×
Ad

ಹಿರಿಯಡ್ಕ: ತಲವಾರಿನಿಂದ ಮಾರಣಾಂತಿಕ ಹಲ್ಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Update: 2025-11-19 14:13 IST

ಹಿರಿಯಡ್ಕ, ನ.19: ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ತಲವಾರಿನಿಂದ ಮಾರಾಣಾಂತಿಕ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಣಜಾರು ಪರಾರಿ ಮನೆ ನಿವಾಸಿ ಮಂಜುನಂದ ಹೆಗ್ಡೆ(49) ಹಾಗೂ ಕೊಪ್ಪಲ ನಿವಾಸಿ ಜಗದೀಶ್ ಹೆಗ್ಡೆ(48) ಬಂಧಿತ ಆರೋಪಿಗಳು. ಇವರಿಂದ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ನ.15ರಂದು ರಾತ್ರಿ ವೇಳೆ ಶಿವರಾಜ್ ಎಂಬವರು ಕೆಲಸ ಮುಗಿಸಿ ವಾಪಾಸ್ಸು ಬೈಕಿನಲ್ಲಿ ಮನೆಗೆ ಬರುತ್ತಿರುವಾಗ ಕಣಜಾರು ಗ್ರಾಮದ ಕೊಪ್ಪಲ ಎಂಬಲ್ಲಿ ಮಂಜುನಂದ ಹೆಗ್ಡೆ ಅಡ್ಡಗಟ್ಟಿ ತಲವಾರಿನಲ್ಲಿ ತಲೆಗೆ ಮಾರಣಾಂತಿಕವಾಗಿ ಹೊಡೆದು ಕೊಲೆಗೆ ಪ್ರಯತ್ನಿಸಿದ್ದನು. ಬೈಕ್‌ನಿಂದ ಕೆಳಗೆ ಬಿದ್ದ ಶಿವರಾಜ್‌ಗೆ ಮಂಜುನಂದ ತಲವಾರಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಮಂಜುನಂದ ಹೆಗ್ಡೆ ಜೊತೆ ಜಯಾನಂದ ಹೆಗ್ಡೆ, ಚಂದ್ರಹಾಸ ಹೆಗ್ಡೆ ಹಾಗೂ ಇತರ 7-8 ಮಂದಿ ಇದ್ದು, ಅವರು ಕೂಡ ಹಲ್ಲೆಗೆ ಪ್ರಯತ್ನಿಸಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಹಿರಿಯಡ್ಕ ಪೊಲೀಸ್ ಉಪನಿರೀಕ್ಷಕ ಪುನೀತ್ ಕುಮಾರ್ ನೇತೃತ್ವದ ತಂಡ, ಪ್ರಕರಣದ ಆರೋಪಿ ಕೊಪ್ಪಲ ನಿವಾಸಿ ಜಗದೀಶ್ ಹೆಗ್ಡೆಯನ್ನು ನ.17ರಂದು ಬಂಧಿಸಿದೆ. ಕೃತ್ಯ ನಡೆಸಿದ ಬಳಿಕ ಆರೋಪಿ ಮಂಜುನಂದ ಹೆಗ್ಡೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸ್ ತಂಡ, ಆರೋಪಿ ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ನ.18ರಂದು ಬಂಧಿಸಿದೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News