ಮಂಗಳೂರು, ಅ.31: ಬಹುಕೋಟಿ ಪೊಂಜಿ ಹೂಡಿಕೆಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇ.ಡಿ.) ಮಂಗಳೂರು ಉಪವಲಯ ಕಚೇರಿಯು ಆರೋಪಿಗಳಿಂದ 427.16 ಕೋ.ರೂ. ಮೌಲ್ಯದ ಚರ ಮತ್ತು ಸ್ಥಿರಾಸ್ತಿಗಳನ್ನು ಅ.30ರಂದು ತಾತ್ಕಾಲಿಕವಾಗಿ ಜಪ್ತಿ ಮಾಡಿದೆ ಎಂದು ಪ್ರಕಟನೆ ತಿಳಿಸಿದೆ.

ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಮುಖ್ಯಸ್ಥ ಹಾಗೂ ಪ್ರಕರಣದ ಮುಖ್ಯ ಆರೋಪಿ ಶಿವಾನಂದ ಸಿದ್ದಪ್ಪನೀಲಣ್ಣವರ್ ಹಾಗೂ ಆತನೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಸೇರಿದೆ ಎನ್ನಲಾದ ಆಸ್ತಿಗಳನ್ನು ಅಕ್ರಮ ಹಣ ವರ್ಗಾವಣೆ 2002ರ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ಹೊರಡಿಸಲಾದ ತಾತ್ಕಾಲಿಕ ಜಪ್ತಿ ಆದೇಶದ ಮೂಲಕ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಈ ಪ್ರಕರಣದಲ್ಲಿ 35 ಸಾವಿರಕ್ಕೂ ಅಧಿಕ ಹೂಡಿಕೆದಾರರಿಗೆ ಲಾಭದ ಆಮಿಷವೊಡ್ಡಿ ಹಣ ಸಂಗ್ರಹಿಸಲಾಗಿತ್ತು. ಅದರಂತೆ ತನಿಖೆಯ ವೇಳೆ ಸುಮಾರು 2,459 ಕೋ.ರೂ. ಅಪರಾಧದ ಆದಾಯ (ಪ್ರೊಸೀಡ್ಸ್ ಆಫ್ ಕ್ರೈಂ) ಇರುವುದು ಪತ್ತೆಯಾಗಿದೆ.

ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಇಡಿ ತನಿಖೆ ಆರಂಭಿ ಸಿತ್ತು. ಶಿವಾನಂದ ಸಿದ್ದಪ್ಪನೀಲಣ್ಣವರ್‌ನನ್ನು ಆ.13ರಂದು ಬಂಧಿಸಲಾಗಿತ್ತು. ಬಳಿಕ ಅ.9ರಂದು ಶಿವಾನಂದ ಸಹಿತ ಐವರು ಆರೋಪಿಗಳು ಮತ್ತು ಸಂಸ್ಥೆಗಳ ವಿರುದ್ಧ ಮಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ದೂರು ದಾಖಲಿಸಿತ್ತು.

ತಿಂಗಳಿಗೆ ಶೇ.3ರಷ್ಟು ಖಚಿತ ಬಡ್ಡಿ ಹಾಗೂ ಹೊಸ ಹೂಡಿಕೆದಾರರನ್ನು ಪರಿಚಯಿಸಿದವರಿಗೆ ಶೇ.0.5ರಷ್ಟು ಕಮಿಷನ್ ನೀಡುವುದಾಗಿ ಭರವಸೆ ನೀಡಲಾಗಿತ್ತು. ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಷೇರು ಮಾರು ಕಟ್ಟೆಯ ವಹಿವಾಟುಗಳಲ್ಲಿ ತೊಡಗಿಸಿ 185.95 ಕೋ.ರೂ.ನಷ್ಟ ಅನುಭವಿಸಿರುವುದು ಪತ್ತೆಯಾಗಿದೆ. ಸುಮಾರು 25 ಕೋ.ರೂ.ವನ್ನು ವಿವಿಧ ಸಹಕಾರಿ ಸಂಘಗಳ ಮೂಲಕ ವರ್ಗಾಯಿಸಿ ಎಫ್‌ಡಿ ಆಧಾರದಲ್ಲಿ ಸಾಲ ಪಡೆದು ಜಮೀನು ಖರೀದಿಸಲು ಬಳಸಲಾಗಿದೆ ಎಂದು ತನಿಖೆಯಿಂದ ಬಯಲಾಗಿದೆ. ಸಂಗ್ರಹಿಸಿದ ಹಣವನ್ನು ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳು ಹಾಗೂ ಶಿವಂ ಸೇವಾ (ಒಪಿಸಿ) ಪ್ರೈ.ಲಿ., ಶಿವಂ ಲೈಫ್‌ಲೈನ್ ಪ್ರೈ.ಲಿ. ಮತ್ತು ಶಿವಂ ಫುಡ್ಸ್ ಸಹಿತ ಸಂಬಂಧಿತ ಸಂಸ್ಥೆಗಳಿಗೆ ವರ್ಗಾಯಿರುವುದು ಕಂಡು ಬಂದಿದೆ ಎಂದು ಇಡಿ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor