×
Ad

ಮತದಾರರ ಪಟ್ಟಿಯ ಮ್ಯಾಪಿಂಗ್: ಉಡುಪಿ ಜಿಲ್ಲೆಯ ಮತದಾರರಿಗೆ ಜಿಲ್ಲಾ ಮುಸ್ಲಿಮ್ ಒಕ್ಕೂಟ ಸೂಚನೆ

Update: 2026-01-21 19:33 IST

ಉಡುಪಿ, ಜ.21: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಕರ್ನಾಟಕ ರಾಜ್ಯದಾದ್ಯಂತ 2002ರ ಮತದಾರರ ಪಟ್ಟಿಯೊಂದಿಗೆ ಹೊಸದಾಗಿ ಪರಿಷ್ಕೃತ ಮತದಾರರ ಪಟ್ಟಿಯನ್ನು ಮ್ಯಾಪಿಂಗ್ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಮತದಾರರ ಪಟ್ಟಿಯ ಮ್ಯಾಪಿಂಗ್ ಪ್ರಕ್ರಿಯೆ ದೇಶದ ಪ್ರತಿಯೊಬ್ಬ ನಾಗರಿಕನ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಪ್ರಕಟಣೆಯಲ್ಲಿ ತಿಳಿಸಿದೆ.

ಆದ್ದರಿಂದ 2002ರ ಮತದಾರರ ಪಟ್ಟಿಯಲ್ಲಿರುವ ನಿಮಗೆ ಸಂಬಂಧಿಸಿದ ಮತದಾರರ ವಿವರವು ಪ್ರಸ್ತುತ ಚಾಲ್ತಿಯ ಲ್ಲಿರುವ ಪಟ್ಟಿಯಲ್ಲಿ ಇದೆಯೋ ಇದ್ದರೆ ವಿವರಗಳು ಸರಿಯಾಗಿದೆಯೋ ಎಂಬುದನ್ನು ಖಾತ್ರಿ ಪಡಿಸಿ ಕೊಳ್ಳುವಂತೆ ಅವರು ಎಲ್ಲಾ ಮತದಾರರಿಗೂ ಸಲಹೆ ನೀಡಿದೆ. ಮತದಾರ ರೆಲ್ಲರೂ ಈ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಸಹಕರಿಸಿ ತಮ್ಮ ಮತದಾನದ ಹಕ್ಕನ್ನು ಖಾತ್ರಿ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮಹಮ್ಮದ್ ಮೌಲಾ ಉಡುಪಿ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

‘ನಿಮ್ಮ ಮತದಾನದ ಹಕ್ಕಿನ ರಕ್ಷಣೆ ನಿಮ್ಮ ಜವಾಬ್ದಾರಿಯಾಗಿದೆ’. ಈ ಬಗ್ಗೆ ಈಗಾಗಲೇ ಉಡುಪಿ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಹೇಳಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ನಿಮ್ಮ ವಾರ್ಡ್‌ನ ಜವಾಬ್ದಾರಿ ಹೊಂದಿರುವ ಬಿಎಲ್‌ಒ ಅವರನ್ನು ಸಂಪರ್ಕಿಸಿ 2002ರ ಮತದಾರರ ಪಟ್ಟಿಯೊಂದಿಗೆ ಈಗಿನ ಮತದಾರರ ಪಟ್ಟಿಯಲ್ಲಿರುವ ನಿಮ್ಮ ವಿವರಗಳನ್ನು ಕೂಡಲೇ ಮ್ಯಾಪ್ ಮಾಡಿಸಿಕೊಳ್ಳಿರಿ ಎಂದು ಮೌಲಾ ಸೂಚನೆ ನೀಡಿದ್ದಾರೆ.

ಒಂದು ವೇಳೆ ನಿಮ್ಮ ವಿವರಗಳು 2002ರ ಮತದಾರರ ಪಟ್ಟಿಯಲ್ಲಿ ಇಲ್ಲದೇ ಇದ್ದರೆ, ನಿಮ್ಮ ತಂದೆ- ತಾಯಂದಿರ ಅಥವಾ ಅಜ್ಜ- ಅಜ್ಜಿಯಂದಿರ ವಿವರಗಳನ್ನೂ ನಿಮ್ಮ ದಾಖಲೆಗಳ ಮ್ಯಾಪಿಂಗ್‌ಗಾಗಿ ಬಳಸಿಕೊಳ್ಳಬಹುದು. ವಿಶೇಷವಾಗಿ ಈ ಅವಧಿಯಲ್ಲಿ ತಮ್ಮ ವಾಸ್ತವ್ಯವನ್ನು ಬದಲಾಯಿಸಿದವರು ಮ್ಯಾಪಿಂಗ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಅಲ್ಲದೇ ವಿವಾಹದ ಬಳಿಕ ಬೇರೆ ಕಡೆಗಳಲ್ಲಿ ತಮ್ಮ ವಾಸ್ತವ್ಯ ಬದಲಿಸಿಕೊಳ್ಳುವ ಮಹಿಳೆಯರು ಈ ಬಗ್ಗೆ ವಿಶೇಷ ಗಮನ ಹರಿಸಬೇಕಾಗಿದೆ ಎಂದವರು ತಿಳಿಸಿದ್ದಾರೆ.

ಈ ಬಗ್ಗೆ ಈಗ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮಸೀದಿ ಹಾಗೂ ಸಂಘಸಂಸ್ಥೆಗಳ ಪದಾಧಿಕಾರಿ ಗಳು ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಜನರಿಗೆ ಮಾಹಿತಿ ನೀಡುವುದಲ್ಲದೆ ಎಲ್ಲಾ ರೀತಿಯಲ್ಲಿ ಸಹಕರಿಸಬೇಕು ಎಂದು ಒಕ್ಕೂಟದ ಅಧ್ಯಕ್ಷರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News