ಸೌಜನ್ಯಳಿಗೆ ನ್ಯಾಯ ಸಿಗದಿದ್ದರೆ ಮುಂದೆ ಯಾವ ಪ್ರಕರಣದಲ್ಲೂ ನ್ಯಾಯ ಸಿಗಲ್ಲ: ಮಹೇಶ್ ಶೆಟ್ಟಿ ತಿಮರೋಡಿ
ಮಲ್ಪೆ: ಸೌಜನ್ಯ ಪ್ರಕರಣದಲ್ಲಿ ನಿರಂತರ ಹೋರಾಟ ಮಾಡ ಲಾಗುತ್ತಿದೆ. ಈ ಪ್ರಕರಣದಲ್ಲಿ ನ್ಯಾಯ ಸಿಗದ್ದಿದ್ದರೆ ಮುಂದೆ ಈ ದೇಶದಲ್ಲಿ ಯಾವುದೇ ಪ್ರಕರಣದಲ್ಲಿಯೂ ನ್ಯಾಯ ಸಿಗಲು ಸಾಧ್ಯವಿಲ್ಲ. ಆದುದರಿಂದ ನ್ಯಾಯ ಸಿಗುವವರೆಗೆ ಹೋರಾಟ ವನ್ನು ತೀವ್ರಗೊಳಿಸಬೇಕು. ಆ ಮೂಲಕ ಅತ್ಯಾಚಾರ ಮಾಡಿದವರಿಗೆ ಹಾಗೂ ಅವರನ್ನು ರಕ್ಷಿಸಿದವರಿಗೆ ಜೈಲು ಶಿಕ್ಷೆಯಾಗ ಬೇಕು ಎಂದು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಒತ್ತಾಯಿಸಿದ್ದಾರೆ.
ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಮಲ್ಪೆ ಸೀವಾಕ್ ನಲ್ಲಿ ಶುಕ್ರವಾರ ಆಯೋಜಿಸಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಈ ಹೋರಾಟವನ್ನು ನಮ್ಮ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಸೌಜನ್ಯಳಂತಹ ಹೆಣ್ಣು ಮಗಳಿಗೆ ನ್ಯಾಯ ಸಿಗುವ ಉದ್ದೇಶದಿಂದ ಮಾಡುತ್ತಿದ್ದೇವೆ. ಧರ್ಮ ಸತ್ಯದ ನೆಲದಲ್ಲಿ ಇಂದು ಅನ್ಯಾಯ ನಡೆಯುತ್ತಿದೆ. ಅಧರ್ಮ ತಾಂಡವಾಡುತ್ತಿದೆ. ಅದನ್ನು ಕಾಪಾ ಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಆ ಮೂಲಕ ಅಧರ್ಮ ಅಳಿಯಬೇಕು ಮತ್ತು ಧರ್ಮ ಉಳಿಯಬೇಕು ಎಂದರು.
ಕೇವಲ ರಾಮ ಮಂದಿರ ನಿರ್ಮಾಣವಾದರೆ ಮಾತ್ರ ಈ ದೇಶ ಉಳಿಯಲು ಸಾಧ್ಯವಿಲ್ಲ. ಇಂತಹ ನ್ಯಾಯ, ಧರ್ಮ ಪೀಠಗಳು ಉಳಿದರೆ ಮಾತ್ರ ಭಾರತ ಉಳಿಯುತ್ತದೆ. ಅದಕ್ಕಾಗಿ ಸೌಜನ್ಯ ಪ್ರಕರಣದಲ್ಲಿ ನಾವೆಲ್ಲರು ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದು ಅವರು ತಿಳಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್, ಹೋರಾಟಗಾರ ತಮ್ಮಣ್ಣ ಶೆಟ್ಟಿ, ಸೌಜನ್ಯಳ ತಾಯಿ ಕುಸುಮಾವತಿ ಮಾತನಾಡಿದರು. ರಾಮಾಂಜಿ ನಮ್ಮ ಭೂಮಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.