ಕರಾವಳಿಯ ನಿರ್ದಿಗಂತಕ್ಕೆ ಮಣಿಪುರದ ಕನಯ್ಯಲಾಲ್ ರಂಗಭೂಮಿಯ ಇಮಾ ಸಾಬಿತ್ರಿ ತಂಡ ಭೇಟಿ
ಉಡುಪಿ: ಕರಾವಳಿಯ ನಿರ್ದಿಗಂತಕ್ಕೆ ಮಣಿಪುರದ ಕನಯ್ಯಲಾಲ್ ರಂಗಭೂಮಿಯ ಇಮಾ ಸಾಬಿತ್ರಿ ಮತ್ತು ಅವರ ಮಗ ಹೈಸ್ನಂ ತೊಂಬಾ ಅವರ ತಂಡ ಭೇಟಿ ನೀಡಿದ್ದಾರೆ.
ಇಮಾ ಸಾಬಿತ್ರಿ ಮತ್ತು ಅವರ ಮಗ ಹೈಸ್ನಂ ತೊಂಬಾ ಅವರು 18 ಜನರ ತಂಡದೊಂದಿಗೆ ಕರಾವಳಿಯ ನಿರ್ದಿಗಂತಕ್ಕೆ ಭೇಟಿ ಕೊಟ್ಟರು. ಖ್ಯಾತ ಚಿತ್ರನಟ ಪ್ರಕಾಶ್ ರಾಜ್ ಮತ್ತು ನಿರ್ದಿಗಂತದ ಸದಸ್ಯರು ಅವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುತ್ತಾ, ನಿರ್ದಿಗಂತದ ಕನಸುಗಳನ್ನು ಅವರೊಂದಿಗೆ ಹಂಚಿಕೊಂಡು, ಅವರ ಕೆಲಸಗಳ ಬಗ್ಗೆ ಆಸಕ್ತಿಯಿಂದ ವಿಚಾರಿಸುತ್ತ ಪರಸ್ಪರ ತಮ್ಮ ಅನುಭವಗಳನ್ನು ಹಂಚಿಕೊಂಡರು.
'ಕನಯ್ಯಾಲಾಲ ರಂಗಭೂಮಿ' ಎಂದೇ ಪ್ರಸಿದ್ಧವಾದ ರಂಗ ಪಠ್ಯವನ್ನು ಜಗಕ್ಕೆ ನೀಡಿದ 'ಕಲಾ ಕ್ಷೇತ್ರ ಮಣಿಪುರ' ತಂಡದ ಇಮಾ ಸಾಬಿತ್ರಿ ಮತ್ತು ಹೈಸ್ನಂ ತೊಂಬಾ ನಮ್ಮ ಕರಾವಳಿ ನಿರ್ದಿಗಂತಕ್ಕೆ ಭೇಟಿ ಇತ್ತದ್ದು ಒಂದು ಸಂತಸದ ಕ್ಷಣವಾಗಿತ್ತು ಎಂದು ಅವರು ಬಣ್ಣಿಸಿದರು.
'ಕಲಾಕ್ಷೇತ್ರ ಮಣಿಪುರ' ತನ್ನ ಪ್ರಯೋಗಗಳಿಂದ ದೇಶದ ರಂಗಭೂಮಿಯ ಚರಿತ್ರೆಯಲ್ಲೇ ಸಂಚಲನವನ್ನು ಉಂಟು ಮಾಡಿದ್ದ ಒಂದು ರಂಗ ತಂಡವಾಗಿದ್ದು, ಹೈಸ್ನಂ ಕನಯ್ಯಲಾಲ್ ಮತ್ತು ಅವರ ಪತ್ನಿ ಹೈಸ್ನಂ ಸಾಬಿತ್ರಿ ಜೊತೆಯಾಗಿ 1969ರಲ್ಲಿ ಕಟ್ಟಿದ ಈ ತಂಡದಿಂದ ಮೃತ್ಯುಸ್ವರ, ಪಬೇತ್, ಇಂಫಾಲ್ 73, ದ್ರೌಪದಿ, ಡಾಕ್ ಘರ್, ಸತಿ, ಹಸಿದ ಕಲ್ಲುಗಳು, ಕರ್ಣನಂತಹ ಇನ್ನೂ ಅನೇಕ ಪ್ರಮುಖ ನಾಟಕಗಳು ಹುಟ್ಟಿಕೊಂಡವು. ಅದರಲ್ಲೂ 'ಪೆಬೆತ್' ಇಡೀ ದೇಶವನ್ನೇ ನಿಬ್ಬರಗುಗೊಳಿಸಿದ ಒಂದು ವಿನೂತನ ಪ್ರಯೋಗವಾಗಿದ್ದು, ಇಂಪಾಲ್ 73 ಹಾಗೂ ದ್ರೌಪತಿಯಂತಹ ನಾಟಕಗಳೊಳಗಿನ ರಾಜಕೀಯ ಎಚ್ಚರ ಇಡೀ ದೇಶಕ್ಕೆ ರಂಗಭೂಮಿಯ ತಾಕತ್ತನ್ನು ತೋರಿಸಿಕೊಟ್ಟವು.
ಕನಯ್ಯ ಲಾಲ್ ದಂಪತಿಗಳ ಮಗ ಹೈಸ್ನಂ ತೊಂಬಾ ಕೂಡ ಮಣಿಪುರದ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ ನಿರ್ದೇಶಕ, ನಟ. ಇಂದು ಆ ತಂಡದ ಪ್ರಸಿದ್ಧ ನಾಟಕ ಪೆಬೆತ್ ಮಣಿಪಾಲದ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಪ್ರದರ್ಶನಗೊಳ್ಳುತ್ತಿದೆ.