ಬೀಡಿ ಕಾರ್ಮಿಕರ ಸಮಸ್ಯೆ ಇತ್ಯರ್ಥಕ್ಕೆ ಆಗ್ರಹಿಸಿ ಹಕ್ಕೋತ್ತಾಯ ಚಳವಳಿ
ಉಡುಪಿ : ದ.ಕ. ಮತ್ತು ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ(ಸಿಐಟಿಯು, ಎಐಟಿಯುಸಿ) ನೇತೃತ್ವದಲ್ಲಿ ಬೀಡಿ ಕಾರ್ಮಿಕರಿಗೆ 2018ರಿಂದ 2024ರವರೆಗಿನ 6ವರ್ಷಗಳ ಕನಿಷ್ಠ ಕೂಲಿಯನ್ನು ಪಾವತಿಸುವಂತೆ ಮತ್ತು 2024ರ ಅಧಿಸೂಚಿಸಿದ ಕನಿಷ್ಠ ಕೂಲಿ ಮತ್ತು ತುಟ್ಟಿ ಭತ್ಯೆಯನ್ನು ನೀಡುವಂತೆ ಆಗ್ರಹಿಸಿ ಹಕ್ಕೋತ್ತಾಯ ಚಳವಳಿಯನ್ನು ಸೋಮವಾರ ಅಂಬಲಪಾಡಿಯಲ್ಲಿರುವ ಭಾರತ್ ಬೀಡಿ ಕಂಪೆನಿಯ ಎದುರು ಹಮ್ಮಿಕೊಳ್ಳಲಾಗಿತ್ತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಎಐಟಿಯುಸಿ ಬೀಡಿ ಕಾರ್ಮಿಕರ ಸಂಘದ ಕೋಶಾಧಿಕಾರಿ ವಿ.ಶೇಖರ್, ಬೀಡಿ ಕಾರ್ಮಿಕರ ತುಟ್ಟಿ ಭತ್ಯೆ ಹೆಚ್ಚಳ ಮಾಡುವ ಬದಲು ಕಡಿತ ಮಾಡಿದೆ. ಇದು ಕಂಪೆನಿಗಳು ಮಾಡುತ್ತಿರುವ ಕಾನೂನು ಬದ್ಧವಾದ ಮೋಸ. ಸರಕಾರ ಬೀಡಿ ಕಂಪೆನಿಗಳಿಗೆ ತೆರಿಗೆ ವಿಧಿಸಿರುವುದಕ್ಕೆ ಬೀಡಿ ಕಾರ್ಮಿಕರಿಗೆ ಬರೆ ಹಾಕುವುದು ಸರಿಯಲ್ಲ. ಬೀಡಿ ಕಾರ್ಮಿಕರನ್ನು ಸರಕಾರ ಮತ್ತು ಕಂಪೆನಿಗಳು ನಿಕೃಷ್ಟವಾಗಿ ನೋಡುತ್ತಿವೆ. ಇವರಿಗೆ ಮಾನವೀಯತೆ ಎಂಬುದು ಇದ್ದರೆ ಕಾನೂನು ಬದ್ಧವಾಗಿ ಬೀಡಿ ಕಾರ್ಮಿಕರಿಗೆ ನೀಡಬೇಕಾದದನ್ನು ಕೂಡಲೇ ನೀಡಬೇಕು ಎಂದರು.
ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಮಹಾಬಲ ಒಡೆಯರಹೋಬಳಿ ಮಾತನಾಡಿ, ಬೀಡಿ ಮೇಲೆ ಸೆಸ್, ತೆರಿಗೆ, ಜಿಎಸ್‌ಟಿ ವಿಧಿಸಲಾಗುತ್ತಿದೆ. ಆದರೆ ಸೆಸ್‌ನಿಂದ ಬೀಡಿ ಕಾರ್ಮಿಕರಿಗೆ ಯಾವುದೇ ಪ್ರಯೋಜನ ಆಗಿಲ್ಲ. ರಾಜ್ಯದ ಕಾರ್ಮಿಕರ ಕಲ್ಯಾಣ ಮಂಡಳಿಗೆ ಹೋಗ ಬೇಕಾದ ಸೆಸ್ ಹಣ, ಪ್ರಧಾನಿ ಮೋದಿ ಖಾತೆಗೆ ಸೇರುತ್ತಿದೆ. ಇದು ಕಾರ್ಮಿಕರಿಗೆ ಮಾಡುತ್ತಿರುವ ವಂಚನೆ ಎಂದು ಆರೋಪಿಸಿದರು.
ಕನಿಷ್ಠ ಕೂಲಿಗಾಗಿ ಹಲವು ವರ್ಷಗಳಿಂದ ಬೀಡಿ ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ. ರಾಜ್ಯದಲ್ಲಿ 6-7ಲಕ್ಷ ಹಾಗೂ ದೇಶದಲ್ಲಿ ಒಂದು ಕೋಟಿ ಬೀಡಿ ಕಾರ್ಮಿಕರು ಬೀಡಿಯನ್ನೇ ನೆಚ್ಚಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಸರಕಾರದ ನೀತಿಯಿಂದ ಅವರ ಬದುಕು ದಯನೀಯ ಸ್ಥಿತಿಯಲ್ಲಿದೆ. ಆದುದರಿಂದ ಕನಿಷ್ಠ ಕೂಲಿಗಾಗಿ ತೀವ್ರ ಹೋರಾಟ ಮಾಡಬೇಕಾದ ಅನಿವಾರ್ಯ ಎದುರಾಗಿದೆ ಎಂದು ಅವರು ತಿಳಿಸಿದರು.
ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ ಮಾತನಾಡಿ, ಬೀಡಿ ಕಾರ್ಮಿಕರು ಬೆವರು ಸುರಿಸಿ ದುಡಿದ ಹಣವನ್ನು ಲೂಟಿ ಮಾಡುವ ಮನಸ್ಥಿತಿ ನಮ್ಮನ್ನು ಆಳುತ್ತಿದೆ. ಬಡವರ ಹೊಟ್ಟೆ ಮೇಲೆ ಹೊಡೆದು ಆಸ್ತಿ ಮಾಡುವುದಾದರೆ ನಾವು ಸಮ್ಮನ್ನೆ ಕೂರಲು ಆಗಲ್ಲ. ಬೀಡಿ ಕಾರ್ಮಿಕರ ಪೂರ್ತಿ ಹಣವನ್ನು ಕೂಡಲೇ ನೀಡಬೇಕು. ಇದಕ್ಕಾಗಿ ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಹೇಳಿದರು.
ಧರಮಿಯಲ್ಲಿ ಉಡುಪಿ ಜಿಲ್ಲಾಬೀಡಿ ಫೆಡರೇಶನ್ ಕೋಶಾಧಿಕಾರಿ ಕವಿರಾಜ್ ಎಸ್.ಕಾಂಚನ್, ಕಾರ್ಯದರ್ಶಿ ಉಮೇಶ್ ಕುಂದರ್, ಸಿಐಟಿಯು ಉಡುಪಿ ಜಿಲ್ಲಾಧ್ಯಕ್ಷ ಶಶಿಧರ ಗೊಲ್ಲ, ಮೋಹನ್, ಉಡುಪಿ ಜಿಲ್ಲಾ ಬೀಡಿ ಫೆಡರೇಶನ್ ಮುಂಖಡರಾದ ಬಲ್ಕೀಸ್, ನಳಿನಿ ಎಸ್., ಗಿರಿಜ, ಎಐಟಿಯುಸಿ ಸಂಘದ ಮುಖಂಡರಾದ ಶಶಿಕಲಾ, ಮಮತಾ ಉಪಸ್ಥಿತರಿದ್ದರು.