್ ನಾಯಕ್, ತನಿಖಾ ಪಿಎಸ್ಐ ಬಸವರಾಜ ಕನಶೆಟ್ಟಿ, ಸಿಬ್ಬಂದಿಗಳಾದ ಕೃಷ್ಣ ದೇವಾಡಿಗ, ಚೇತನ್, ಶಾಂತರಾಮ ಶೆಟ್ಟಿ, ಸುರೇಶ್, ಸಚಿನ್ ಶೆಟ್ಟಿ, ರಾಜು ಹಾಗೂ ಸಂದೀಪ ಕುರಣಿ, ಪ್ರಸನ್ನ, ರಾಘವೇಂದ್ರ ಪೂಜಾರಿ, ಮಾಳಪ್ಪ ದೇಸಾಯಿ, ಚಿದಾನಂದ ಕಾರ್ಯಾಚರಣೆಯಲ್ಲಿದ್ದರು.