ಕರ್ತವ್ಯನಿಷ್ಠ, ನಿರ್ಭಯ, ವಿವೇಕಶೀಲ, ಕರ್ಮಯೋಗಿಗಳಾಗಿ: ಯುವಜನತೆಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕರೆ
ಉಡುಪಿ, ಜು.25: ಸಮಾಜದಲ್ಲಿ ಇಂದು ಅಸಹಿಷ್ಣುತೆ, ಆತ್ಮವಿಸ್ಮತಿ ಭಾವನೆ ಹೆಚ್ಚುತ್ತಿದೆ. ಆದರೆ ನಮ್ಮ ಯುವಜನತೆ ಕರ್ತವ್ಯನಿಷ್ಠ, ನಿರ್ಭಯ, ವಿವೇಕಶೀಲ, ಕರ್ಮಯೋಗಿಗಳಾಗುವಂತೆ ಪ್ರೇರೇಪಿಸಬೇಕಿದೆ ಎಂದು ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ.
ಪರ್ಯಾಯ ಪುತ್ತಿಗೆ ಮಠ, ಉಡುಪಿ ಶ್ರೀಕೃಷ್ಣಮಠದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆ.1ರಿಂದ ಸೆ.17ರವರೆಗೆ ನಡೆಯುವ ಶ್ರೀಕೃಷ್ಣ ಮಂಡಲೋತ್ಸವವನ್ನು ಶುಕ್ರವಾರ ಸಂಜೆ ರಾಜಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಬೋಧಿಸಿದಂತೆ ಜ್ಞಾನ, ಕರ್ಮ, ಭಕ್ತಿಯೋಗ ದಿಂದ ನಿಷ್ಕಾಮ ಭಾವ ಹೊಂದಿ ಫಲ ರಹಿತ ಚಿಂತನೆಯೊಂದಿಗೆ ಯಾವುದೇ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ, ಆತ್ಮೋನ್ನತಿಗಾಗಿ ಜೀವನದ ಉದ್ದೇಶ ಅರಿತು ಧರ್ಮ ಪಾಲನೆ ಮಾಡುವಂತೆ ಅವರು ಜನತೆಗೆ ಕರೆ ನೀಡಿದರು.
ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಆಚರಿಸಲ್ಪಡುವ ಶ್ರೀಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸು ವುದು ನನಗೆ ಅತೀವ ಸಂತಸ ತಂದಿದೆ. ಇದು ಧಾರ್ಮಿಕ ಆಚರಣೆಯ ಜೊತೆಗೆ ನಮ್ಮ ಸಾಂಸ್ಕೃತಿಕ ಪ್ರಜ್ಞೆ, ಆಧ್ಯಾತ್ಮಿಕ ಸ್ಪೂರ್ತಿ ಹಾಗೂ ಸಾಮಾಜಿಕ ಏಕತೆಯ ಪವಿತ್ರ ಹಬ್ಬವಾಗಿದೆ ಎಂದರು.
ಧರ್ಮ, ಭಕ್ತಿ, ಸತ್ಕರ್ಮದಲ್ಲಿ ಬದುಕಿನ ಸಾಫಲ್ಯವಿದೆ. ಧಾರ್ಮಿಕ ಅನುಷ್ಠಾನ, ಸಾಂಸ್ಕೃತಿಕ ಚೈತನ್ಯ, ಆಧ್ಯಾತ್ಮಿಕ ಪ್ರೇರಣೆ, ಸಾಮಾಜಿಕ ಏಕತೆಯಿಂದ ಪ್ರತಿಯೊಬ್ಬರ ಬದುಕು ಸಾರ್ಥಕ್ಯ ಹೊಂದಲು ಸಾಧ್ಯವಿದೆ. ಆಧುನಿಕ ವಿಶ್ವದಲ್ಲಿ ವೇದಾಂತ ಪರಂಪರೆಯ ಪ್ರತಿಷ್ಠಾಪನೆಯಾಗಬೇಕು ಎಂದರು.
ಜಗತ್ತಿನ ಮೂಲಭಾಷೆ ಸಂಸ್ಕೃತ: ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು, ಸಂಸ್ಕೃತ ವಿಶ್ವಭಾಷೆ. ಜಗತ್ತಿನ ಎಲ್ಲಾ ಭಾಷೆಗಳ ಮೂಲವೇ ಸಂಸ್ಕೃತ. ಸರ್ವ ಭಾಷೆಗಳ ಜನನಿಯಾದ ಸಂಸ್ಕೃತ ಅಂತರ್ಲೋಕೀಯ ದೇವ ಭಾಷೆ ಎಂದರು.
ಕನ್ನಡ ಪ್ರಾದೇಶಿಕ ಭಾಷೆಯಾದರೆ, ಹಿಂದಿ ನಮ್ಮ ರಾಷ್ಟ್ರಭಾಷೆ. ಇಂಗ್ಲೀಷ್ ಅಂತಾರಾಷ್ಟ್ರೀಯ ಭಾಷೆ. ಈ ಎಲ್ಲಾ ಭಾಷೆಗಳಿಗೆ ತಾಯಿ ಸಂಸ್ಕೃತವಾಗಿದ್ದು, ಅದು ದೇವ ಭಾಷೆ, ಭಗವಂತ ಪ್ರಿಯ ಭಾಷೆಯಾಗಿದೆ ಎಂದು ಬಣ್ಣಿಸಿದರು.
ರಾಜ್ಯಪಾಲರನ್ನು ಕಡಗೋಲು ಸಹಿತವಾಗಿ ಗೌರವಿಸಿದ ಪುತ್ತಿಗೆ ಶ್ರೀಗಳು, ಉದ್ಘಾಟನೆ ಸಂದರ್ಭದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಮೊಸರು ಕುಡಿಕೆಗೆ ಸಂಕೇತವಾಗಿ ಹೂವುಗಳಿಂದ ತುಂಬಿದ ಮಡಿಕೆಯನ್ನು ರಾಜ್ಯಪಾಲರಿಂದ ಒಡೆಸಿದರು.
ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥ ಶ್ರೀಪಾದರು ಮಾತನಾಡಿದರು. ಮಾಹೆ ವಿವಿ ಸಹಕುಲಾಪತಿ ಡಾ.ಎಚ್. ಎಸ್. ಬಲ್ಲಾಳ್, ಉಡುಪಿ ಶಾಸಕ ಯಶಪಾಲ್ ಸುವರ್ಣ ಉಪಸ್ಥಿತರಿದ್ದರು.
ಉದ್ಯಮಿಗಳಾದ ಸನಾತನ ಫೌಂಡೇಶನ್ ಮುಖ್ಯಸ್ಥ ಡಾ. ಎಚ್. ಎಸ್. ರಾಘವೇಂದ್ರ ರಾವ್, ಬಾಳೆಕುದ್ರು ರಾಮಚಂದ್ರ ಉಪಾಧ್ಯಾಯರನ್ನು ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೆ.ವಿ.ರಮಣ ಆಚಾರ್ಯ ಸ್ವಾಗತಿಸಿದರು. ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.