×
Ad

ಮಲ್ಪೆ ಬಂದರು ಸಮಗ್ರ ನಿರ್ವಹಣೆ: ಅಧಿಕಾರಿಗಳಿಗೆ ಉಡುಪಿ ಡಿಸಿ ನಿರ್ದೇಶನ

Update: 2025-03-28 21:25 IST

ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ

ಉಡುಪಿ: ಮಲ್ಪೆ ಬಂದರು ಪ್ರದೇಶದಲ್ಲಿ ಸ್ವಚ್ಛತೆ ಸೇರಿದಂತೆ ವಿವಿಧ ನಿರ್ವಹಣಾ ಕಾರ್ಯಗಳನ್ನುಅಚ್ಚುಕಟ್ಟಾಗಿ ನಿರ್ವಹಿಸಿ ಮೀನುಗಾರಿಕಾ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸೂಚನೆ ನೀಡಿದ್ದಾರೆ.

ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಮಲ್ಪೆ ಬಂದರು ಸಮಗ್ರ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮಲ್ಪೆ ಬಂದರು ರಾಜ್ಯದಲ್ಲಿಯೇ ಅತಿ ದೊಡ್ಡ ಮೀನುಗಾರಿಕಾ ಬಂದರಾಗಿದ್ದು, ಇಲ್ಲಿ ಸರಿಯಾದ ರೀತಿಯಲ್ಲಿ ಮೀನುಗಾರಿಕಾ ಚಟುವಟಿಕೆ ಗಳನ್ನು ಕೈಗೊಳ್ಳಲು ಮೀನುಗಾರರಿಗೆ ಅನುಕೂಲವಾಗುವಂತೆ ಎಲ್ಲಾ ರೀತಿಯ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಮಲ್ಪೆ ಬಂದರಿನಲ್ಲಿ ಮೀನುಗಳ ಕಳ್ಳತನ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ .ಇವುಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸಾಧ್ಯವಾದರೆ ಮಲ್ಪೆ ಬಂದರಿನಲ್ಲಿ ಪೊಲೀಸ್ ಔಟ್ ಪೋಸ್ಟನ್ನು ಸ್ಥಾಪಿಸಲು ಸ್ಥಳಾವಕಾಶ ಮಾಡಿ ಕೊಡಬೇಕೆಂದು ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ಮಲ್ಪೆ ಮೀನುಗಾರಿಕಾ ಬಂದರಿಗೆ ಮೂರು ದ್ವಾರಗಳಿದ್ದು ಸಾರ್ವಜನಿಕರನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿದೆ. ಆದ್ದರಿಂದ ಮೀನುಗಾರಿಕೆ ಬಂದರಿಗೆ ಬರುವವರನ್ನು ಸರಿಯಾದ ರೀತಿಯಲ್ಲಿ ತಪಾಸಣೆ ಮಾಡಿ ಒಳಗೆ ಬಿಡಬೇಕು, ಈ ಕಾರ್ಯ ಮಾಡಲು ಗುತ್ತಿಗೆದಾರರು ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಬೇಕೆಂದು ಸೂಚನೆ ನೀಡಿದರು.

ಮಲ್ಪೆ ಬಂದರಿನ ಗುತ್ತಿಗೆದಾರರು ಬಂದರಿನಲ್ಲಿ ನಿಯೋಜಿಸಿದ ಸಿಬ್ಬಂದಿ ಗಳಿಗೆ ನಿಯಮಾನುಸಾರ ವೇತನ ಮತ್ತು ಅದಕ್ಕೆ ಅನುಗುಣವಾಗಿ ಪಿ.ಎಫ್ ಮತ್ತು ಇಎಸ್‌ಐ ಪಾವತಿಸಲು ಹಾಗೂ ಬಯೋಮೇಟ್ರಿಕ್ ಮುಖಾಂತರ ಹಾಜರಾತಿಯನ್ನು ಖಚಿತ ಪಡಿಸಲು ತಿಳಿಸಿದರು.

ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯವರು ಕೂಡಲೇ ಮಲ್ಪೆ ಬಂದರಿನಲ್ಲಿ ಅಗತ್ಯವಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಹಾಗೂ ಸಿಸಿಟಿವಿಗಳನ್ನು ಆದ್ಯತೆ ಮೇರೆಗೆ ಅನುಷ್ಟಾನಗೊಳಿಸಬೇಕೆಂದರು.

ಮಲ್ಪೆ ಮೀನುಗಾರಿಕೆ ಬಂದರಿನ ಗುತ್ತಿಗೆದಾರರು ಬಂದರಿನ ಸಮಗ್ರ ನಿರ್ವಹಣೆ ಮತ್ತು ಶುಚಿತ್ವವನ್ನು ಕಾಪಾಡಲು ಕೂಡಲೇ ಅಗತ್ಯ ಸಿಬ್ಬಂದಿಯನ್ನು ನೇಮಿಸದಿದ್ದಲ್ಲಿ ಗುತ್ತಿಗೆಯನ್ನು ರದ್ದು ಪಡಿಸಿ ಗುತ್ತಿಗೆದಾರರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದೆಂದು ಜಿಲ್ಲಾದಿಕಾರಿಗಳು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ವಿವೇಕ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಖಾದ್ರಿ ಮತ್ತಿತರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News