ಉಡುಪಿ: ರಫ್ತು ಉದ್ದಿಮೆದಾರರಿಗೆ ರಫ್ತು ಪ್ರೋತ್ಸಾಹಕ್ಕೆ ಕಾರ್ಯಾಗಾರ
ಉಡುಪಿ, ಅ.31: ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಆಶ್ರಯದಲ್ಲಿ ಜಿಲ್ಲಾ ಪಂಚಾ ಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜವಳಿ ವಲಯದ ರಫ್ತು ಉದ್ದಿಮೆದಾರರಿಗೆ ಒಂದು ದಿನದ ರಫ್ತು ಪ್ರೋತ್ಸಾಹನ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತುಮಕೂರು ಪೂರ್ವ ವಲಯದ ಕೈಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕಿ ಸುಮಲತಾ ಡಿ., ಭಾರತದ ಜವಳಿ ಉದ್ಯಮವು ದೇಶದ ಆರ್ಥಿಕತೆಗೆ ಬಲ ನೀಡುತ್ತಿದೆ. ಜವಳಿ ಉದ್ಯಮವು 2025-26ನೇ ಆರ್ಥಿಕ ಸಾಲಿಗೆ 35 ಬಿಲಿಯನ್ ಡಾಲರ್‌ನಷ್ಟು ರಫ್ತು ವಹಿವಾಟು ದಾಖಲಿಸಿದೆ. 2030ರ ವೇಳೆಗೆ ಭಾರತದ ಜವಳಿ ಉದ್ಯಮವು 100 ಬಿಲಿಯನ್ ಡಾಲರ್ ವ್ಯವಹಾರ ನಡೆಸಬೇಕು ಎನ್ನುವ ಗುರಿ ಹೊಂದಲಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಯಲ್ಲೂ ಕಾರ್ಯಾಗಾರಗಳನ್ನು ಹಮ್ಮಿಕೊಂಡು ಉದ್ದಿಮೆದಾರರಿಗೆ ಮಾಹಿತಿ ನೀಡಲಾ ಗುತ್ತಿದೆ ಎಂದರು.
ಇಲ್ಲಿ ಪಡೆದ ಮಾಹಿತಿಗಳನ್ನು ಸದುಪಯೋಗ ಪಡಿಸಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಯ ಮಾನದಂಡ ಗಳಿಗೆ ಅನುಗುಣವಾಗಿ ತಮ್ಮ ಉತ್ಪನ್ನಗಳನ್ನು ಉತ್ಪಾದಿಸಿ ಗರಿಷ್ಠ ರಫ್ತು ದಾಖಲಿಸಿ ದೇಶದ ಆರ್ಥಿಕತೆ ಬಲ ತುಂಬಬೇಕು ಎಂದು ಉದ್ದಿಮೆದಾರರಿಗೆ ಸುಮಲತಾ ಕಿವಿಮಾತು ಹೇಳಿದರು.
ಉಡುಪಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ವಾಮನ್ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 50ರಿಂದ 60 ರಫ್ತು ಉದ್ದಿಮೆದಾರರು, ಜವಳಿ, ಗೋಡಂಬಿ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದಾರೆ. ಜಿಲ್ಲೆಯು 50 ದೇಶಗಳಿಗೆ ವಿವಿಧ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದು 2,600 ಕೋಟಿ ರೂ. ವವಾಟು ನಡೆಸುತ್ತಿದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಧಾರವಾಡ ಕೇಂದ್ರಿಯ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ವಿಾಜ್ ಸೋಮಕುಮಾರ್, ವಿಟಿಪಿಸಿಯ ಅಬ್ದುಲ್ ರೆಹಮಾನ್ ತಾಜುದ್ದೀನ್, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಭಾಗವಹಿಸಿದ್ದರು.
ಉಡುಪಿ ಸಣ್ಣ ಕೈಗಾರಿಕೆ ಘಟಕದ ಕಾರ್ಯದರ್ಶಿ ರಂಜನ್ ಕಲ್ಕೂರ, ಜಿಲ್ಲೆಯ ರಫ್ತು ಉದ್ದಿಮೆದಾರರು ಉಪಸ್ಥಿತರಿದ್ದರು. ಡಿಪಿಆರ್‌ಸಿ ಸಿಬ್ಬಂದಿ ಕೃಷ್ಣ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ವಂದಿಸಿದರು.