×
Ad

ರಾಜ್ಯಪಾಲರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ ಉದ್ಘಾಟನೆ: ಪರ್ಯಾಯ ಪುತ್ತಿಗೆಶ್ರೀ

Update: 2025-07-23 20:26 IST

ಉಡುಪಿ: ಪರ್ಯಾಯ ಶ್ರೀಪುತ್ತಿಗೆ ಮಠದ ವತಿಯಿಂದ ನಡೆಯಲಿರುವ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯಕ್ತ 48 ದಿನಗಳ ಕಾಲ ನಡೆಯಲಿರುವ ‘ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವ’ವನ್ನು ರಾಜ್ಯದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಜು.25ರ ಸಂಜೆ ರಾಜಾಂಗಣದಲ್ಲಿ ಉದ್ಘಾಟಿಸಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ತಿಳಿಸಿದ್ದಾರೆ.

ಕೃಷ್ಣ ಮಠದ ಗೀತಾಮಂದಿರದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಕೃಷ್ಣ ಜನ್ಮಾಷ್ಟಮಿ ಮಾಸೋತ್ಸವವಾಗಿ ಆಚರಿಸಲ್ಪಡುತಿದ್ದು, ಈ ಬಾರಿ ಅದನ್ನು ವಿಸ್ತರಿಸಿ 48 ದಿನಗಳ ಕಾಲ ‘ಮಂಡಲೋತ್ಸ’ವಾಗಿ ಆಗಸ್ಟ್ 1ರಿಂದ ಸೆಪ್ಟಂಬರ್ 17ರವರೆಗೆ ಅತ್ಯಂತ ವೈಭವಯುತವಾಗಿ, ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾ ಗುತ್ತಿದೆ ಎಂದರು.

ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವನ್ನು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಜು.25ರ ಸಂಜೆ 4:30ಕ್ಕೆ ಉದ್ಘಾಟಿಸಲಿದ್ದಾರೆ. ಮಂಡಲೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಶಾಸಕ ಯಶಪಾಲ್ ಸುವರ್ಣ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಹೆಯ ಡಾ.ಎಚ್.ಎಸ್.ಬಲ್ಲಾಳ್, ಉದ್ಯಮಿ ರಾಘವೇಂದ್ರ ರಾವ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದರು.

ಮಂಡಲೋತ್ಸವದ ಸಮಾರೋಪ ಸಮಾರಂಭ ಸೆಪ್ಟಂಬರ್ 14ರ ಸೌರ ಕೃಷ್ಣ ಜನ್ಮಾಷ್ಟಮಿಯ ದಿನದಂದು ನಡೆಯಲಿದ್ದು, ಇದರಲ್ಲಿ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್.ರವಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ರವಿ ಅವರು ರಾತ್ರಿ ನಡೆಯುವ ವಿಶೇಷ ಪೂಜೆ ಹಾಗೂ ಅರ್ಘ್ಯ ಪ್ರದಾನದ ವೇಳೆ ಉಪಸ್ಥಿತರಿರುವರು ಎಂದು ಸ್ವಾಮೀಜಿ ತಿಳಿಸಿದರು.

ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ವಿವಿಧ ಕಾರ್ಯಕ್ರಮಗಳು ಆಗಸ್ಟ್ 1ರಿಂದ ಪ್ರಾರಂಭ ಗೊಳ್ಳಲಿದೆ. ಮುಂದಿನ 48 ದಿನಗಳ ಅವಧಿಯಲ್ಲಿ ಚಾಂದ್ರ ಕೃಷ್ಣ ಜನ್ಮಾಷ್ಟಮಿ (ಆ.15) ಹಾಗೂ ಸೌರ ಕೃಷ್ಣ ಜನ್ಮಾಷ್ಟಮಿ (ಸೆ.14 ಕೃಷ್ಣ ಜಯಂತಿ, ಸೆ.16 ಶ್ರೀಕೃಷ್ಣ ಲೀಲೋತ್ಸವ, ಮೊಸರು ಕುಡಿಕೆ)ಯನ್ನು ಆಚರಿಸಲಾಗುತ್ತಿದೆ. ಇದರೊಂದಿಗೆ 48 ದಿನಗಳ ಕಾಲವೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳು, ಭಜನಾ ಕಮ್ಮಟ, ಧಾರ್ಮಿಕ ಪ್ರವಚನ, ವಿಚಾರ ಸಂಕಿರಣ, ನಾಟಕ, ಸಂಗೀತ ಕಚೇರಿ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. ಚಾಂದ್ರ ಕೃಷ್ಣ ಜನ್ಮಾಷ್ಟಮಿಯ ವೇಳೆ ಆ.14ರಂದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಖಜಾಂಚಿ ಸ್ವಾಮಿ ಶ್ರೀಗೋವಿದದೇವ್ ಗಿರಿ ಮಹಾರಾಜ್ ಉಪಸ್ಥಿತರಿರುವರು ಎಂದು ಪುತ್ತಿಗೆ ಶ್ರೀಗಳು ತಿಳಿಸಿದರು.

ಸೆ.14ರಂದು ನಡೆಯುವ ಸೌರ ಕೃಷ್ಣ ಜನ್ಮಾಷ್ಟಮಿ ವೇಳೆ ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದೆ. ಮರುದಿನ ಕೃಷ್ಣ ಲೀಲೋತ್ಸವ ಸಂದರ್ಭದಲ್ಲಿ ಆಕರ್ಷಕ ರಥೋತ್ಸವ, ಹುಲಿವೇಷ ಕುಣಿತ, ಸ್ಪರ್ಧೆ, ಮುಂಬಯಿಯ ಅಲಾರೆ ತಂಡದಿಂದ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮಗಳಿರುತ್ತವೆ. 16ರಂದು ವಿವಿಧ ಸ್ಪರ್ಧೆ ಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದ್ದು, ಸೆ.17ರಂದು ಮಂಡಲೋತ್ಸವ ಸಮಾರೋಪ ಗೊಳ್ಳಲಿದೆ ಎಂದರು.

ಇದೇ ಸಂದರ್ಭದಲ್ಲಿ ಆ.3ರಂದು ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ -2025 ಪುತ್ತಿಗೆ ಮಠದ ಆಶ್ರಯದಲ್ಲಿ, ಪತಂಜಲಿ ಯೋಗ ಸಮಿತಿ ಉಡುಪಿ ಹಾಗೂ ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಬೆಂಗಳೂರು ಸಹಭಾಗಿತ್ವದಲ್ಲಿ ನಡೆಯಲಿದೆ

ಪತ್ರಿಕಾಗೋಷ್ಠಿಯಲ್ಲಿ ಪುತ್ತಿಗೆ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಸ್ವಾಮೀಜಿ, ಮಠದ ದಿವಾನ ರಾದ ನಾಗರಾಜ ಆಚಾರ್ಯ, ಪ್ರಸನ್ನ ಆಚಾರ್ಯ, ರಮೇಶ್ ಭಟ್ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News