×
Ad

ಪರಶುರಾಮ ಥೀಮ್ ಪಾರ್ಕ್‌ಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕೊಡಿ: ಸುನಿಲ್ ಕುಮಾರ್ ಆಗ್ರಹ

Update: 2026-01-05 21:46 IST

ಉಡುಪಿ: ಕಾಂಗ್ರೆಸಿಗರು, ಕಾರ್ಕಳ ವಿರೋಧಿಗಳು ಬೈಲೂರಿನಲ್ಲಿ ನಿರ್ಮಾಣಗೊಂಡಿರುವ ಪರಶುರಾಮ ಥೀಮ್ ಪಾರ್ಕ್ ವಿವಾದ ಸೃಷ್ಟಿಸಿದೆ. ಪರಶುರಾಮ ವಿವಾದ ಸೃಷ್ಟಿಸಿದ ಅಭಿವೃದ್ಧಿ ಸಮಿತಿ ವಿಸರ್ಜನೆಯಾಗಿದೆ. ಈಗ ಜಿಲ್ಲಾಡಳಿತ 2023ರಲ್ಲಿ ತೆಗೆದುಕೊಂಡ ನಿರ್ಧಾರವನ್ನು ಅನುಷ್ಠಾನ ಮಾಡಲಿ ಎಂದು ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.

ಥೀಮ್ ಪಾರ್ಕ್‌ನ ಕಟ್ಟಡದ ಮೇಲ್ಚಾವಣಿಗೆ ಹೊದಿಸಿದ್ದ ತಾಮ್ರದ ಹೊದಿಕೆ ಕಳ್ಳತನವಾದ ಪ್ರದೇಶಕ್ಕೆ ಇಂದು ಭೇಟಿ ನೀಡಿದ ಸುನಿಲ್ ಕುಮಾರ್ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ವಿವಾದಗಳಿಂದ ಸಾರ್ವಜನಿಕರ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆಗೆದು ಥೀಮ್ ಪಾರ್ಕ್ ಸಂದರ್ಶನಕ್ಕೆ ಎಲ್ಲರಿಗೂ ಅವಕಾಶ ನೀಡಬೇಕು. ಇಲ್ಲಿ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ಕೊಡಬೇಕು ಎಂದವರು ಜಿಲ್ಲಾಡಳಿತವನ್ನು ಒತ್ತಾಯಿಸಿದರು.

ಪಾಳುಬಿದ್ದ ಥೀಮ್‌ಪಾರ್ಕ್‌ನಲ್ಲಿ ಇದೀಗ ತಾಮ್ರ ಕಳ್ಳತನವಾಗಿದೆ.ಬಾಗಿಲು ಒಡೆದು ಕಳ್ಳತನ ಮಾಡಿದ್ದಾರೆ. ಮೇಲ್ಚಾವಣಿ ಕಿತ್ತಿದ್ದಾರೆ. ಕಾರ್ಕಳದ ಇತಿಹಾಸ ದಲ್ಲಿ ಇದು ದುರ್ದೈವದ ಸಂಗತಿ. ಕಳ್ಳತನವಾಗಲು ಕಾಂಗ್ರೆಸ್ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣ ಎಂದು ಆರೋಪಿದ ಅವರು ಹೀಗೆ ಬಿಟ್ಟರೆ ಇದೊಂದು ಅನೈತಿಕ ತಾಣವಾಗುತ್ತೆ ಎಂದರು.

ತಾನು ಸಚಿವನಾಗಿದ್ದಾಗ ಬಿಜೆಪಿ ಸರಕಾರ ಮಂಜೂರು ಮಾಡಿದ್ದ ನಾಲ್ಕೂವರೆ ಕೋಟಿ ರೂ. ಬಿಡುಗಡೆಗೆ ಬಾಕಿ ಇದೆ. ತಕ್ಷಣ ಈ ಹಣವನ್ನು ಬಿಡುಗಡೆ ಮಾಡಬೇಕು. ಪರಶುರಾಮ ಥೀಮ್ ಪಾರ್ಕ್ ವಿರುದ್ಧ ಅನಗತ್ಯ ಅಪಪ್ರಚಾರ ಮಾಡಿದವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ ಅವರು ಇಲ್ಲಿ ಮತ್ತೆ ಕಾರ್ಯಕ್ರಮಗಳನ್ನು ಮಾಡಲು ಅವಕಾಶ ನೀಡಬೇಕು ಎಂದರು.

ಎಲ್ಲವೂ ಕ್ರಮಬದ್ಧ: ಇಲ್ಲಿ ಎಲ್ಲಾ ಕಾಮಗಾರಿಗಳು ದಾಖಲೆ ಪ್ರಕಾರ ನಡೆದಿದೆ. ಧರ್ಮಸ್ಥಳದಲ್ಲೊಂದು ಬುರುಡೆ ಗ್ಯಾಂಗ್ ಇರುವಂತೆ ಇಲ್ಲಿ ಒಂದು ಫೈಬರ್ ಗ್ಯಾಂಗ್ ಇದೆ ಎಂದು ಲೇವಡಿ ಮಾಡಿದ ಅವರು ಸಾರ್ವಜನಿಕರ ತಾಳ್ಮೆಯ ಕಟ್ಟೆ ಒಡೆಯುವ ಮುಂಚೆ ಎಚ್ಚೆತ್ತುಕೊಳ್ಳುವಂತೆ ಎಚ್ಚರಿಸಿದರು.

ಇದೇ ಜನವರಿ 11ರಂದು ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತ ರು ಇಲ್ಲಿಗೆ ಬರುತ್ತೇವೆ. ಇಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತೇವೆ. ಈ ಪರಿಸರವನ್ನು ಜಿಲ್ಲಾಡಳಿತ ಸ್ವಚ್ಛಗೊಳಿಸದಿದ್ದರೆ ನಾವೇ ಮಾಡುತ್ತೇವೆ. ಮಕರ ಸಂಕ್ರಾಂತಿಯ ದಿನದಿಂದ ಒಂದು ತಿಂಗಳು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು.

ನೀವು ವಿವಾದ ಯಾವಾಗ ಬೇಕಾದರೂ ಬಗೆಹರಿಸಿಕೊಳ್ಳಿ. ಇಲ್ಲಿಗೆ ಸಾರ್ವಜನಿಕರು ಮುಕ್ತವಾಗಿ ಬಂದು ಓಡಾಡು ವಂತೆ ಆಗಬೇಕು. ಮುಂದಿನ ಮಸ್ತಕಾಭಿಷೇಕದ ವೇಳೆ ಪ್ರವಾಸಿಗರು ಬರುವಂತಾಗಬೇಕು. ಒಂದು ತಿಂಗಳು ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತೇವೆ. ನಾವು ಸಾಂಸ್ಕೃತಿಕ ಕಾರ್ಯಕ್ರಮ ಮಾಡುವುದು ಬೇಡವಾದರೆ ಇಲಾಖೆಯೇ ಮಾಡಲಿ. ಪ್ರತಿಮೆ ಇರುವ ಸ್ಥಳ ಬಿಟ್ಟುಬಿಡಿ. ಸ್ಟುಡಿಯೋ, ಆಡಿಟೋರಿಯಂ ಸುತ್ತಮುತ್ತಲ ಪರಿಸರಕ್ಕೆ ಸಾರ್ವಜನಿಕರು ಹೋಗಲಿ ಎಂದು ಅವರು ಹೇಳಿದರು.

ಇಲ್ಲಿ ನಿರ್ಮಿಸಿದ್ದ ಫೈಬರ್ ಪ್ರತಿಮೆ ಅಲ್ಲ ಅನ್ನೋದು ಚಾರ್ಜ್‌ಶೀಟಿನಲ್ಲಿ ಸ್ಪಷ್ಟವಾಗಿದೆ. ವಿವಾದಗಳು ಅಲ್ಲಿಗೆ ಮುಗಿದಂತಾಯ್ತು. ಇನ್ನು ರಾಜಕೀಯ ಮಾಡುವುದು ಬೇಡ. ಅಭಿವೃದ್ಧಿಯ ದೃಷ್ಟಿಯಿಂದ ಕೆಲಸ ಮಾಡೋಣ. ಅಪಪ್ರಚಾರ ಮಾಡುವವರು ಹಿಂದೆ ಸರಿಯಿರಿ ಎಂದರು.

ಇದು ನನ್ನ ಕನಸಿನ ಯೋಜನೆ. ಪ್ರವಾಸೋದ್ಯಮ ದೃಷ್ಟಿಯಿಂದ ಇದು ವಿಜೃಂಭಿಸಬೇಕಿತ್ತು. ಎರಡುವರೆ ವರ್ಷದ ಬಳಿಕ ಇಲ್ಲಿಗೆ ಬಂದಿದ್ದೇನೆ. ಈ ಸ್ಥಳ ನೋಡಿದರೆ ಮನಸ್ಸಿಗೆ ಅತ್ಯಂತ ವೇದನೆ ಆಗುತ್ತದೆ. ಪರಶುರಾಮ ಥೀಮ್ ಪಾರ್ಕ್ ಪಾಳು ಬಿದ್ದಿದೆ, ಇದು ದುರ್ದೈವದ ಸಂಗತಿ. ಕಾರ್ಯಕ್ರಮಗಳಿಂದ ಜಗಮಗಿಸಬೇಕಾಗಿದ್ದ ಈ ಸ್ಥಳವನ್ನು ಅಸೂಯೆಯ ಕಾರಣಕ್ಕೆ ಹಾಳುಗಡವಿದ್ದಾರೆ ಎಂದು ದೂರಿದರು.

ರಾಜಕೀಯ ಕಾರಣಕ್ಕೆ ಸರಕಾರ ಹಣ ಬಿಡುಗಡೆ ಮಾಡಿಲ್ಲ. ಇದನ್ನು ನಿರ್ಜನವಾಗಿ ಮಾಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲಬೇಕು. ಸ್ಥಳೀಯ ಕಾಂಗ್ರೆಸ್‌ಗೆ ಅಭಿವೃದ್ಧಿ ಬೇಕಾಗಿಲ್ಲ ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News