×
Ad

ಹಿರಿಯ ಯತಿಗಳ ಮಾರ್ಗದರ್ಶನ, ಭಕ್ತರ ಸಹಕಾರ ಬೇಕು: ಶ್ರೀವೇದವರ್ಧನ ತೀರ್ಥರು

ಪರ್ಯಾಯ ದರ್ಬಾರ್‌

Update: 2026-01-18 20:19 IST

ಉಡುಪಿ, ಜ.18: ಪರ್ಯಾಯದ ವೇಳೆ ಶ್ರೀಕೃಷ್ಣನ ಪೂಜೆ ಎಂಬುದು ದೊಡ್ಡ ಯಾಗ ಮಾಡಿದಂತೆ. ಹೀಗಾಗಿ ಎರಡು ವರ್ಷಗಳ ಕಾಲ ಹೆಜ್ಜೆ ಹೆಜ್ಜೆಗೂ ತನಗೆ ಹಿರಿಯ ಯತಿಗಳ ಮಾರ್ಗದರ್ಶನ ಹಾಗೂ ಭಕ್ತರ ಸಹಕಾರ ಬೇಕು ಎಂದು ಶೀರೂರು ಮಠದ ಶ್ರೀವೇದವರ್ಧನ ತೀರ್ಥರು ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಇಂದು ಮೊದಲ ಬಾರಿ ಪರ್ಯಾಯ ಪೀಠಾರೋಹಣ ಮಾಡಿದ ಶ್ರೀವೇದವರ್ಧನ ತೀರ್ಥರು ರಾಜಾಂಗಣದ ಶ್ರೀವಾಮನತೀರ್ಥವೇದಿಕೆಯಲ್ಲಿ ರವಿವಾರ ಮುಂಜಾನೆ ನಡೆದ ಪರ್ಯಾಯ ದರ್ಬಾರ್‌ನಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡುತಿದ್ದರು.

ಉಡುಪಿಯಲ್ಲಿ ಶ್ರೀಮಧ್ವಾಚಾರ್ಯರು ಸ್ಥಾಪಿಸಿದ ಶ್ರೀಕೃಷ್ಣ ಸಾಮಾನ್ಯ ಕೃಷ್ಣನಂತಲ್ಲ. ಆತನ ಕೈಯಲ್ಲಿ ಕಡಗೋಲು ಮತ್ತು ಹಗ್ಗವಿದೆ. ಅವುಗಳಿಗೆ ವಿಶೇಷ ಮಹತ್ವವಿದೆ ಎಂದ ಶೀರೂರುಶ್ರೀಗಳು, ನಾವು ಕೇವಲ ಪೂಜೆ ಮಾಡುವುದು ಮಾತ್ರವಲ್ಲ ಕೃಷ್ಣನ ಸಂದೇಶವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಸಹ ಮಾಡಬೇಕು ಎಂದರು.

ಶ್ರೀಮಧ್ವಾಚಾರ್ಯರು ಹೇಳಿದಂತೆ ಜನಾರ್ದನ ಸೇವೆಯೊಂದಿಗೆ ಜನಸೇವೆ ಯನ್ನೂ ಮಾಡಬೇಕು. ಕೃಷ್ಣನ ಸೇವೆ ಮಾಡಬೇಕು. ವೇದವನ್ನು ಉಳಿಸಬೇಕು. ಕೃಷ್ಣನ ಸೇವೆ ಮಾಡಿದಾಗ ನೀವು ತಪ್ಪು ಮಾಡುವುದಿಲ್ಲ. ಆದರೆ ಪೂಜೆಗೆ ನಿಸ್ವಾರ್ಥ ವಾದ ಭಾವವಿರಬೇಕು ಎಂದರು.

ಈ ಎಲ್ಲಾ ಕಾರ್ಯಕ್ಕೆ ನನಗೆ ಅಷ್ಟಮಠಗಳ ಹಿರಿಯ ಯತಿಗಳ ಮಾರ್ಗದರ್ಶನ ಬೇಕು. ವಿದ್ಯೆ ಕಲಿಸಿದ ಕೃಷ್ಣಾಪುರ ಶ್ರೀಗಳು ಹಾಗೂ ಸನ್ಯಾಸಾಶ್ರಮ ನೀಡಿದ ಸೋದೆ ಮಠಾಧೀಶರ ವಿಶೇಷ ಆಶೀರ್ವಾದ ಹಾಗೂ ಮಾರ್ಗದರ್ಶನ ನನಗೆ ಬೇಕಾಗಿದೆ ಎಂದು ಶ್ರೀವೇದವರ್ಧನ ತೀರ್ಥರು ನುಡಿದರು.

ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥರು, ಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥರು, ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಶೀರೂರು ಮೂಲಮಠದ ಅರ್ಚಕ 94 ವರ್ಷ ಪ್ರಾಯದ ಲಕ್ಷ್ಮೀ ನಾರಾಯಣ ಭಟ್, ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ.ಎನ್.ಲಕ್ಷ್ಮೀನಾರಾಯಣ ಭಟ್, ಹಾಗೂ ಶ್ರೀಪತಿ ಭಟ್ ಗುಂಡಿಬೈಲು ಇವರನ್ನು ಮಠದ ವತಿಯಿಂದ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ, ಮೈಸೂರಿನ ಸಂಸದ ಹಾಗೂ ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್‌ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉದ್ಯಮಿ ಜಿ.ಶಂಕರ್, ಬೆಂಗಳೂರು ಇಸ್ಕಾನ್ ಅಧ್ಯಕ್ಷ ಮಧು ಪಂಡಿತ್‌ದಾಸ್, ಉಪಾಧ್ಯಕ್ಷ ಚಂಚಲಪತಿ ದಾಸ್, ಕೆನರಾ ಬ್ಯಾಂಕಿನ ಹರಿದೀಪ ಸಿಂಗ್ ಅಹ್ಲುವಾಲಿಯಾ, ಎಚ್.ಕೆ.ಗಂಗಾಧರ್, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ ಉಪಸ್ಥಿತರಿದ್ದರು.

ಬಗೆಹರಿದ ಶ್ರೀಲಕ್ಷ್ಮೀವರ ತೀರ್ಥ ಪ್ರತಿಮೆ ವಿವಾದ

2018ರಲ್ಲಿ ಅಕಾಲಿಕವಾಗಿ ನಿಧನರಾದ ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರ ಆಳೆತ್ತರದ ಮೂರ್ತಿ ಯನ್ನು ಪರ್ಯಾಯ ಮೆರವಣಿಗೆ ವೇಳೆ ತೆರೆದ ವಾಹನದಲ್ಲಿ ತರುವ ವಿಷಯದಲ್ಲಿ ಅಷ್ಟಮಠದ ಸ್ವಾಮೀಜಿಗಳ ನಡುವೆ ಭಿನ್ನಮತ ಉಂಟಾಗಿದ್ದು, ಒಂದು ಹಂತದಲ್ಲಿ ಮೆರವಣಿಗೆಯನ್ನು ಬಹಿಷ್ಕರಿಸುವ ಮಾತು ಸಹ ಕೇಳಿಬಂದಿತ್ತು ಎನ್ನಲಾಗಿದೆ.

ಕೊನೆಗೆ ಮಾತುಕತೆ ನಡೆದು ವಿವಾದ ಸೌಹಾರ್ದಯುತವಾಗಿ ಬಗೆಹರಿದು ಇಬ್ಬರಿಗೂ ಒಪ್ಪಿಗೆಯಾಗುವ ಒಪ್ಪಂದಕ್ಕೆ ಬರಲಾಯಿತು ಎಂದು ತಿಳಿದು ಬಂದಿದೆ. ಸ್ವಾಮೀಜಿಗಳೆಲ್ಲರೂ ಜೋಡುಕಟ್ಟೆಯಿಂದ ಮೆರವಣಿಗೆಯಲ್ಲಿ ತೆರಳಿದ ಬಳಿಕ ಹಿಂದಿನಿಂದ ‘ಜನಸಾಮಾನ್ಯರ ಸ್ವಾಮೀಜಿ’ ಎಂದೇ ಜನಪ್ರಿಯತೆ ಪಡೆದಿದ್ದ ಶ್ರೀಲಕ್ಷ್ಮೀವರ ತೀರ್ಥರ ಪ್ರತಿಮೆ ಯನ್ನು ತೆರೆದ ವಾಹನದಲ್ಲಿ ತರಲಾಯಿತು.

ಶ್ರೀಲಕ್ಷ್ಮೀವರ ತೀರ್ಥರು ಹಿಂದೂ ಯುವಸೇನೆ, ಬಜರಂಗದಳದಂಥ ಕೆಲವು ಸಂಘಟನೆಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಅದರ ಸದಸ್ಯರು ಮೆರವಣಿಯಲ್ಲಿ ಸ್ವಾಮೀಜಿಗಳ ಪ್ರತಿಮೆ ತರಲು ಬಿಗುಪಟ್ಟು ಹಿಡಿದಿದ್ದರು ಎನ್ನಲಾಗಿದೆ.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News