×
Ad

ಕುಂದಾಪುರ: ಎಪ್ರಿಲ್‌ನಲ್ಲಿ 9.72 ಕೋಟಿ ರೂ.ಗ್ಯಾರಂಟಿ ಅನುದಾನ

Update: 2025-05-28 22:56 IST

ಕುಂದಾಪುರ: ತಾಲೂಕಿಗೆ ಗ್ಯಾರಂಟಿ ಯೋಜನೆಯಡಿ ಎಪ್ರಿಲ್ ತಿಂಗಳಿನಲ್ಲಿ 9.72 ಕೋ.ರೂ. ಅನುದಾನ ಬಂದಿದೆ. ಈ ಮೂಲಕ ಗ್ಯಾರೆಂಟಿ ಅನುಷ್ಟಾನದಿಂದ ಈವರೆಗೆ 343.7 ಕೋ.ರೂ. ಅನುದಾನ ಇಲ್ಲಿನ ಜನರಿಗೆ ದೊರೆತಂತಾಗಿದೆ ಎಂದು ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಮಾಹಿತಿ ನೀಡಿದ್ದಾರೆ.

ಬುಧವಾರ ಇಲ್ಲಿನ ತಾಲೂಕು ಪಂಚಾಯತ್‌ನಲ್ಲಿ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಎಪ್ರಿಲ್ ತಿಂಗಳಿನಲ್ಲಿ ಗೃಹಜ್ಯೋತಿಯಡಿ 3.93 ಕೋ.ರೂ., ಅನ್ನಭಾಗ್ಯ ದಲ್ಲಿ 3.05 ಕೋ.ರೂ., ಶಕ್ತಿ ಯೋಜನೆಯಲ್ಲಿ 2.74 ಕೋ.ರೂ. ಅನುದಾನ ದೊರೆತಿದ್ದು ಗೃಹಲಕ್ಷ್ಮಿ ಹಾಗೂ ಯುವನಿಧಿ ಅನುದಾನ ಬಿಡುಗಡೆಯಾಗಿಲ್ಲ ಎಂದು ಅವರು ವಿವರಿಸಿದರು.

ಗಂಗೊಳ್ಳಿಯಲ್ಲಿ ಲೈನ್‌ಮೆನ್‌ಗಳ ಕೊರತೆಯಿದ್ದು ರಾತ್ರಿ ಪಾಳಿಗೆ ಸಿಬ್ಬಂದಿಯಿಲ್ಲ. ಹಿಂದಿನ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಜಹೀರ್ ಅಹಮದ್ ವಿಷಯ ಪ್ರಸ್ತಾಪಿಸಿದರು. ಮೆಸ್ಕಾಂ ವಿಚಾರದಲ್ಲಿ ಮೊಳಹಳ್ಳಿ ಭಾಗದಲ್ಲಿ ಸಮಸ್ಯೆ ಇದೆ ಎಂದು ವಾಣಿ ಆರ್. ಶೆಟ್ಟಿ, ಕೋಡಿ ಭಾಗದಲ್ಲಿ ಮರಗಳು ಬೀಳುವ ಆತಂಕ ಇದೆ ಎಂದು ನಾರಾಯಣ ಆಚಾರ್ ತಿಳಿಸಿದರು.

ಕೋಣಿ, ಕೆರಾಡಿಯಲ್ಲಿ ಬೋವಿ ಜನಾಂಗದವರ ಮನೆಗಳಿಗೆ ವಿದ್ಯುತ್ ಸಮಸ್ಯೆ ಇದೆ ಎಂದು ಅರುಣ್, ಹೆದ್ದಾರಿ ಬದಿ ಮರಗಳನ್ನು ಅರ್ಧ ಕಡಿದ ಸ್ಥಿತಿಯಲ್ಲಿ ಬಾಕಿ ಇಟ್ಟು ಲೈನ್‌ಗಳಿಗೆ ಸಮಸ್ಯೆ ಆಗುತ್ತಿದೆ ಎಂದು ಅಭಿಜಿತ್ ಪೂಜಾರಿ ಹೇರಿಕುದ್ರು ದೂರಿದರು. ಮೆಸ್ಕಾಂ ಕಂಬಗಳಿಗೆ ಕೇಬಲ್ ಲೈನ್ ಅಳವಡಿಸುವುದರಿಂದ ಸಮಸ್ಯೆ ಆಗುತ್ತಿದೆ. ಘನ ವಾಹನಗಳ ಓಡಾಟಕ್ಕೂ ಕಷ್ಟ ಎಂದು ಚಂದ್ರ ಕಾಂಚನ್ ದೂರಿದರು.

ಯಜಮಾನಿ ಹೆಸರು ಬದಲಾಯಿಸಲು ಬಿಡಬೇಡಿ: ಗೃಹಲಕ್ಷ್ಮಿ ಯೋಜನೆಯಲ್ಲಿ ಬಾಕಿ ಉಳಿದಿರುವ ಫಲಾನುಭವಿಗಳ ಮನೆಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಕಳುಹಿಸಿ ನೋಂದಣಿ ಮಾಡುವಂತೆ ಗಣೇಶ್ ಕೊರಗ ಕುಂಭಾಶಿ ಒತ್ತಾಯಿಸಿದರು.

ಪಡಿತರ ಚೀಟಿಯಲ್ಲಿ ಯಜಮಾನಿ ಬದಲಾವಣೆಗೆ ಅವಕಾಶ ಇದೆ. ಗ್ರಾಮ ಒನ್ ಕೇಂದ್ರ, ಪಡಿತರ ಕೇಂದ್ರ ಗಳಲ್ಲೂ ಮಾಡಬಹುದು ಎಂದು ಆಹಾರ ನಿರೀಕ್ಷಕರು ಹೇಳಿದರು. ತಾಂತ್ರಿಕ ಸಮಸ್ಯೆಗಳ ಹೊರತು ಬೇರೆ ಯಾವುದೇ ಸಮಸ್ಯೆಗಳು ಇಲ್ಲ. ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪ್ರಯತ್ನ ಮಾಡಲಾಗುವುದು ಎಂದು ಸಿಡಿಪಿಒ ಉಮೇಶ್ ಕೋಟ್ಯಾನ್ ಹೇಳಿದರು.

ಮನೆಯ ಹಿರಿಯರ ಗಮನಕ್ಕೆ ತಾರದೇ ಕೆಲವೆಡೆ ಮನೆ ಸದಸ್ಯರು ಯಜಮಾನಿ ಬದಲಾವಣೆ ಮಾಡಿ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಇಂತಹದ್ದು ಮಾಡಿದರೆ ಅವರ ಮೇಲೆ ಸೈಬರ್ ಮೊಕದ್ದಮೆ ದಾಖಲಿಸುವುದಾಗಿ ಜಿಪಂ. ಸಿಇಒ ಹೇಳಿದ್ದಾರೆ. ಆದ್ದರಿಂದ ಯಜಮಾನಿ ಬದಲು ಮಾಡಲು ಅವಕಾಶ ನೀಡಬಾರದು ಎಂದು ಸೂಚನೆ ನೀಡಿದ್ದಾರೆ ಎಂದು ಅಧ್ಯಕ್ಷರು ಹೇಳಿದರು.

ಹಕ್ಲಾಡಿ, ಗಂಗೊಳ್ಳಿಗೆ ಬಸ್ ಬೇಕು ಎಂಬ ಬೇಡಿಕೆ ಸಭೆಯಲ್ಲಿ ಕೇಳಿ ಬಂತು. ಸಂಗಂ ತಿರುವಿನಲ್ಲಿ ಬಸ್‌ಗಳನ್ನು ಸಿಗ್ನಲ್ ನೀಡದೇ ಏಕಾಏಕಿ ತಿರುಗಿಸಿ ಅಪಘಾತಕ್ಕೆ ಆಹ್ವಾನ ನೀಡಲಾಗುತ್ತದೆ ಎಂದು ಅಭಿಜಿತ್ ಪೂಜಾರಿ ಹೇಳಿದರು. ಬಡಾಕೆರೆಗೆ ತಾತ್ಕಾಲಿಕ ಪರ್ಮಿಟ್ ವ್ಯವಸ್ಥೆಯಲ್ಲಿ ಬಸ್ ಆರಂಭಿಸಲು ಪತ್ರ ಬರೆಯಲಾಗಿದೆ. ಹಾಲಾಡಿ- ಚೋರಾಡಿ- ವಂಡಾರು- ಬಾರ್ಕೂರು ಬಸ್ ಓಡಾಟ, ಅಮಾಸೆಬೈಲು-ಜಡ್ಡಿನಗದ್ದೆ- ಮಂದರ್ತಿ- ಉಡುಪಿ ಸಂಪರ್ಕ ಬಸ್ ಜೂ.1ರಿಂದ ಆರಂಭಿಸುವುದಾಗಿ ಆರ್‌ಟಿಓ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಅಧ್ಯಕ್ಷರು ಹೇಳಿದರು.

ಗಂಗೊಳ್ಳಿಗೆ ಈಗಾಗಲೇ ಬಸ್ ಇದೆ. ಹೊಸ ಮಾರ್ಗ ಅನುಷ್ಠಾನ ಸದ್ಯ ಕಷ್ಟ. ಡಿಪೊದಲ್ಲಿ 50 ಜನ ಚಾಲಕ, ನಿರ್ವಾಹಕರ ಕೊರತೆಯಿದೆ. ನೇಮಕಾತಿ ನಿರೀಕ್ಷೆಯಲ್ಲಿದ್ದೇವೆ. ಬಡಾಕೆರೆಗೆ ತಾತ್ಕಾಲಿಕ ಪರ್ಮಿಟ್‌ಗೆ ಬರೆಯಲಾಗಿದೆ ಎಂದು ಕೆಎಸ್ಸಾರ್ಟಿಸಿ ಅಧಿಕಾರಿ ಬಿ.ಟಿ.ನಾಯಕ್ ತಿಳಿಸಿದರು.

ಅನ್ನಭಾಗ್ಯ ವಿತರಣೆ ಶೇ.96 ಆಗಿದ್ದು ಕುಂದಾಪುರ ಮುಂಚೂಣಿ ತಾಲೂಕಾ ಗಿದೆ. ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತೆಗೆಯುವಿಕೆ, ಯಜಮಾನಿ ಬದಲಾವಣೆ, ತಿದ್ದುಪಡಿಗೆ ಅವಕಾಶ ಇದೆ. ಹೊಸಕಾರ್ಡ್‌ಗೆ ಅವಕಾಶ ಇರುವುದು ವೈದ್ಯಕೀಯ ಕಾರಣದವರಿಗೆ ಮಾತ್ರ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಡಾ.ರವಿಕುಮಾರ್ ಹುಕ್ಕೇರಿ, ಸದಸ್ಯರಾದ ಆಶಾ ಕರ್ವಾಲೋ, ಸವಿತಾ ಪೂಜಾರಿ, ಹರ್ಷ ಶೆಟ್ಟಿ, ಪ್ರದೀಪ್ ಕುಮಾರ್ ಶೆಟ್ಟಿ ಮೊದಲಾದವರು ಇದ್ದರು.

ಮೆಸ್ಕಾಂ ಇಲಾಖೆಗೆ ತರಾಟೆ!

ವಿದ್ಯುತ್ ಕಂಬಕ್ಕೆ ಅಳವಡಿಸಿದ ಟಿವಿ ಕೇಬಲ್ ಲೈನ್ ಮೇಲೆ ಬಿದ್ದು ಜನ್ನಾಡಿಯಲ್ಲಿ ಬಾಲಕನೊಬ್ಬನಿಗೆ 11 ಕೆ.ವಿ. ವಿದ್ಯುತ್ ಶಾಕ್ ತಗುಲಿ ಗಂಭೀರವಾಗಿದ್ದು, ಕೇಬಲ್ ಅಳವಡಿಸುವಾಗ ಅಗತ್ಯ ಕ್ರಮ ವಹಿಸಬೇಕು. ಕೇಬಲ್‌ನವರ ಜೊತೆ ಮೆಸ್ಕಾಂ ಕೈ ಜೋಡಿಸಿ ಇಂತಹ ಅಚಾತುರ್ಯವಾಗಲು ಬಿಡಬಾರದು. ಸಮರ್ಪಕ ಮಾರ್ಗಸೂಚಿಯಡಿ ಸ್ಪಷ್ಟ ನಿರ್ದೇಶನ ನೀಡಬೇಕು. ನಿಗದಿತ ಮಾನದಂಡಗಳನ್ನು ಕೇಬಲ್‌ನವರು ಪಾಲಿಸಲು ಮೆಸ್ಕಾಂ ಅಧಿಕಾರಿಗಳು ಕ್ರಮವಹಿಸಬೇಕು. ಮಳೆಗಾಲದಲ್ಲಿ ವಿದ್ಯುತ್ ಕಡಿತವಾದಾಗ ಬಡವರ ಕರೆಗಳಿಗೆ ಸ್ಪಂದಿಸಿ ಶೀಘ್ರವಾಗಿ ರಿಪೇರಿ ಕೆಲಸ ಮಾಡಬೇಕು ಎಂಬ ಆಗ್ರಹ ಸಭೆಯಲ್ಲಿ ಕೇಳಿಬಂತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News