ವಿದ್ಯಾರ್ಥಿಗಳಿಗೆ ನಿರಂತರ ವಿದ್ಯುತ್ ಒದಗಿಸಿ ಸಿಎಂಗೆ ‘ಹೊಯ್ಸಳ’ ದೀಪೇಶ್ ಶೆಣೈ ಮನವಿ
ದೀಪೇಶ್ ಶೆಣೈ
ಉಡುಪಿ, ಜ.19: ಈ ಬಾರಿ ಮಾರ್ಚ್-ಎಪ್ರಿಲ್ ತಿಂಗಳಲ್ಲಿ ನಡೆಯುವ 2026ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ರಾಜ್ಯದ ಲಕ್ಷಾಂತರ ಮಂದಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅವರ ಪರೀಕ್ಷಾ ಕಲಿಕೆಗಾಗಿ ನಿರಂತರ ವಿದ್ಯುತ್ ಒದಗಿಸುವಂತೆ 2025ನೇ ಸಾಲಿನಲ್ಲಿ ರಾಜ್ಯ ಸರಕಾರ ನೀಡುವ ಹೊಯ್ಸಳ ಶೌರ್ಯ ಪ್ರಶಸ್ತಿ ಪಡೆದಿರುವ ದೀಪೇಶ್ ದೀಪಕ್ ಶೆಣೈ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ.
ಉಡುಪಿ ಕುಂಜಿಬೆಟ್ಟಿನ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ದೀಪೇಶ್ ದೀಪಕ್ ಶೆಣೈ, ತಾವಿರುವ ಪ್ರದೇಶದಲ್ಲಿ ಅನಿಯಮಿತ ಹಾಗೂ ಅಘೋಷಿತ ವಿದ್ಯುತ್ ಕಡಿತವಾಗುತಿದ್ದು, ಇದರಿಂದ ಪರೀಕ್ಷೆಗೆ ತಯಾರಿ ನಡೆಸಲು ಅಡಚಣೆಯಾ ಗುತ್ತಿದೆ. ಇದರ ಕುರಿತು ತಕ್ಷಣವೇ ಕ್ರಮಕ್ಕೆ ಮನವಿ ಸಲ್ಲಿಸಿದ್ದಾರೆ.
ಪದೇ ಪದೇ ಆಗುತ್ತಿರುವ ವಿದ್ಯುತ್ ಕಡಿತಗಳಿಂದ ಅಧ್ಯಯನಕ್ಕೆ ತೊಂದರೆಯಾಗುತ್ತಿದೆ. ಇದರೊಂದಿಗೆ ಆನ್‌ಲೈನ್ ಅಧ್ಯಯನ, ಡಿಜಿಟಲ್ ಶೈಕ್ಷಣಿಕ ಸಂಪನ್ಮೂಲಗಳು ಹಾಗೂ ಸಾಧನಗಳ ಚಾರ್ಜಿಂಗ್‌ಗೂ ಅಡಚಣೆ ಉಂಟಾಗುತ್ತಿದೆ ಎಂದು ದೂರಿದ್ದಾರೆ.
ದೀಪೇಶ್ ಶೆಣೈ ಅವರು ತಮ್ಮ ನಾಗರಿಕ ಧೈರ್ಯ ಮತ್ತು ಸಮಯಪ್ರಜ್ಞೆ, ಜಾಗೃತಿ ಕಾರ್ಯಕ್ಕಾಗಿ ಕಳೆದ ನವೆಂಬರ್ ತಿಂಗಳಲ್ಲಿ ರಾಜ್ಯ ಸರಕಾರ ನೀಡುವ ಹೊಯ್ಸಳ ಶೌರ್ಯ ಪ್ರಶಸ್ತಿಯನ್ನು ಪಡೆದಿದ್ದರು.