×
Ad

ದ್ವೇಷ ಭಾಷಣ ಮಸೂದೆ ಅಭಿವ್ಯಕ್ತ ಸ್ವಾತಂತ್ರ್ಯದ ಹರಣ: ಹೊದಿಗೆರೆ

Update: 2026-01-13 22:46 IST

ಉಡುಪಿ, ಜ.13: ದ್ವೇಷ ಭಾಷಣ ಮಸೂದೆಯನ್ನು ಯಾವುದೇ ಚರ್ಚೆಗೆ ಅವಕಾಶ ನೀಡದೇ ತರಾತುರಿಯಲ್ಲಿ ಅಂಗೀಕರಿಸಿ ರಾಜ್ಯಪಾಲರಿಗೆ ಒಪ್ಪಿಸಿದ್ದು, ಇದು ಅಭಿವ್ಯಕ್ತ ಸ್ವಾತಂತ್ರ್ಯದ ಹರಣ ಎಂದು ಬಿಜೆಪಿ ರಾಜ್ಯ ವಕ್ತಾರೆ ಸುರಭಿ ಹೊದಿಗೆರೆ ಆರೋಪಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಟ್ಲರ್ ಆಡಳಿತ ನಡೆಯು ತ್ತಿದೆ. ಹೀಗಾಗಿ ವಿಧಾನಸಭೆ ಅಥವಾ ಕಾನೂನು ತಜ್ಞರೊಂದಿಗೆ ಯಾವುದೇ ಚರ್ಚೆ ನಡೆಸದೇ ಕಾಂಗ್ರೆಸ್ ಸರಕಾರ ದ್ವೇಷ ಭಾಷಣ-ದ್ವೇಷ ಅಪರಾಧಗಳ ಪ್ರತಿಬಂಧಕ ಮಸೂದೆಯನ್ನು ಜಾರಿಗೊಳಿಸುವುದಕ್ಕೆ ಹೊರಟಿದೆ. ಈ ಮೂಲಕ ತನ್ನನ್ನು ಟೀಕಿಸುವವರನ್ನು ಹೆದರಿಸಿ, ತಮ್ಮ ಮತದಾರರನ್ನು ಓಲೈಸುವ ಹುನ್ನಾರ ನಡೆಸಿದೆ ಎಂದರು.

ಈ ವಿಧೇಯಕ ಅನೇಕ ಗೊಂದಲಗಳಿಂದ ಕೂಡಿದೆ. ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಎಂದರೇನು ಎಂಬುದನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿಲ್ಲ. ಯಾವುದು ದ್ವೇಷ ಭಾಷಣ ಎಂಬುದನ್ನು ನಿರ್ಧಾರಿಸುವ ಅಧಿಕಾರ ಯಾರದ್ದು ಎಂಬುದು ತಿಳಿಸಿಲ್ಲ. ಸರಕಾರ ತನಗಾಗದವರ ಮೇಲೆ ಈ ವಿಧೇಯಕವನ್ನು ಬಳಸುವ ಅಪಾಯವಿದೆ ಎಂದು ಅವರು ಆರೋಪಿಸಿದರು.

ಸರಕಾರ ವಿಧಾನಸಭೆಯಲ್ಲಿ ಈ ವಿಧೇಯಕವನ್ನು ಮಂಡಿಸಿ, ಅದನ್ನು ಅಂಗೀಕರಿಸಲು ರಾಜ್ಯಪಾಲರಿಗೆ ಕಳಹಿಸಿದೆ. ಆದರೆ ಅದಕ್ಕೆ ಸಹಿ ಹಾಕದಂತೆ ಬಿಜೆಪಿ ಈಗಾಗಲೇ ರಾಜ್ಯಪಾಲರನ್ನು ಒತ್ತಾಯಿಸಿದೆ. ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ವಕ್ತಾರ ದಿವಾಕರ್ ಶೆಟ್ಟಿ ಕೆ. ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News