ಹೆಜಮಾಡಿ ಟೋಲ್ ಪ್ಲಾಝಾ ವಿವಾದ: ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಗ್ರಾಪಂ ತಡೆ
ಪಡುಬಿದ್ರೆ: ಹೆಜಮಾಡಿ ಒಳ ರಸ್ತೆಯ ಟೋಲ್ ಪ್ಲಾಝಾದ ಎರಡೂ ಬದಿಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿರುವ ಟೋಲ್ ಕಂಪೆನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹೆಜಮಾಡಿ ಗ್ರಾಪಂ, ಸ್ಥಳಕ್ಕೆ ಆಗಮಿಸಿ ಸೊತ್ತುಗಳನ್ನು ವಶಪಡಿಸಿಕೊಂಡು ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಗುರುವಾರ ನಡೆದಿದೆ.
ಈ ಹಿಂದೆ ಜಿಲ್ಲಾಡಳಿತ ನಿರ್ದೇಶಿಸಿದಂತೆ ಹೆಜಮಾಡಿ ಒಳ ರಸ್ತೆಯ ಪ್ರತ್ಯೇಕ ಟೋಲ್ ನಲ್ಲಿ ಶಾಲಾ ವಾಹನ ಸಹಿತ ಹೆಜಮಾಡಿ ಗ್ರಾಮಸ್ಥರ ವಾಹನಗಳಿಗೆ ಸಂಪೂರ್ಣ ವಿನಾಯಿತಿ ನೀಡಲಾಗುತ್ತಿತ್ತು. ಇತ್ತೀಚೆಗೆ ಕೆಲವೊಂದು ಸ್ಥಳೀಯ ವಾಹನಗಳಿಗೆ ಮತ್ತು ಶಾಲಾ ವಾಹನಗಳಿಂದಲೂ ಟೋಲ್ ಸಂಗ್ರಹಕ್ಕೆ ಗುತ್ತಿಗೆ ಕಂಪೆನಿ ಮುಂದಾಗಿತ್ತು. ಈ ಬಗ್ಗೆ ದೂರು ಪಡೆದ ಹೆಜಮಾಡಿ ಗ್ರಾಪಂ ಸೋಮವಾರ ಟೋಲ್ನ ಎರಡೂ ಬದಿಗಳಲ್ಲಿ ಪ್ರತ್ಯೇಕ ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಒಂದು ಬದಿಯಲ್ಲಿ ಪ್ರತ್ಯೇಕ ರಸ್ತೆಯನ್ನೂ ನಿರ್ಮಿಸಲಾಗಿತ್ತು. ಪೋಲಿಸರ ಮಧ್ಯಪ್ರವೇಶದ ಬಳಿಕ ಸದಸ್ಯರು ಹಿಂದಿರುಗಿ, ತುರ್ತು ಸಭೆ ಕರೆದು ಪರವಾನಿಗೆರಹಿತ ಒಳ ರಸ್ತೆಯ ಟೋಲ್ ಸ್ಥಗಿತಕ್ಕೆ ನಿರ್ಣಯಿಸಿ ಟೋಲ್ ಪ್ಲಾಝಾ ಗೋಡೆಗೆ ಅಂಟಿಸಿದ್ದರು.
ಜಿಲ್ಲಾಧಿಕಾರಿ ಆದೇಶದ ಕಡೆಗಣನೆ
ಸೋಮವಾರ ನಡೆದ ಘಟನೆಯ ಮಾಹಿತಿ ಅರಿತ ಜಿಲ್ಲಾಡಳಿತ ಎರಡೂ ಕಡೆಯವರನ್ನು ಬುಧವಾರ ಕರೆಸಿ ಚರ್ಚೆ ಬಳಿಕ ಸದ್ಯ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಲಾಗಿತ್ತು. ಉಡುಪಿ ಜಿಲ್ಲಾಧಿಕಾರಿ ಸಮ್ಮುಖ ನಡೆದ ಸಭೆಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ನಿರ್ದೇಶನ ನೀಡಿದ್ದರೂ, ಕೆಕೆಆರ್ ಟೋಲ್ ಕಂಪೆನಿಯು ಗುರುವಾರ ಬೆಳಗ್ಗೆ ಒಳ ರಸ್ತೆಯ ಟೋಲ್ ನ ಎರಡೂ ಬದಿಗಳಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಗುರುವಾರ ಬೆಳಗ್ಗೆ ಟೋಲ್ ಕಂಪೆನಿಯು ಪ್ರತ್ಯೇಕವಾಗಿ ನಿರ್ಮಿಸಿದ ಜಾಗದಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಟೋಲ್ ಕಂಪೆನಿ ಮುಂದಾಗಿತ್ತು. ವಿಷಯ ತಿಳಿದ ಹೆಜಮಾಡಿ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಸ್ಥಗಿತಗೊಳಿಸಿ ಪಂಚಾಯತ್ ವತಿಯಿಂದ ಅವರ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಸಂದರ್ಭ ಆಗಮಿಸಿದ ಅಧಿಕಾರಿಗಳ ಹಾಗೂ ಪಂಚಾಯತ್ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಟೋಲ್ ಮ್ಯಾನೇಜರ್ ತಿಮ್ಮಯ್ಯ ಟೋಲ್ ಕಾಮಗಾರಿ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಪಡುಬಿದ್ರೆ ಠಾಣಾಧಿಕಾರಿ ಸಕ್ತಿವೇಲು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಜಿಲ್ಲಾಡಳಿತದ ಆದೆಶ ಪಾಲಿಸುವಂತೆ ನಿರ್ದೇಶನ ನೀಡಿದರು. ಹೆಜಮಾಡಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಎ. ಮೆಂಡನ್, ಉಪಾಧ್ಯಕ್ಷ ಮೋಹನ್ ಸುವರ್ಣ, ಸದಸ್ಯರಾದ ಶರಣ್ ಕುಮಾರ್ ಮಟ್ಟು, ಪ್ರಾಣೇಶ್ ಹೆಜ್ಮಾಡಿ, ಕಬೀರ್, ಜನಾರ್ದನ ಕೋಟ್ಯಾನ್, ಪವಿತ್ರಾ ಗಿರೀಶ್, ಹೆಜಮಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸುಧಾಕರ ಕರ್ಕೇರ, ಲೋಕೇಶ್ ಅಮೀನ್, ಎಚ್. ರವಿ ಕುಂದರ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.