ಕುಂದಾಪುರ ತಾಲೂಕಿನಾದ್ಯಂತ ಭಾರೀ ಮಳೆ; ಜನಜೀವ ಅಸ್ತವ್ಯಸ್ತ
Update: 2025-05-29 12:30 IST
ಕುಂದಾಪುರ: ತಾಲೂಕಿನಾದ್ಯಂತ ಬುಧವಾರ ರಾತ್ರಿಯಿಂದ ಬಿಡದೇ ಸುರಿಯುತ್ತಿರುವ ಮಳೆ ಗುರುವಾರ ಮಧ್ಯಾಹ್ನದವರೆಗೂ ಮುಂದುವರೆದಿದೆ. ನಿರಂತರ ಮಳೆಯಿಂದಾಗಿ ಹಳ್ಳ-ಕೊಳಗಳು ತುಂಬಿ ಹರಿಯುತ್ತಿದ್ದು ವರ್ಷಧಾರೆಯಿಂದ ಜನಜೀವ ಅಸ್ತವ್ಯಸ್ತವಾಗಿದೆ.
ಹೆದ್ದಾರಿಯಲ್ಲಿ ಕೃತಕ ಕೆರೆ: ರಾತ್ರಿಯಿಡೀ ಹಾಗೂ ಮುಂಜಾನೆಯಿಂದ ಸುರಿದ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಗಳು ಅಕ್ಷರಶಃ ಕೃತಕ ಕೆರೆಯಾಗಿ ಮಾರ್ಪಟ್ಟು ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ. ಕೋಟೇಶ್ವರ, ಅಂಕದಕಟ್ಟೆ, ಕುಂದಾಪುರದ ಟಿ.ಟಿ. ರಸ್ತೆ ಮೊದಲಾದೆಡೆ ಸರ್ವೀಸ್ ರಸ್ತೆಗಳಲ್ಲಿ ಮೊಣಕಾಲೆತ್ತರ ನೀರು ನಿಂತಿರುವ ದೃಶ್ಯ ಕಂಡುಬಂತು.