ಹೂಡೆ: ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಬೇತಿ ಶಿಬಿರ
ಉಡುಪಿ, ಡಿ.15: ತೋನ್ಸೆ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮೀಫ್ ನ ಜಂಟಿ ಆಶ್ರಯದಲ್ಲಿ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿ ಶಿಬಿರ ಇತ್ತೀಚೆಗೆ ನಡೆಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಮೀಫ್ ನ ಗೌರವಾಧ್ಯಕ್ಷ ಶಬೀಹ ಅಹ್ಮದ್ ಖಾಜಿ ಮಾತನಾಡಿ, ಪರೀಕ್ಷೆ ಎದುರಿಸುವುದು ಕೂಡ ಒಂದು ಕಲೆ. ಸೀಮಿತ ಅವಧಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವುದು, ಮನನ ಮಾಡುವುದು ಹಾಗೂ ಆತ್ಮಸ್ಥೈರ್ಯ ಬೆಳೆಸಿಕೊಳ್ಳುವುದರೊಂದಿಗೆ ಪರೀಕ್ಷೆಯಲ್ಲಿ ಯಶಸ್ಸು ಕಾಣುವುದು ಮುಖ್ಯ ಎಂದು ಹೇಳಿದರು.
ಸಾಲಿಹಾತ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ನಿಹಾಲ್ ಕಿದಿಯೂರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ರಾಷ್ಟ್ರೀಯ ತರಬೇತುದಾರ, ಮುಖ್ಯ ಶಿಕ್ಷಕ ರಾಜೇಂದ್ರ ಭಟ್ ವಿದ್ಯಾರ್ಥಿಗಳಿಗೆ ಈ ತರಬೇತಿ ನಡೆಸಿಕೊಟ್ಟರು.
ವೇದಿಕೆಯಲ್ಲಿ ಮೀಫ್ ನ ಖಜಾಂಚಿ ಜಿ.ಅಶ್ರಫ್ ಹೂಡೆ, ಆಡಳಿತಾಧಿಕಾರಿ ಅಸ್ಲಂ ಹೈಕಾಡಿ, ಸಾಲಿಹಾತ್ ಪಿ.ಯು. ಕಾಲೇಜು ಪ್ರಾಂಶುಪಾಲ ದಿವ್ಯಾ ಪೈ ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸುನಂದಾ ಕಾರ್ಯಕ್ರಮ ನಿರ್ವಹಿಸಿದರು. ಈ ತರಬೇತಿ ಕಾರ್ಯಾಗಾರದಲ್ಲಿ ಸುಮಾರು ನಾಲ್ಕು ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.